ಹುಳಿಯಾರು:
ಹುಳಿಯಾರು ಪಟ್ಟಣ ಪಂಚಾಯ್ತಿಯ ಸರಿಸುಮಾರು ಇಪ್ಪತ್ತು ಸಾವಿರ ಜನಸಂಖ್ಯೆಗೆ ಕೇವಲ ಮೂರೇ ಮೂರು ನೀರಿನ ಘಟಕಗಳು ಶುದ್ಧ ನೀರು ಪೂರೈಸುತ್ತಿವೆ. ಅದರಲ್ಲೂ ಧರ್ಮಸ್ಥಳ ಸಂಸ್ಥೆಯ ನೀರಿನ ಘಟಕ ಸ್ಥಾಪನೆಯಾದ 2 ವರ್ಷಗಳಿಂದ ಯಾವುದೇ ತೊಂದರೆಯಿಲ್ಲದೆ ಪಟ್ಟಣದ ಜನರಿಗೆ ನೀರು ಪೂರೈಸುತ್ತಿದೆ. ಉಳಿದವಿಂದ ಮೂರ್ನಾಲ್ಕು ತಿಂಗಳಿಗೊಮ್ಮೆ ಏನಾದರೊಂದು ಸಮಸ್ಯೆಯ ನೆನಪದಿಂದ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತದೆ.
ಹುಳಿಯಾರು ಪಟ್ಟಣಕ್ಕೆ ಶುದ್ಧ ಕುಡಿಯುವ ನೀರು ಪೂರೈಸುವ ಸಲುವಾಗಿ ನಾಲ್ಕೈದು ವರ್ಷಗಳ ಹಿಂದೆ ಡಾ.ವಾಟರ್ ಸಂಸ್ಥೆಯಿಂದ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಯಿತು. ಅಲ್ಲಿಂದ ಇಲ್ಲಿಯವರೆವಿಗೆ ಶಾಸಕರ ನಿಧಿ, ಸಂಸದರ ನಿಧಿ, ಗ್ರಾಮೀಣ ಕುಡಿಯುವ ನೀರು ಯೋಜನೆ ಸೇರಿದಂತೆ 10 ಶುದ್ಧ ಕುಡಿಯುವ ನೀರಿನ ಘಟಕಗಳು ಸ್ಥಾಪನೆಗೊಂಡಿವೆ. ಆದರೆ ನೀರಿನ ಘಟಕಗಳ ನಿರ್ವಹಣೆ ಸಂಪೂರ್ಣ ವಿಫಲವಾಗಿ ಕೆಲವರು ಪಕ್ಕದ ಊರಿನ ಘಟಕಗಳಿಂದ ನೀರು ತಂದರೆ ಕೆಲವರು ಫ್ಲೋರೈಡ್ ಯುಕ್ತ ನೀರನ್ನೇ ಕುಡಿಯುವ ಪರಿಸ್ಥಿತಿ ತಲೆದೋರಿದೆ.
ಹುಳಿಯಾರಿನ ನಾಡಕಛೇರಿ ಬಳಿಯ ಸರ್ಕಾರದ ನೀರಿನ ಘಟಕ, ಪೊಲೀಸ್ ಠಾಣೆ ಪಕ್ಕದ ಡಾ.ವಾಟರ್ ಘಟಕ ಹಾಗೂ ಪಂಚಾಯ್ತಿ ಕಛೇರಿ ಬಳಿಯ ಧರ್ಮಸ್ಥಳ ಸಂಸ್ಥೆಯ ಘಟಕಗಳನ್ನು ಬಿಟ್ಟರೆ ಉಳಿದ ನೀರಿನ ಘಟಕಗಳು ಆಗಾಗ ಕೆಡುತ್ತಿರುತ್ತವೆ. ಕೆಟ್ಟು ತಿಂಗಳಾದರೂ ದುರಸ್ತಿ ಮಾಡದೆ ನಿರ್ಲಕ್ಷಿಸುವ ಪರಿಣಾಮ ಜನ ಶುದ್ಧ ನೀರಿಗಾಗಿ ಘಟಕಗಳಿಂದ ಘಟಕಗಳಿಗೆ ಅಲೆಯುತ್ತಾರೆ. ಕೆಲವೊಮ್ಮೆ ಕೆಲಸ ಕಾರ್ಯ ಬಿಟ್ಟು ಸರತಿ ಸಾಲಿನಲ್ಲಿ ನಿಲ್ಲುವ ಅನಿವಾರ್ಯತೆಯೂ ಸೃಷ್ಠಿಯಾಗುತ್ತದೆ.
ಈ ಬಗ್ಗೆ ಪಂಚಾಯ್ತಿ ಅಧಿಕಾರಿಗಳಿಗೆ ದೂರು ನೀಡಿದರೆ ಘಟಕಗಳ ಮೇಲ್ವಿಚಾರಣೆಯ ಹೊಣೆ ಹೊತ್ತವರ ಕಡೆ ಬೆರಳು ಮಾಡುತ್ತಾರೆ. ತಾಲೂಕು ಕುಡಿಯುವ ನೀರಿನ ಎಂಜಿನಿಯರ್ ಅವರಿಗೆ ಕರೆ ಮಾಡಿದರೆ ಸ್ವಿಚ್ ಆಫ್ ಎಂದು ಬರುತ್ತದೆ. ನಿರ್ವಹಣೆ ಹೊತ್ತ ಗುತ್ತಿಗೆದಾರರಿಗೆ ದೂರವಾಣಿ ಮೂಲಕ ಸಮಸ್ಯೆ ತಿಳಿಸಿದರೂ ಸ್ಪಂಧಿಸುವುದಿಲ್ಲ. ಒಟ್ಟಾರೆ ಯಾರೊಬ್ಬರೂ ದುರಸ್ತಿಯ ಕಡೆ ಗಮನ ಹರಿಸುವುದಿಲ್ಲ ಎನ್ನುವುದು ಸ್ಥಳಿಯ ನಿವಾಸಿಗಳ ದೂರಾಗಿದೆ.
ಕೆಂಕೆರೆ ರಸ್ತೆಯ ಬಿಎಂಎಸ್ ಪಕ್ಕದ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ಇಲ್ಲಿಗೆ ವರ್ಷ ಕಳೆದಿದ್ದರೂ ಯಾರೂ ತಿರುಗಿ ನೋಡದ ಪರಿಣಾಮ ಈ ನೀರನ್ನು ಅವಲಂಭಿಸಿದ್ದ ವೈ.ಎಸ್.ಪಾಳ್ಯ, ಲಿಂಗಪ್ಪನಪಾಳ್ಯ, ಕೋಡಿಪಾಳ್ಯದ ನಿವಾಸಿಗಳು ಅಕ್ಷರಶಃ ಶುದ್ಧ ನೀರಿಗೆ ಪರದಾಡುತ್ತಿದ್ದಾರೆ. ಬೈಕ್ ಇರುವವರು ಅಕ್ಕಪಕ್ಕದ ಪಂಚಾಯ್ತಿಯ ನೀರಿನ ಘಟಕಗಳಿಂದ ನೀರು ತಂದರೆ ಬೈಕ್ ಇಲ್ಲದವರು ಕೊಳವೆ ಬಾವಿಯ ನೀರು ಕುಡಿಯುತ್ತಿದ್ದಾರೆ.
ಇನ್ನು ದುರ್ಗಾಪರಮೇಶ್ವರಿ ದೇವಾಲಯದ ಆವರಣದಲ್ಲಿರುವ ಘಟಕ ನೀರು ಸರಬರಾಜು ಮಾಡಿದಕ್ಕಿಂತ ಕೆಟ್ಟಿದ್ದೇ ಹೆಚ್ಚು. ಪ್ರಸ್ತುತ ಈ ಘಟಕ ಕೆಟ್ಟಿದ್ದರೂ ದುರಸ್ತಿಗೆ ಇನ್ನೂ ಮುಂದಾಗಿಲ್ಲ. ಎಪಿಎಂಸಿ ಆವರಣದಲ್ಲಿನ ಘಟಕದ ಪೂರ್ಣ ಕಾಮಗಾರಿ ಮುಗಿದಿದ್ದರೂ ನೀರು ಪೂರೈಸದೆ ಇನ್ನೂ ಘಟಕ ಆರಂಭವಾದೆ ಲಕ್ಷಾಂತರ ರೂ. ವ್ಯರ್ಥವಾಗಿದೆ. ವೈ.ಎಸ್.ಪಾಳ್ಯದ ಘಟಕವೂ ಸಹ ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಇನ್ನೂ ಆರಂಭವಾದೆ ಅರ್ಧಕ್ಕೆ ನಿಂತಿದೆ.
ಒಟ್ಟಾರೆ ಗ್ರಾಮೀಣ ಜನರಿಗೆ ಶುದ್ದ ಕುಡಿಯುವ ಸರಬರಾಜು ಮಾಡುವ ಉದ್ದೇಶದಿಂದ ಸರಕಾರ ಲಕ್ಷಾಂತರರೂಗಳ ಅನುದಾನ ಬಿಡುಗಡೆ ಮಾಡಿ ಶುದ್ದ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪನೆ ಮಾಡಿದೆ. ಆದರೆ ನಿರ್ವಹಣೆ ಕೊರತೆಯಿಂದ ಕುಡಿಯುವ ನೀರಿನ ಘಟಕಗಳು ಕೈಕೊಡುತ್ತಿದೆ. ತಿಂಗಳಾದರೂ ದುರಸ್ತಿ ಮಾಡಲು ಮುಂದಾಗುವುದಿಲ್ಲ. ಪರಿಣಾಮ 10 ಘಟಕಗಳಿದ್ದು ಕೋಟಿಗಟ್ಟಲೆ ಹಣ ವ್ಯಯವಾಗಿದ್ದರೂ ಹುಳಿಯಾರು ಪಟ್ಟಣದ ಜನ ಇನ್ನೂ ಪ್ಲೂರೈಡ್ ನೀರು ಕುಡಿಯುವ ಕರ್ಮದಿಂದ ಮುಕ್ತಿ ಸಿಕ್ಕಿಲ್ಲ.