ತುಮಕೂರು

ತಂತ್ರಜ್ಞಾನವು ನಮ್ಮೆಲ್ಲ ವ್ಯಾಪಾರ ವಹಿವಾಟನ್ನು ಹಾಗೂ ಇಡೀ ಸಮಾಜವನ್ನು ಮರುವ್ಯಾಖ್ಯಾನಿಸುತ್ತಿರುವ ನಾಲ್ಕನೇ ಮಹಾಕ್ರಾಂತ್ರಿಯ ಕಾಲಘಟ್ಟದಲ್ಲಿ ನಾವಿದ್ದೇವೆ ಎಂದು ನವದೆಹಲಿಯ ಭಾರತೀಯ ವಿಶ್ವವಿದ್ಯಾಲಯಗಳ ಸಂಘದ ಅಧ್ಯಕ್ಷ ಪ್ರೊ. ಮಾಣಿಕರಾವ್ ಎಂ. ಸಾಲುಂಖೆ ವಿಶ್ಲೇಷಿಸಿದರು.
ಅವರು ಮಂಗಳವಾರ ಬೆಳಗ್ಗೆ ತುಮಕೂರು ವಿಶ್ವವಿದ್ಯಾನಿಲಯದ ಶ್ರೀ ಶಿವಕುಮಾರ ಸ್ವಾಮೀಜಿ ಸಭಾಂಗಣದಲ್ಲಿ ಏರ್ಪಟ್ಟಿದ್ದ 13 ನೇ ವಾರ್ಷಿಕ ಘಟಿಕೋತ್ಸವದಲ್ಲಿ ಘಟಿಕೋತ್ಸವ ಭಾಷಣ ಮಾಡುತ್ತಿದ್ದರು.
ಇಡೀ ಜಗತ್ತು ನಮ್ಮ ಬದುಕಿನ ಶೈಲಿಯನ್ನೇ ಮೂಲಭೂತವಾಗಿ ಬದಲಿಸುವ, ಕೆಲಸ ಮತ್ತು ವ್ಯಕ್ತಿ-ವ್ಯಕ್ತಿಗಳ ನಡುವಿನ ಸಂಬಂಧವನ್ನು ಪ್ರಭಾವಿಸುವ ತಾಂತ್ರಿಕ ಕ್ರಾಂತಿಯೊಂದರ ಮೂಲಕ ಸಾಗುತ್ತಿದೆ. ಈ ಪರಿವರ್ತನೆಯ ಅಗಾಧತೆ, ವ್ಯಾಪ್ತಿ ಮತ್ತು ಸಂಕೀರ್ಣತೆಗಳಲ್ಲಿ ಇಡೀ ಮನುಕುಲವೇ ಹಿಂದೆಂದೂ ಕಾಣದ, ಅನುಭವಿಸುವ ರೀತಿಯದ್ದಾಗಿದೆ ಎನ್ನುತ್ತ ಮೇಲಿನಂತೆ ನುಡಿದರು.
ಅರ್ಹತೆಯ ಅನಿವಾರ್ಯತೆ
ಈ ಬದಲಾವಣೆಗಳು ಪ್ರಸ್ತುತ ದಿನಗಳಲ್ಲಿ ವಾಣಿಜ್ಯೋದ್ಯಮದ ಮೇಲೆ ಅಗಾಧ ಪ್ರಭಾವ ಬೀರಲಿದೆ. ಅನೇಕ ಕಡೆಗಳಲ್ಲಿ ಕೆಲಸಗಾರರು ನಿರುದ್ಯೋಗಿಗಳಾಗುತ್ತಿದ್ದಾರೆ ಅಥವಾ ಯಂತ್ರಗಳು, ಕೃತಕ ಬುದ್ಧಿಮತ್ತೆ, ರೋಬೋಟಿಕ್ಸ್ ಮತ್ತು ಹೊಸ ವ್ಯವಹಾರ ಮಾದರಿಗಳ ಅಳವಡಿಕೆಯಿಂದಾಗಿ ಸ್ಥಿತ್ಯಂತರಗೊಳ್ಳುತ್ತಿದ್ದಾರೆ. ವ್ಯತ್ಯಯಗೊಳ್ಳುತ್ತಿರುವ ಮತ್ತು ಪುನರುಜ್ಜೀವನಗೊಳ್ಳುತ್ತಿರುವ ವ್ಯಾಪಾರೋದ್ಯಮ ಮಾದರಿಗಳು, ಕೌಶಲ್ಯಗಳು ಕೆಲಸಗಳು ಮತ್ತು ಕಾರ್ಯವೈಖರಿಯ ಮೇಲೆ ದೂರಗಾಮಿ ಪರಿಣಾಮವನ್ನು ಬೀರುತ್ತಿವೆ.
ಬದಲಾವಣೆಯ ಈ ವೇಗವು ನಾಲ್ಕನೆಯ ಕೈಗಾರಿಕಾ ಕ್ರಾಂತಿಯ ಭಾಗವಾಗಿದ್ದು, ಪ್ರಗತಿಪಥದಲ್ಲಿರುವ ಉದ್ಯೋಗ ಮಾರುಕಟ್ಟೆಯ ಮೇಲೆ ಅನೂಹ್ಯ ಪರಿಣಾಮವನ್ನು ಉಂಟುಮಾಡಲಿದೆ. ಹೊಸಯುಗದಲ್ಲಿ ಪ್ರತಿ ವ್ಯಕ್ತಿಗೂ ತಂತ್ರಜ್ಞಾನದ ಅರಿವು, ರಿಸ್ಕ್ ತೆಗೆದುಕೊಳ್ಳುವ ಮನೋಭಾವ ಹಾಗೂ ಗೊಂದಲದ ವಾತಾವರಣದಲ್ಲೂ ಒತ್ತಡಕ್ಕೊಳಗಾಗದೆ ಅತ್ಯುತ್ತಮ ಕೆಲಸದ ಸಾಮಥ್ರ್ಯವನ್ನು ಪ್ರದರ್ಶಿಸಬೇಕಾದ ಅರ್ಹತೆ ಗಳಿಸಿಕೊಳ್ಳಬೇಕಾದ ಅನಿವಾರ್ಯತೆಯನ್ನು ಹುಟ್ಟುಹಾಕಿದೆ ಎಂದು ಅವರು ವಿವರಿಸಿದರು.
ಹೊಸ ಕೌಶಲ್ಯದ ಅವಶ್ಯಕತೆ
ನೀವು ಮುಂದೆ-ಮುಂದೆ ಹೋದಂತೆಲ್ಲ ಊಹೆಗೂ ನಿಲುಕದ ಪ್ರಗತಿ ಮತ್ತು ನಿರಂತರ ಬದಲಾವಣೆಗಳನ್ನೇ ತುಂಬಿಕೊಂಡ ಅಸ್ಥಿರ ಜಗತ್ತಿನಲ್ಲಿ ಬದುಕಲು ನಿಮ್ಮನ್ನು ನೀವು ಅಣಿಗೊಳಿಸಿಕೊಳ್ಳಬೇಕಾಗುತ್ತದೆ ಎಂದು ವಿದ್ಯಾರ್ಥಿಗಳನ್ನು ಎಚ್ಚರಿಸಿದ ಪ್ರೊ. ಮಾಣಿಕರಾವ್ ಎಂ. ಸಾಲುಂಖೆ, ಇಂತಹ ಪರಿಸ್ಥಿತಿಯಲ್ಲಿ ಔದ್ಯೋಗಿಕ ವಿನ್ಯಾಸ, ಹೊಸ ಕೆಲಸಗಳ ನಿರೂಪ ಇತ್ಯಾದಿಗಳನ್ನೆಲ್ಲ ಪರಿಗಣಿಸಿ ನೀವು ಜೀವನವಿಡೀ ಕಲಿಯುವ ಮನೋಭಾವವನ್ನು, ಹೊಸ-ಹೊಸ ಕೌಶಲ್ಯಗಳನ್ನು ಕರಗತ ಮಾಡಿಕೊಳ್ಳುವ ಸ್ವಭಾವವನ್ನು, ಅಷ್ಟೇ ಅಲ್ಲದೆ ತಪ್ಪಾಗಿ ಕಲಿತದ್ದನ್ನು ಒಮ್ಮೊಮ್ಮೆ ಮರೆಯಬೇಕಾದ, ಹೊಸತನ್ನು ಕಲಿಯಬೇಕಾದ ಹಾಗೂ ರೀ-ಸ್ಕಿಲ್ ಮಾಡಿಕೊಳ್ಳಬೇಕಾದ, ಹೊಸ ಕೌಶಲ್ಯಗಳನ್ನು ಅಪ್-ಗ್ರೇಡ್ ಮಾಡಿಕೊಳ್ಳಬೇಕಾದ ಅನಿವಾರ್ಯತೆಗೆ ಹೊಂದಿಕೊಳ್ಳಬೇಕಾದ ಅವಶ್ಯಕತೆ ಎದ್ದುಕಾಣುತ್ತಿದೆ ಎಂದು ಒತ್ತಿ ಹೇಳಿದರು.
ವೈಜ್ಞಾನಿಕ ಮತ್ತು ತಾಂತ್ರಿಕ ಪ್ರಗತಿಯಲ್ಲಿ ಪರಿವರ್ತನಶೀಲವಾಗುತ್ತಿರುವ ಇಂದಿನ ಜಗತ್ತಿನಲ್ಲಿ ಹಲವಾರು ವಿದ್ಯಾರ್ಥಿಗಳು ಪಡೆದುಕೊಳ್ಳುತ್ತಿರುವ ಶಿಕ್ಷಣವು ಪರಿಪೂರ್ಣವೆನ್ನಿಸದೇ ಇರಬಹುದು ಎಂದೂ ಅವರು ಅಭಿಪ್ರಾಯಪಟ್ಟರು.
ವೈಯಕ್ತಿಕ ಸಾಧನೆಗಿಂತ ಸೇವೆಯೇ ಗುರಿಯಾಗಲಿ
ಸಾಧನೆಯ ಹಾದಿಯಲ್ಲಿ ಕನಸು ಕಾಣಬೇಕು. ಓರ್ವ ಇಂಜಿನಿಯರ್, ವಿಜ್ಞಾನಿ, ವಕೀಲ, ವೈದ್ಯ, ಕೋಟ್ಯಧಿಪತಿ ವ್ಯಾಪಾರಿ ಹೀಗೆ ಏನೇನೋ ಆಗಬೇಕೆಂಬ ಸಾಂಪ್ರದಾಯಿಕ ವೃತ್ತಿಗಳಷ್ಟೇ ಅಲ್ಲದೆ, ದೊಡ್ಡ ದೊಡ್ಡ ಕೊಡುಗೆಗಳನ್ನು ನೀಡಬಹುದಾದ ದೊಡ್ಡ ಕನಸುಗಳನ್ನೂ ಕಾಣಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ ಪ್ರೊ. ಸಾಲುಂಖೆ, ಕೇವಲ ನಿಮ್ಮ ಬದುಕನ್ನು ಮಾತ್ರವಲ್ಲದೆ ನಿಮ್ಮ ಸುತ್ತಲಿರುವವರ ಜೀವನವನ್ನು ಬದಲಿಸಬಲ್ಲ ದೊಡ್ಡ ಕನಸನ್ನು ಇಟ್ಟುಕೊಳ್ಳಬೇಕು.
ಸೇವೆಯನ್ನು ಗುರಿಯಾಗಿಸಿಕೊಂಡ ಬದುಕಿನತ್ತ ಗಮನವಿರಬೇಕೇ ಹೊರತು, ಕೇವಲ ವೈಯಕ್ತಿಕ ಸಾಧನೆಯೆಡೆ ಮಾತ್ರವಲ್ಲ ಎಂದು ಸಲಹೆ ನೀಡುತ್ತ ತುಮಕೂರು ಜಿಲ್ಲೆಯ ಮಹಾನ್ ಸಾಧಕಿ ಸೂಲಗಿತ್ತಿ ನರಸಮ್ಮ ಅವರ ಸಾಧನೆಯನ್ನು ವಿಶೇಷವಾಗಿ ಉಲ್ಲೇಖಿಸಿದರು. ತುಮಕೂರು ವಿ.ವಿ.ಯ ಪ್ರಗತಿಯನ್ನು ಪ್ರೊ. ಮಾಣಿಕರಾವ್ ಎಂ. ಸಾಲುಂಖೆ ಅವರು ಇದೇ ಸಂದರ್ಭದಲ್ಲಿ ಮುಕ್ತಕಂಠದಿಂದ ಪ್ರಶಂಸಿಸಿದರು.
ರಾಜ್ಯಪಾಲರೂ ಹಾಗೂ ತುಮಕೂರು ವಿ.ವಿ.ಯ ಕುಲಾಧಿಪತಿಗಳೂ ಆದ ವಜುಭಾಯಿ ರುಡಾಭಾಯಿ ವಾಲಾ ಅವರು ಘಟಿಕೋತ್ಸವದ ಅಧ್ಯಕ್ಷತೆ ವಹಿಸಿದ್ದು, ರ್ಯಾಂಕ್ ವಿಜೇತ ವಿದ್ಯಾರ್ಥಿಗಳಿಗೆ ವಿವಿಧ ಪದಕಗಳನ್ನು ವಿತರಿಸಿದರು.
ಗೌರವ ಡಾಕ್ಟರೇಟ್ ಪ್ರದಾನ
ಇದೇ ಸಂದರ್ಭದಲ್ಲಿ ಕರ್ನಾಟಕದ ಡೈರಿ ಅಭಿವೃದ್ಧಿಯಲ್ಲಿ ಅನನ್ಯ ಸಾಧನೆ ಮಾಡಿರುವ ಕುಣಿಗಲ್ ತಾಲ್ಲೂಕು ಚಿಕ್ಕಮಾವತ್ತೂರಿ ನವರಾದ ಸಿ.ಎನ್.ಮಂಚೇಗೌಡ ಅವರಿಗೆ ರಾಜ್ಯಪಾಲರು ತುಮಕೂರು ವಿವಿ ಕೊಡಮಾಡಿದ ಗೌರವ ಡಾಕ್ಟರೇಟ್‍ನ್ನು ಪ್ರದಾನ ಮಾಡಿದರು. ವಿ.ವಿ. ಕುಲಪತಿ ಪ್ರೊ. ವೈ.ಎಸ್.ಸಿದ್ದೇಗೌಡ ಸ್ವಾಗತಿಸಿದರು. ಕುಲಸಚಿವ ಪ್ರೊ. ಕೆ.ಎನ್.ಗಂಗಾನಾಯ್ಕ ಮತ್ತು ಕುಲಸಚಿವ (ಮೌಲ್ಯಮಾಪನ) ಪ್ರೊ. ಕೆ.ಜೆ.ಸುರೇಶ್ ಮತ್ತು ವಿವಿಧ ಡೀನ್‍ಗಳು ವೇದಿಕೆಯಲ್ಲಿದ್ದರು. ಆಹ್ವಾನಿತರಾಗಿದ್ದ ಉನ್ನತಶಿಕ್ಷಣ ಸಚಿವ ಹಾಗೂ ತುಮಕೂರು ವಿ.ವಿ.ಯ ಸಮಕುಲಾಧಿಪತಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಗೈರುಹಾಜರಾಗಿದ್ದರು. ಕಾರ್ಯಕ್ರಮ ಬೆಳಗ್ಗೆ 11 ಗಂಟೆಗೆ ಸರಿಯಾಗಿ ಆರಂಭಗೊಂಡಿತು. ಮಧ್ಯಾಹ್ನ 12 ಗಂಟೆ 9 ನಿಮಿಷಕ್ಕೆ ಮುಕ್ತಾಯಗೊಂಡಿತು. ಸ್ವಾಗತ, ನಿರೂಪಣೆ ಮತ್ತು ಕೆಲವು ಔಪಚಾರಿಕ ಕಾರ್ಯಕ್ರಮಗಳು (ಪದಕ ವಿಜೇತರ ಆಹ್ವಾನ ಇತ್ಯಾದಿ) ಇಂಗ್ಲಿಷ್ ಭಾಷೆಯಲ್ಲಿ ನಡೆಯಿತು. ಮಿಕ್ಕುಳಿದ ಔಪಚಾರಿಕ ಕಾರ್ಯಕ್ರಮಗಳು ಕನ್ನಡದಲ್ಲಿ ನಡೆದವು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
