ಬಳ್ಳಾರಿ
ಲೋಕಸಭಾ ಚುನಾವಣೆ-2019ರ ಹಿನ್ನೆಲೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸುವ ಮತ್ತು ಎಲ್ಲರು ಪ್ರಜಾಪ್ರಭುತ್ವದ ಈ ಹಬ್ಬದಲ್ಲಿ ಉತ್ಸಾಹದಿಂದ ಭಾಗವಹಿಸಬೇಕು ಎಂಬ ಸದುದ್ದೇಶದಿಂದ ಬಳ್ಳಾರಿ ನಗರ ಕ್ಷೇತ್ರದ ವ್ಯಾಪ್ತಿಯಲ್ಲಿ ಸಹಾಯಕ ಚುನಾವಣಾಧಿಕಾರಿಗಳು ಹಾಗೂ ಮಹಾನಗರ ಪಾಲಿಕೆ ಆಯುಕ್ತರಾದ ತುಷಾರಮಣಿ ಅವರು ಗ್ಯಾಸ್ ಸಿಲಿಂಡರ್‍ಗಳಿಗೆ ತಪ್ಪದೇ ಮತದಾನ ಮಾಡಿ ಎಂಬ ಸಂದೇಶ ಸಾರುವ ಸ್ಟೀಕ್ಕರ್‍ಗಳನ್ನು ಅಂಟಿಸುವುದರ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ.
ನಗರದಲ್ಲಿ ಬುಧವಾರ ಭಾರತಗ್ಯಾಸ್ ಏಜೆನ್ಸಿಗಳ ಗ್ಯಾಸ್ ಸಿಲಿಂಡರ್‍ಗಳಿಗೆ ಸ್ಟೀಕ್ಕರ್ ಲಗತ್ತಿಸಿದ ಅವರು ಇನ್ನೂ ಎರಡು ದಿನಗಳಲ್ಲಿ ಉಳಿದ ಗ್ಯಾಸ್ ಏಜೆನ್ಸಿಗಳ ಸಿಲಿಂಡರ್‍ಗಳಿಗೆ ತಪ್ಪದೇ ವೋಟ್ ಮಾಡಿ ಎಂಬ ಸಂದೇಶವಿರುವ ಸ್ಟೀಕ್ಕರ್ ಲಗತ್ತಿಸಲಾಗುವುದು ಎಂದು ಅವರು ತಿಳಿಸಿದರು.
ಸ್ವೀಪ್ ಸಮಿತಿ ಈಗಾಗಲೇ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಮತದಾರರಲ್ಲಿ ಮತದಾನದ ಮಹತ್ವದ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದು, ಅದರಲ್ಲಿ ಈ ಕಾರ್ಯಕ್ರಮವು ಒಂದು ಎಂದು ಅವರು ಹೇಳಿದರು. ಈ ಬಾರಿಯ ಚುನಾವಣೆಯಲ್ಲಿ ಮತದಾನದ ಶೇಕಡಾವಾರು ಪ್ರಮಾಣ ಹೆಚ್ಚಾಗಲಿದೆ ಎಂಬ ಆಶಾಭಾವನೆಯನ್ನು ಅವರು ವ್ಯಕ್ತಪಡಿಸಿದರು.