ನೀರಾವರಿ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಸರ್ಕಾರ ಬದ್ದ : ಯಡಿಯೂರಪ್ಪ

ಚಿತ್ರದುರ್ಗ

    ರೈತ ದೇಶದ ಬೆನ್ನೆಲುಬು. ಅವರು ನೆಮ್ಮದಿಯಿಂದ ಜೀವನ ನಡೆಸುವಂತಾಗಬೇಕು. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಿದೆ. ನೀರಾವರಿ ಯೋಜನೆಗಳನ್ನು ತ್ವರಿತವಾಗಿ ಅನುಷ್ಠಾನ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

     ತಾಲ್ಲೂಕಿನ ಸಿರಿಗೆರೆ ಶ್ರೀ ತರಳುಬಾಳು ಬೃಹನ್ಮಠದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ 27ನೇ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ರಾಜ್ಯದ ರೈತರು ಸ್ವಾಭಿಮಾನದಿಂದ ಜೀವನ ನಡೆಸುವಂತಾಗಬೇಕು. ಈ ನಿಟ್ಟಿನಲ್ಲಿ ಮುಂದಿನ ಬಜೆಟ್‍ನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

    ರಾಜ್ಯದಲ್ಲಿ ಹಿಂದೆಂದೂ ಕೇಳಿ ಕಂಡರಿಯದಂತಹ ಭೀಕರ ಪ್ರವಾಹ ಉಂಟಾಗಿದೆ. ಮತ್ತೊಂದು ಕಡೆ ಬರದ ಛಾಯೆ ಆವರಿಸಿದೆ. ಹಾಗಾಗಿ ತುರ್ತು ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ 2500 ಕೋಟಿ ರೂ. ಬಿಡುಗಡೆ ಮಾಡಿದೆ. ಕೇಂದ್ರ ಸರ್ಕಾರದಿಂದಲೂ ಶೀಘ್ರ ಪರಿಹಾರದ ಹಣ ಬರಲಿದೆ.

     ರಾಜ್ಯದಲ್ಲಿ ನೆರೆ, ಬರ ಪರಿಹಾರ ಸೇರಿದಂತೆ ಅಗತ್ಯ ಅಭಿವೃದ್ಧಿ ಕೆಲಸಗಳನ್ನು ಮಾಡುವ ಮೂಲಕ ಮುಂದಿನ ಮೂರುವರೆ ವರ್ಷದಲ್ಲಿ ಮಾದರಿ ರಾಜ್ಯ ಮಾಡಲಾಗುವುದು ಎಂದು ಹೇಳಿದರು.

      ಸಿರಿಗೆರೆ ತರಳಬಾಳು ಬೃಹನ್ಮಠವು ಕಳೆದ ನಾಲ್ಕು ದಶಕಗಳಿಂದ ನಾಡಿನ ಶೈಕ್ಷಣಿಕ, ಸಾಮಾಜಿಕ ಪ್ರಗತಿಗಾಗಿ ಶ್ರಮಿಸುತ್ತಿದೆ. ಲಿಂಗೈಕ್ಯ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರಿಂದ ಶ್ರೀಮಠದ ಖ್ಯಾತಿ ಹೆಚ್ಚಾಯಿತು. ಶಿಕ್ಷಣದ ಮಹತ್ವ ಅರಿತಿದ್ದ ಅವರು ಸ್ವಾತಂತ್ರ್ಯ ಪೂರ್ವದಲ್ಲೇ ಸಿರಿಗೆರೆಯಲ್ಲಿ ಪ್ರೌಢಶಾಲೆ ಆರಂಭಿಸಿ ಶೈಕ್ಷಣಿಕ ಅಭಿವೃದ್ಧಿಗೆ ನಾಂದಿ ಹಾಡಿದರು. 1962 ರಲ್ಲಿ ತರಳಬಾಳು ವಿದ್ಯಾಸಂಸ್ಥೆ ಆರಂಭಿಸಿ 286 ಶಾಲಾ ಕಾಲೇಜುಗಳನ್ನು ತೆರೆದರು. ಇಂದಿಗೂ ಈ ಮಠ ಈ ಭಾಗದ ಜನರ ಬದುಕನ್ನು ನಿರ್ದೇಶಿಸುವ ದಿಕ್ಸೂಚಿಯಂತೆ ಕೆಲಸ ಮಾಡುತ್ತಿದೆ ಎಂದರು.

     ಮಠದ ಕೀರ್ತಿ ಶಿವಾಚಾರ್ಯ ಸ್ವಾಮೀಗಳ ಕಾಲದಿಂದ ಉತ್ತಮ ಕಾರ್ಯಗಳನ್ನು ಮಾಡುತ್ತ ಕೀರ್ತಿ ಗಳಿಸಿತು. 1946 ರಲ್ಲಿ ಶಿಕ್ಷಣ ಕೇಂದ್ರಗಳನ್ನು ತೆರೆದು ಅಡಿಪಾಯ ಹಾಕಿದರು. ಅಷ್ಟೇ ಅಲ್ಲದೆ ಸಹ ಪಂಕ್ತಿ ಬೋಜನ ಮಾಡಿ ಸಾಮರಸ್ಯ ಮೂಡಿಸಿದರು. ಶ್ರೀ ದೂರ ದೃಷ್ಟಿಯಿಂದ 286 ಸಂಸ್ಥೆಗಳಲ್ಲಿ ಅನ್ನದಾಸೋಹ ಕೂಡ ನಡೆಯುತ್ತಿದೆ. ಅಷ್ಟೇ ಅಲ್ಲದೆ ಇಲ್ಲಿನ ಕಾನೂನು ಪೀಠದಿಂದ ಜನರಿಗೆ ನ್ಯಾಯ ಕೋಟ್ಟು ಜಗತ್ತಿನ ಸದ್ಯದ ಹೆಸರು ಪಡೆದಿದೆ ಎಂದರು

     ಅತೀವೃಷ್ಟಿಗೆ ಮುಂದಿನ ಬಜೆಟ್‍ನಲ್ಲಿ ರೈತರ ಬೆಳೆಗೆ ಉತ್ತಮ ಬೆಲೆ. ನೀರಾವರಿ ಸೌಲಭ್ಯ ಸೇರಿದಂತೆ ಇತರೆ ಕಾರ್ಯಗಳನ್ನು ಮಾಡುತ್ತೆನೆ.ನಿಮ್ಮ ಹಾಗೂ ಜನರ ಆಶಿರ್ವಾದ ಇದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯವನ್ನು ಮಾದರಿ ರಾಜ್ಯವಾಗಿಮಾಡಲು ನಾನು ನನ್ನ ಸಹದ್ಯೋಗಿಗಳು ಸಿದ್ದರಿದ್ದೆವೆ ಎಂದು ತಿಳಿಸಿದರು

     ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಮಾತನಾಡಿ, ಶೋಷಿತ ವರ್ಗಗಳ ಅಭಿವೃದ್ಧಿಗಾಗಿ ಬಸವಧರ್ಮ ಎಂಬ ಲಿಂಗಾಯತ ಧರ್ಮವು ಮೊದಲಿನಿಂದಲೂ ಶ್ರಮಿಸುತ್ತಾ ಬಂದಿದೆ. ಲಿಂಗೈಕ್ಯ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರು ಹಳ್ಳಿ ಹಳ್ಳಿಗೆ ಹೋಗಿ ಜನ ಜಾಗೃತಿ ಮೂಡಿಸಿದರು. ರೈತರಿಗೆ ವಾಣಿಜ್ಯ ಬೆಳೆಗಳನ್ನು ಬೆಳೆಯುವ ಮೂಲಕ ಆರ್ಥಿಕ ಸದೃಢರಾಗುವಂತೆ ಪ್ರೇರೇಪಿಸಿದರು. ಅದರಂತೆ ಇಂದಿಗೂ ಶ್ರೀಮಠ ಅನ್ನ, ಅಕ್ಷರ, ಜ್ಞಾನ ದಾಸೋಹ ನೀಡುತ್ತಾ ಬರುತ್ತಿದೆ ಎಂದು ಗುಣಗಾನ ಮಾಡಿದರು.

    ಗೃಹಸಚಿವ ಬಸವರಾಜ್ ಬೊಮ್ಮಾಯಿ ಮಾತನಾಡಿ, ಶ್ರೀಮಠವು ಸಂಕಷ್ಟದ ಪರಿಸ್ಥಿತಿಯಲ್ಲಿ ಇದ್ದ ಸಂದರ್ಭದಲ್ಲಿ ಅದನ್ನು ಮೆಟ್ಟಿ ನಿಂತು ಹಿರಯ ಜಗದ್ಗುರುಗಳು ಮಠವನ್ನು ಬೆಳೆಸಿದರು. ಅಲ್ಲದೇ ಯಾವ ರೀತಿ ಬದುಕನ್ನು ರೂಪಿಸಿಕೊಳ್ಳಬೇಕೆಂಬ ಬಗ್ಗೆ ಜನರಿಗೆ ಮಾರ್ಗದರ್ಶನ ನೀಡಿದರು. ಇದರಿಂದಾಗಿ ಎಲ್ಲ ವರ್ಗದ ಜನರಿಗೂ ಉತ್ತಮ ಬದುಕು ದೊರೆಯಿತು. ಈಗಿನ ಗುರುಗಳು ಸಹ ಅದನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಅವರ ಮಾರ್ಗದರ್ಶನದಲ್ಲಿ ನಡೆದಲ್ಲಿ ಎಲ್ಲರ ಬದುಕು ಹಸನಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು.

    ಸಿರಿಗೆರೆ ತರಳಬಾಳು ಬೃಹನ್ಮಠದ ಡಾ. ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಜಿ ಸಮ್ಮುಖ ವಹಿಸಿದ್ದರು. ಕೇಂದ್ರ ಸರ್ಕಾರದ ರೈಲ್ವೆ ಸಚಿವ ಸುರೇಶ್ ಅಂಗಡಿ, ರಾಜ್ಯ ಕಾನೂನು ಸಚಿವ ಜೆ.ಸಿ.ಮಾದುಸ್ವಾಮಿ, ಕನ್ನಡ ಮತ್ತು ಸಂಸ್ಕøತಿ ಸಚಿವ ಸಿ.ಟಿ.ರವಿ, ಅಖಿಲ ಭಾರತ ವೀರಶೈವ ಸಂಘದ ಅಧ್ಯಕ್ಷ ಹಾಗೂ ಶಾಸಕ ಶ್ಯಾಮನೂರು ಶಿವಶಂಕರಪ್ಪ, ಸಂಸದರಾದ ಜಿ.ಎಂ.ಸಿದ್ದೇಶ್ವರ್, ಎ.ನಾರಾಯಣಸ್ವಾಮಿ, ಬಿ.ವೈ.ರಾಘವೇಂದ್ರ, ಶಾಸಕರಾದ ಎಂ.ಪಿ.ರೇಣೂಕಾಚಾರ್ಯ, ಜಿ.ಹೆಚ್.ತಿಪ್ಪಾರೆಡ್ಡಿ, ಎಂ.ಚಂದ್ರಪ್ಪ, ಎಸ್.ವಿ.ರಾಮಚಂದ್ರ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap