ವರ್ಷಾಂತ್ಯಕ್ಕೆ ಬೆಂಗಳೂರಿನಲ್ಲಿ ಗೊಂದಲಿಗರ ಬೃಹತ್ ಸಮಾವೇಶ-ಡಾ.ಕೆ.ಎಂ.ಜಯರಾಮಯ್ಯ

ಹೊಸಪೇಟೆ

    ಹಲವು ಸ್ತರದಲ್ಲಿ ಸಾಕಷ್ಟು ಹಿಂದುಳಿದಿರುವ ಗೋಂಧಳಿ, ಬುಡಬುಡಿಕೆ, ಜೋಷಿ ಮತ್ತು ವಾಸುದೇವ ಜನಾಂಗವನ್ನು ಸಂಘಟಿಸಲು ಬೆಂಗಳೂರಿನಲ್ಲಿ ಇದೇ ವರ್ಷಾಂತ್ಯಕ್ಕೆ ಬೃಹತ್ ಸವಾವೇಶ ಹಮ್ಮಿಕೊಳ್ಳಲಾಗುವುದು ಎಂದು ಅಖಂಡ ಕರ್ನಾಟಕ ಗೋಂಧಳಿ ಸಮಾಜ ಸಂಘದ ರಾಜ್ಯಾಧ್ಯಕ್ಷ ಡಾ.ಕೆ.ಎಂ.ಜಯರಾಮಯ್ಯ ಹೇಳಿದರು.

      ಹೊಸಪೇಟೆಯ ಶ್ರೀಗಂಗಾಪರಮೇಶ್ವರಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಮುದಾಯದ ಜನರು ಇಂದಿಗೂ ತಮ್ಮ ಕುಟುಂಬ ನಿರ್ವಹಣೆಗೆ ಮಕ್ಕಳನ್ನು ಕೆಲಸಕ್ಕೆ ಕಳುಹಿಸುತ್ತಿದ್ದಾರೆ. ಮಕ್ಕಳನ್ನು ಶಾಲೆಗೆ ಕಳುಹಿಸಿ ಸುಶೀಕ್ಷಿತರನ್ನಾಗಿ ಮಾಡಬೇಕು.

      ಸರ್ಕಾರ ನಡೆಸುವ ವಸತಿ ನಿಲಯಗಳಲ್ಲಿ ಮಕ್ಕಳನ್ನು ಬೆಳೆಸಬೇಕು. ವೀರಶೈವ ಮತ್ತು ಒಕ್ಕಲಿಗ ಮಠಗಳಾದ ಸಿದ್ಧಗಂಗಾ ಮಠ, ಆದಿಚುಂಚನಿಗಿರಿ ಮಠ ಮತ್ತು ಸುತ್ತೂರು ಮಠಗಳು ನಡೆಸುವ ಶೈಕ್ಷಣಿಕ ಸಂಸ್ಥೆಗಳಲ್ಲಿ ತಮ್ಮ ಮಕ್ಕಳನ್ನು ಸೇರಿಸಿ ಶಿಕ್ಷಿತರನ್ನಾಗಿ ಮಾಡಬೇಕೆಂದರು. ಕೆಎಎಸ್, ಐಎಎಸ್ ಮಾಡುವ ವಿದ್ಯಾರ್ಥಿಗಳಿಗೆ ದೇವರಾಜ ಅರಸು ಹಿಂದುಳಿದ ವರ್ಗಗಳ ನಿಗಮದಿಂದ ಸಿಗುವ ಸಾಲ ಸೌಲಭ್ಯ ಪಡೆಯಬೇಕು.

     ಸ್ವಯಂ ಉದ್ಯೋಗ ಮಾಡುವವರು ರುಡ್‍ಸೆಟ್ ನಂತಹ ಕೇಂದ್ರಗಳಲ್ಲಿ ತರಬೇತಿ ಪಡೆದು ಆರ್ಥಿಕವಾಗಿ ಸಬಲರಾಗಬೇಕು. ಮೀಸಲಾತಿಯಡಿ ಸಾಲ ಪಡೆಯುವುದು ಭಿಕ್ಷೆಯಲ್ಲ. ಅದೊಂದು ಹಕ್ಕು. ಹೀಗಾಗಿ ಇದೇ ಜುಲೈ 12ರೊಳಗೆ ಅರ್ಜಿಗಳನ್ನು ಸಲ್ಲಿ ಶೈಕ್ಷಣಿಕ ಹಾಗೂ ಸ್ವಯಂ ಉದ್ಯೋಗಕ್ಕೆ ನೆರವು ಪಡೆಯಬೇಕು. ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡಲು ಇಚ್ಛಿಸುವ ಸಮುದಾಯದ ವಿದ್ಯಾರ್ಥಿಗಳು ಹಿಂದುಳಿದ ವರ್ಗಗಳ ನಿಗಮದಿಂದ ರೂ.10 ಲಕ್ಷ ಪಡೆಯಲು ಅವಕಾಶವಿದೆ ಎಂದು ಮಾಹಿತಿ ನೀಡಿದರು.

      ಸಂಘದ ರಾಜ್ಯ ಕಾರ್ಯದರ್ಶಿ ಗೋಪಾಲ್ ಗೋಂಧಳಿ ಮಾತನಾಡಿ, ನಮ್ಮ ಸಮುದಾಯ ಇಂದಿಗೂ ಆರ್ಥಿಕವಾಗಿ ತೀರಾ ಹಿಂದುಳಿದಿದೆ. ಸಂಘಟನೆ ಬಲಗೊಂಡಾಗ ಮಾತ್ರ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಸಾಧ್ಯ. ಜನರು ಇಂದಿಗೂ ಬಡತನ, ಹಸಿವಿನಿಂದ ನರಳುತ್ತಿದ್ದಾರೆ. ಅನೇಕರು ಸೂರುಗಳಿಲ್ಲದೇ ಭಿಕ್ಷಾಟನೆ ಮಾಡಿ ಜೀವಿಸುತ್ತಿದ್ದಾರೆ. ಭಾಂಡೆ, ಬುಡಬುಡಿಕೆ ನುಡಿಸುವ ಮೂಲಕ ಬಡತನ ರೇಖೆಗಿಂತಲೂ ಕಡಿಮೆ ಜೀವನ ನಡೆಸುತ್ತಿದ್ದಾರೆ. ಇಂಥವರಿಗೆ ಮುಂದುವರಿದ ಜನಾಂಗದವರು ಪ್ರೋತ್ಸಾಹ ನೀಡಬೇಕು. ಸರ್ಕಾರದಿಂದಲೂ ಸೌಲಭ್ಯಗಳು ಸಿಗುವಂತಾಗಬೇಕು ಎಂದರು.

        ಉಪನ್ಯಾಸಕ ಅನಿಲ್ ಕುಮಾರ್ ಭೋರಾತ್ ಮಾತನಾಡಿ, ಹರಿದಾಸರ ಕಾಲದಿಂದಲೂ ಗೊಂದಲಿಗರ ಕಲೆ ಇದೆ. ಬುಡಬುಡಿಕೆ ನುಡಿಸುವವರ ವಾಣಿ ದಾಸ ಸಾಹಿತ್ಯದಂತಯೇ ಇದೆ. ಅದನ್ನು ದಾಖಲಿಸುವ ಕೆಲಸವಾಗಿಲ್ಲ. ಹೀಗಾಗಿ ಗೊಂದಲಿಗರಿಗೆ ಸಮಾಜದಲ್ಲಿ ಮಾನ್ಯತೆ ಇಲ್ಲದಂತಾಗಿದೆ. ಇಂದಿನ ತಲೆಮಾರಿನ ಯುವಕರು ಅದೆಷ್ಟೇ ವ್ಯಾಸಂಗ ಮಾಡಿ ಪದವಿ ಪಡೆದರೂ ಉದ್ಯೋಗಾವಕಾಶಗಳು ಲಭಿಸುತ್ತಿಲ್ಲ. 

       ಉದ್ಯೋಗಗಳು ದೊರೆತರೂ ಶೋಷಣೆಗೆ ಒಳಗಾಗಿ ಉದ್ಯೋಗಗಳಿಂದ ವಂಚಿತರಾಗುತ್ತಿದ್ದಾರೆ ಎಂದರು. ಅಂಜಿನಪ್ಪ ಗೋಗರೆ ಮಾತನಾಡಿ, ಜನಾಂಗವನ್ನು ಸಂಘಟಿಸುವವರಿಗೆ ಆರ್ಥಿಕ ನೆರವು ನೀಡಬೇಕು. ಮಕ್ಕಳನ್ನು ಶಾಲೆಗೆ ಕಳುಹಿಸಿ ಶಿಕ್ಷಣವಂತರನ್ನಾಗಿ ಮಾಡಬೇಕು. ಸಮಾಜದಲ್ಲಿನ ಆಂತರಿಕ ದ್ವೇಷ, ಅಸೂಯೆ, ಮಾತ್ಸರ್ಯಗಳಿಂದ ನಾವು ಮುಕ್ತರಾದಾಗ ಮಾತ್ರ ಸಾಮಾಜಿಕ ಮುಖ್ಯವಾಹಿನಿಗೆ ಬರಲು ಸಾಧ್ಯ ಎಂದರು.

      ಅಖಂಡ ಕರ್ನಾಟಕ ಗೋಂಧಳಿ ಸಮಾಜ ಸಂಘದ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ದೀಪಾ ಭೋರಾತ್, ಸಮುದಾಯದ ಮುಖಂಡರಾದ ಪರಶುರಾಮ ಭೋರಾತ್, ಧನಂಜಯ ನಾಯ್ಕಲ್, ಫಕ್ಕಿರಪ್ಪ ನಾಯ್ಕಲ್, ಹನುಮಂತರೆಡ್ಡಿ ಮೊರಬ, ಶಿವಾಜಿ ಪಾರಗೆ, ಗುರುಪಾದಪ್ಪ ಪಾರಗೆ, ಕೃಷ್ಣ ಗೋಗರೆ, ಹನುಮಂತಪ್ಪ ಪಾಚಂಗೆ ಇನ್ನಿತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link