ಬೆಂಗಳೂರು
ರಾಜ್ಯದಲ್ಲಿ ಕೆಳಮಟ್ಟದಿಂದ(ಕೇಡರ್ ಬೇಸ್) ಪಕ್ಷ ಸಂಘಟಿಸುವ ಗುರಿಹೊಂದಿದ್ದು ನನ್ನ ನೇತೃತ್ವದ ತಂಡ ಹೊಸ ಜವಾಬ್ದಾರಿಯಿಂದ ಪಕ್ಷದ ಬಲವರ್ಧನೆಗೆ ದುಡಿಯಲಿದೆ ಕೆಪಿಸಿಸಿ ನೂತನ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ನಗರದ ರೇಸ್ ಕೋರ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ನಡೆದ ಪಕ್ಷದ ಮುಖಂಡರು ಕಾರ್ಯಕರ್ತರ ಸಭೆಯ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಹಿಂದಿನ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ರಾಜೀನಾಮೆ ನೀಡಿದ ಬಳಿಕ, ಪಕ್ಷದ ವರಿಷ್ಠರು, ಅನೇಕ ನಮ್ಮ ರಾಜ್ಯದ ರಾಷ್ಟ್ರದ ನಾಯಕರು, ನನ್ನ ಅಧ್ಯಕ್ಷನಾಗಿ ನೇಮಿಸುವ ಮೂಲಕ ಹೊಸ ಜವಾಬ್ದಾರಿ ನೀಡಿದ್ದಾರೆ ಎಂದರು.
ನನ್ನ ಮೇಲೆ ವಿಶ್ವಾಸ ಇಟ್ಟು, ಮೂವರನ್ನು ಕಾರ್ಯಾಧ್ಯಕ್ಷರನ್ನು ನೇಮಿಸಿದ್ದು, ಇದೊಂದು ಹೊಸ ತಂಡವಾಗಿದೆ. ಈ ಜವಾಬ್ದಾರಿ ಅನ್ನು ಅಧಿಕಾರ ಎನ್ನುವ ಮಾತು ಬಿಟ್ಟು,ಜವಾಬ್ದಾರಿ ಹೊತ್ತು ಕೆಲಸ ಮಾಡಬೇಕಿದೆ ಎಂದರು.
ಈ ದೇಶದಲ್ಲಿ ಎಲ್ಲರನ್ನೂ ಒಗ್ಗೂಡಿಸುವ ಶಕ್ತಿ ಕಾಂಗ್ರೆಸ್ ಪಕ್ಷ ಮಾತ್ರ ಹೊಂದಿದ್ದು,ನಾವು ಕಾರ್ಯಕರ್ತರ ಧ್ವನಿ ಆಗುತ್ತೇವೆ ಎಂದ ಅವರು, ಬಿಜೆಪಿ ನಾಯಕರು ಕಾಂಗ್ರೆಸ್ ಪಕ್ಷವನ್ನು ಭೂಪಟದಿಂದ ತೆಗೆಯಲು ಮುಂದಾಗಿದ್ದಾರೆ. ಅವರಿಗೆ ಈಗ ಸಿಕ್ಕಿರುವ ಅಧಿಕಾರ ಸಲಾದು ಎನ್ನುವ ಭಾವನೆ ಇದೆ.ಆದರೆ, ನಮ್ಮ ಪಕ್ಷಕ್ಕೆ ಅಧಿಕಾರ ಇಲ್ಲದಿದ್ದರೂ, ಜನರಿಗಾಗಿ ಶ್ರಮಿಸಲಿದೆ ಎಂದರು.ಕೆಪಿಸಿಸಿ ನೂತನ ಕಾರ್ಯಾಧ್ಯಕ್ಷರುಗಳಾದ ಈಶ್ವರ್ ಖಂಡ್ರೆ, ಸಲೀಂ ಅಹಮದ್ , ರವರು ಸತೀಶ್ ಜಾರಕಿಹೊಳಿ ಉಪಸ್ಥಿತರಿದ್ದರು.
ಮಹತ್ವದ ಚರ್ಚೆ
ಇದಕ್ಕೂ ಮುನ್ನ ಕಾಂಗ್ರೆಸ್ ಸಂಘಟನೆ ಹಾಗೂ ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆ ಸಿದ್ಧತೆ ಕುರಿತಂತೆ ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಹತ್ವದ ಚರ್ಚೆ ನಡೆಸಲಾಯಿತು.ಸಭೆಯಲ್ಲಿ ನೂತನ ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ, ಸಲೀಂ ಅಹಮದ್ ಹಾಗೂ ಸತೀಶ್ ಜಾರಕಿಹೊಳಿ ಅವರು ಚರ್ಚೆ ನಡೆಸಿದರು.
ಪಕ್ಷದ ಕಾರ್ಯಕರ್ತರನ್ನು ಒಗ್ಗೂಡಿಸಿ ಬೂತ್ಮಟ್ಟದ ಸಂಘಟನೆ, ಪದಾಧಿಕಾರಿಗಳ ಪುನಾರಚನೆ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವ ನೋಂದಣಿ ಕಾರ್ಯಕ್ರಮ ಹಮ್ಮಿಕೊಳ್ಳುವುದು. ಹಾಗೂ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮಂಡಿಸಿದ ಬಜೆಟ್ ಜನವಿರೋಧಿಯಾಗಿದ್ದು, ಈ ಎರಡು ಸರಕಾರಗಳ ವೈಫಲ್ಯವನ್ನು ಜನರಿಗೆ ತಿಳಿಸಲು ಪಕ್ಷ ಸಂಘಟಿಸುವ ಕುರಿತು ಸಭೆಯಲ್ಲಿ ನಾಯಕರು ಪ್ರಸ್ತಾಪಿಸಿದರು ಎಂದು ಮೂಲಗಳು ತಿಳಿಸಿವೆ.
ಸಂಘಟನಾ ಸಭೆ
ಅದೇ ರೀತಿ, ಮುಂಬರುವ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾಪಂಚಾಯಿತಿಗಳ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಿ ಅಧಿಕಾರಕ್ಕೆ ತರುವಲ್ಲಿ ಈಗಿನಿಂದಲೇ ಪಕ್ಷದ ಸಂಘಟನೆಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಕುರಿತು ಚರ್ಚೆ ನಡೆಸಲಾಯಿತು ಎಂದು ಪಕ್ಷದ ನಾಯಕರೊಬ್ಬರು ಸಂಜೆವಾಣಿಗೆ ತಿಳಿಸಿದರು.ಜೊತೆಯಾಗಿ ಹೋಗೋಣ: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಬಲಪಡಿಸುವ ನಿಟ್ಟಿನಲ್ಲಿ ಹಿರಿಯರು ಕಿರಿಯರು ಎನ್ನುವ ಭೇದಭಾವ ಇಲ್ಲದೆ, ಎಲ್ಲರೂ ಜೊತೆಯಾಗಿ ಕೆಲಸ ಮಾಡಿ, ಮತ್ತೊಮ್ಮೆ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರಬೇಂದು ಚರ್ಚೆಯೂ ನಡೆಸಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
