ವೀರಶೈವ ಮಹಾಸಭಾ ಕಟ್ಟಡ ಕಟ್ಟಲಿಕ್ಕೆ ಸೀಮಿತ

ದಾವಣಗೆರೆ:

   ನೂರಾ ನಾಲ್ಕು ವರ್ಷಗಳ ಇತಿಹಾಸವಿರುವ ವೀರಶೈವ ಮಹಾಸಭಾ ಸಮಾಜದವರ ಒಳಿತಿಗೆ ಏನೂ ಮಾಡಲಿಲ್ಲ. ಬದಲಿಗೆ ಕೇವಲ ಕಟ್ಟಡ ಕಟ್ಟಲು ಮಾತ್ರ ಸೀಮಿತವಾಗಿದೆ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಜಿ.ಬಿ. ಪಾಟೀಲ ಟೀಕಿಸಿದರು.

    ನಗರದ ಕುವೆಂಪು ಕನ್ನಡ ಭವನದಲ್ಲಿ ನಡೆದ ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಉದ್ಘಾಟನಾ ಸಮಾರಂಭ ಹಾಗೂ ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ಹೋರಾಟ ಆರಂಭಿಸಿದಾಗ, 104 ವರ್ಷಗಳ ಇತಿಹಾಸವಿರುವ ವೀರಶೈವ ಮಹಾಸಭಾದ ಇರುವಾಗ ಇದರ ಅಗತ್ಯ ಇದೆಯೇ ಎಂಬ ಪ್ರಶ್ನೆ ಎದುರಾಗಿತ್ತು.

   ಆದರೆ ಇಷ್ಟು ವರ್ಷಗಳಿಂದ ವೀರಶೈವ ಮಹಾಸಭಾ ಸಮಾಜಕ್ಕೆ ಏನೂ ಮಾಡಲಿಲ್ಲ. ಬದಲಿಗೆ ಕೇವಲ ಕಟ್ಟಡಗಳನ್ನು ಕಟ್ಟಲು ಮಾತ್ರ ಸೀಮಿತವಾಗಿತ್ತು. ಆದ್ದರಿಂದ ಮುಂದಿನ ಪೀಳಿಗೆಯ ಭವಿಷ್ಯಕ್ಕಾಗಿ ಈ ಚಳವಳಿ ಆರಂಭಿಸಿದೇವು ಎಂದು ಹೇಳಿದರು.

     ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ಕೇಳುವವವರು ಧರ್ಮ ಒಡೆದವರು ಎಂಬುದಾಗಿ ಕೆಲವರು ಹೇಳುತ್ತಾರೆ. ಹಾಗಾದರೆ, ಸ್ಥಾವರ ಲಿಂಗವನ್ನು ತ್ಯಜಿಸಿ ಇಷ್ಟಲಿಂಗಕ್ಕೆ ಬಂದ ಬಸವಣ್ಣ ವೈದಿಕ ಧರ್ಮ ಒಡೆದು, ಲಿಂಗಾಯತ ಧರ್ಮ ಸ್ಥಾಪಿಸಲಿಲ್ಲವೇ?. ನಾವು ಸಹ ಬಸವಣ್ಣನವರ ಹಾದಿಯಲ್ಲೇ ಸಾಗುತ್ತಿದ್ದೇವೆ ಎಂದರು.

     ಜೈನರು, ಬೌದ್ಧರು, ಸಿಖ್ಖರು ಪ್ರತ್ಯೇಕ ಧರ್ಮ ಮಾನ್ಯತೆ ಪಡೆದುಕೊಂಡಿರುವಾಗ ಲಿಂಗಾಯತರು ಮಾತ್ರ ಧರ್ಮ ಒಡೆದವರು ಹೇಗಾಗುತ್ತಾರೆ? ಎಂದು ಪ್ರಶ್ನಿಸಿದ ಅವರು, ಇಷ್ಟಲಿಂಗ ಬಸವಣ್ಣ ಕೊಟ್ಟಿದ್ದು, ಇಷ್ಟಲಿಂಗ ಹಿಡಿದವರೇ ಇಂದು ಲಿಂಗಾಯತರು, ಹಾಗಾದರೆ, ನವು ಹೇಗೆ ಧರ್ಮ ಒಡೆದವರಾಗುತ್ತೇವೆಂದು ಮರು ಪ್ರಶ್ನೆ ಹಾಕಿದರು.

     ಕೇಂದ್ರ ಸರ್ಕಾರಕ್ಕೆ ನಾಲ್ಕು ಬಾರಿ ಮನವಿ ಸಲ್ಲಿಸಿದರೂ ಅದರ ಅರ್ಜಿ ತಿರಸ್ಕಾರಗೊಂಡಿತ್ತು. ಇದಕ್ಕೆ ಕಾರಣ ಅದು ಲಿಂಗಾಯತ ಜಾತಿಗೆ ಪ್ರತ್ಯೇಕ ಕಾಲಂ ನೀಡಿ ಎಂದು ಕೋರಿತ್ತೇ ಹೊರತು, ಪ್ರತ್ಯೇಕ ಧರ್ಮ ಎಂದು ಎಲ್ಲೂ ಉಲ್ಲೇಖಿಸಿರಲಿಲ್ಲ. ವೀರಶೈವ ಮಹಾಸಭಾದಿಂದ ಶೈವರಿಗೆ ಸ್ಥಾನಮಾನ ಕೇಳಿದ್ದರು. ಶೈವ ಹಿಂದೂ ಧರ್ಮದ ಭಾಗವಾದ ಕಾರಣ ಪ್ರತ್ಯೇಕ ಕಾಲಂ ಸಾಧ್ಯವಿಲ್ಲ ಎಂದು ಅರ್ಜಿ ತಿರಸ್ಕಾರಗೊಂಡಿತ್ತು. ಲಿಂಗಾಯತ ಧರ್ಮಕ್ಕೆ ಮಾನ್ಯತೆ ಸಿಕ್ಕರೆ ಮುಂದಿನ ಪೀಳಿಗೆಗೆ ಅನುಕೂಲ ಆಗುತ್ತದೆ. ಲಿಂಗಾಯತ ಎಂದು ನೀಡಿ ವೀರಶೈವ ಬೇಡ ಎಂದು ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ ಎಂದು ಅವರು ಆರೋಪಿಸಿದರು.

      ಸಾನಿಧ್ಯ ವಹಿಸಿದ್ದ ಸಾಣೇಹಳ್ಳಿಯ ಶ್ರೀಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಅರಿವು ಆಚಾರಗಳ ಸಂಗಮವೇ ಲಿಂಗಾಯತ ಧರ್ಮವಾಗಿದೆ. ಆದರೆ, ಇಂದು ಅರಿವಿದ್ದರೆ ಆಚಾರವಿಲ್ಲ. ಆಚಾರವಿದ್ದರೆ ಅರಿವಿಲ್ಲ. ಇಂತಹ ಸ್ಥಿತಿಗೆ ಸಮಾಜ ಬಂದಿರುವುದು ವಿಷಾದನೀಯ ಎಂದು ಬೇಸರ ವ್ಯಕ್ತಪಡಿಸಿದರು.

       ಕೂಡಲ ಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಶ್ರೀಬಸವ ಜಯಮೃತ್ಯುಂಜಯ ಸ್ವಾಮೀಜಿ, ಒಂದು ಕಾಲದಲ್ಲಿ ದಾವಣಗೆರೆಯಲ್ಲಿ ತೆಗೆದುಕೊಂಡ ನಿರ್ಣಯ ರಾಜ್ಯದ ತೀರ್ಮಾನವಾಗುತ್ತಿತ್ತು. ಮತ್ತೆ ಅಂತಹ ದಿನ ಬರಬೇಕಾಗಿದೆ ಎಂದು ಆಶಯ ವ್ಯಕ್ತಪಡಿಸಿದರು.

      ಪ್ರಸ್ತುತ ನಮ್ಮ ಮೂಲ ಅಸ್ಮಿತೆ ಕಳೆದು ಕೊಳ್ಳುವ ಕಾಲಘಟ್ಟದಲ್ಲಿದ್ದೇವೆ. ಲಿಂಗಾಯತ ಧರ್ಮದ ಚಳವಳಿ ಮುಂದುವರಿಸದಿದ್ದರೆ, ನಮ್ಮ ವಿನಾಶ ಆಗಲಿದೆ. ನಮ್ಮ ಧರ್ಮಕ್ಕೆ ಪ್ರತ್ಯೇಕ ಗುರು, ದೇವರು ಇಷ್ಟಲಿಂಗ ಇರುವಾಗ ಬೇರೆ ಧರ್ಮದ ಗುಲಾಮರಾಗುವ ಅಗತ್ಯವಿಲ್ಲ. ಲಿಂಗಾಯತ ಧರ್ಮ ಹೋರಾಟದ ಬಗ್ಗೆ ಅಪಪ್ರಚಾರ ನಡೆಯುತ್ತಿದ್ದರೂ ಎದೆಗುಂದಬೇಕಿಲ್ಲ. ಸೂರ್ಯ, ಚಂದ್ರ ಇರುವವರೆಗೂ ಲಿಂಗಾಯತ ಧರ್ಮ ತನ್ನ ಅಸ್ತಿತ್ವ ಉಳಿಸಿಕೊಳ್ಳಲಿದೆ. ಪಲ್ಲಕ್ಕಿಯಲ್ಲಿ ಕುಳಿತವರು ಧರ್ಮದ ಬಗ್ಗೆ ಗೊಂದಲ ಮೂಡಿಸುತ್ತಿದ್ದಾರೆಂದು ಪಂಚಪೀಠಗಳ ವಿರುದ್ಧ ಹರಿಹಾಯ್ದರು.

      ರಾಷ್ಟ್ರಪ್ರೇಮದ ಹೆಸರಿನಲ್ಲಿ ನಮ್ಮ ಮೂಲ ಅಸ್ಮಿತೆ ನಾಶವಾಗುತ್ತಿದೆ. ಬಸವ ಜಯಂತಿ ಮಾಡುತ್ತಿದ್ದ ಯುವಕರು ಇಂದು ಶ್ರೀರಾಮ ನವಮಿ ಆಚರಿಸುವ ಮಟ್ಟಕ್ಕೆ ಬಂದಿರುವುದು ವಿಷಾದನೀಯ ಎಂದು ಆತಂಕ ವ್ಯಕ್ತಪಡಿಸಿದರು.

      ಪಾಂಡೋಮಟ್ಟಿ ವಿರಕ್ತಮಠದ ಗುರುಬಸವ ಸ್ವಾಮೀಜಿ, ಯಾರೂ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಒತ್ತು ನೀಡಿ. ಅದನ್ನು ಒಪ್ಪಿಕೊಳ್ಳುತ್ತಾರೋ ಅವರು ಲಿಂಗಾಯತ ಧರ್ಮದ ಅನುಯಾಯಿಗಳಾಗಲಿದ್ದಾರೆ. ಇಲ್ಲಿ ದ್ವಂದ್ವ ಆಗಬಾರದು. ಧರ್ಮದ ಬಗ್ಗೆ ಜಾಗೃತಿ, ಸ್ವಾಭಿಮಾನ ಇರಬೇಕು. 800 ವರ್ಷಗಳ ಹಿಂದೆಯೇ ಲಿಂಗಾಯತ ಧರ್ಮದ ಉದಯವಾಗಿದೆ. ನಮಗೆ ಈಗ ಬೇಕಿರುವುದು ಕೇವಲ ಸಾಂವಿಧಾನಿಕ ಮಾನ್ಯತೆ ಮಾತ್ರ ಎಂದರು.

      ವಿರಕ್ತಮಠದ ಶ್ರೀಬಸವಪ್ರಭು ಸ್ವಾಮೀಜಿ ಮಾತನಾಡಿ, ಲಿಂಗಾಯತ ಧರ್ಮ ಜಾತ್ಯತೀತ ಧರ್ಮವಾಗಿದೆ. ಎಲ್ಲ ಶೋಷಿತ ಸಮುದಾಯಗಳನ್ನು ಒಳಗೊಂಡಿರುವುದೇ ಲಿಂಗಾಯತ ಧರ್ಮದ ಸಾರವಾಗಿದೆ. ಎಲ್ಲರೂ ದೀನ, ದಲಿತರು. ಸರ್ವರೂ ಸಮಾನರು ಎಂಬುದನ್ನು ಬಸವಣ್ಣನವರು ಪ್ರತಿಪಾದಿಸಿದರು. ಇಂದು ಬಸವತತ್ವ ಕೇವಲ ಬೋಧನೆ ಆಗುತ್ತದೆಯೇ ವಿನಾ ಅನುಷ್ಠಾನಕ್ಕೆ ಬರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

      ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಶಿವಕುಮಾರ್, ವಿವಿಧ ಸಂಘಟನೆಗಳ ಮುಖಂಡರಾದ ವಿ. ಸಿದ್ದರಾಮಣ್ಣ, ಮಹಾಂತೇಶ ಅಗಡಿ, ಎಂ. ನಾಗಬಸಪ್ಪ, ಕೆ.ಎಸ್. ಗೋವಿಂದರಾಜ್, ಬಾಡದ ಆನಂದರಾಜ್, ಚಿಕ್ಕೋಳ್ ಈಶ್ವರಪ್ಪ, ಸುಜಾತಾ ರವೀಂದ್ರ, ದೇವಿಗೆರೆ ವೀರಭದ್ರಪ್ಪ, ಚಿದಾನಂದಪ್ಪ, ಅಜ್ಜಂಪುಶೆಟ್ರು ಶಂಭುಲಿಂಗಪ್ಪ, ಉಮೇಶ ಆವರಗೆರೆ ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap