ಸಂವಿಧಾನ ವಿರೋಧಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯವಂತೆ ಸಿಪಿಐಎಂ ಒತ್ತಾಯ.

ಹೊಸಪೇಟೆ :

      ಕೇಂದ್ರ ಸರ್ಕಾರ ಸಂವಿಧಾನ ವಿರೋಧಿ ಪೌರತ್ವ ತಿದ್ದುಪಡಿ ಮಸೂದೆಯನ್ನು ಕೂಡಲೇ ಹಿಂಪಡೆಯಬೇಕೆಂದು ಒತ್ತಾಯಿಸಿ ಇದೇ ಡಿ.19ರಂದು ದೇಶದಾದ್ಯಂತ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಸಿಪಿಐ(ಎಂ) ಪಕ್ಷದ ರಾಜ್ಯ ಕಾರ್ಯದರ್ಶಿ ಯು.ಬಸವರಾಜ ತಿಳಿಸಿದರು.

    ಇಲ್ಲಿನ ಶ್ರಮಿಕ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಸಂಸತ್ತಿನ 2 ಸದನಗಳಲ್ಲಿ ಪೌರತ್ವ ತಿದ್ದುಪಡಿ ಮಸೂದೆಯನ್ನು ಪಾಸ್ ಮಾಡಿದೆ. ಇದರಿಂದ ದೇಶದ ನಾನಾ ಭಾಗಗಳಲ್ಲಿ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಪ್ರತಿಭಟನೆಗಳು ನಡೆಯುತ್ತಿವೆ. ದೇಶದ ಎಲ್ಲಾ ಜಾತ್ಯತೀತ ಸಂಘಟನೆಗಳು, ಪ್ರಗತಿಪರರು, ಹೋರಾಟಗಾರರು, ವಿದ್ಯಾರ್ಥಿಗಳು ಒಕ್ಕೊರಲಿನಿಂದ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಜಾತಿ, ಧರ್ಮ ಆಧಾರದಲ್ಲಿ ಪೌರತ್ವ ನೀಡುವುದು ಸಂವಿಧಾನ ವಿರೋಧಿ ಕೃತ್ಯವಾಗಿದೆ. ಇದನ್ನು ಸಿಪಿಐಎಂ ಉಗ್ರವಾಗಿ ಖಂಡಿಸುತ್ತದೆ ಎಂದರು.

   ಬಾಂಗ್ಲಾದೇಶ, ಅಫಘಾನಿಸ್ತಾನ, ಪಾಕಿಸ್ತಾನದಿಂದ ವಲಸೆ ಬಂದಂತಹ ಹಿಂದು, ಕ್ರಿಶ್ಚಿಯನ್, ಬೌದ್ದ, ಸಿಖ್, ಜೈನ್ ಧರ್ಮಗಳ ಜನ ಸಮುದಾಯಗಳನ್ನು ಮಾತ್ರ ಕಾನೂನು ಬದ್ದವೆಂದು ಪರಿಗಣಿಸಿ ಪೌರತ್ವ ನೀಡಲು ಒಪ್ಪಿದೆ. ಅದೇ ಸಮಯದಲ್ಲಿ ಅದೇ ದೇಶಗಳಿಂದ ವಲಸೆ ಬಂದಂತಹ ಮುಸ್ಲಿಮರನ್ನು ಕಾನೂನು ಬಾಹೀರ ವಲಸೆಗಾರರೆಂದು ಪರಿಗಣಿಸುವುದು ಯಾವ ನ್ಯಾಯ ? ಇದು ಭಾರತೀಯ ಸಂವಿಧಾನ ವಿರೋಧಿ ನೀತಿಯಾಗಿದ್ದು, ಕೂಡಲೇ ಸದನದಲ್ಲಿ ಮಂಡಿಸಿದ ಮಸೂದೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.

   ಸಂವಿಧಾನದ ಕಾನೂನಿನ ಮುಂದೆ ದೇಶದ ಪ್ರತಿಯೊಬ್ಬ ಪ್ರಜೆ ಸಮಾನರೆಂದು ಪರಿಗಣಿಸಿದೆ. ಧರ್ಮ, ಜಾತಿ, ಭಾಷೆ, ಪ್ರದೇಶ ಹಾಗು ಲಿಂಗ ತಾರತಮ್ಯ ಮಾಡುವಂತಿಲ್ಲ. ಆದರೆ ಬಿಜೆಪಿಯ ಕೇಂದ್ರ ಸರ್ಕಾರ ಧರ್ಮ, ಜಾತಿ ಹೆಸರಿನಲ್ಲಿ ಬೇರ್ಪಡಿಸಿ ಒಡೆದು ಆಳುವ ನೀತಿ ಅನುಸರಿಸುತ್ತಿದೆ. ಇದು ದೇಶದ ಐಕ್ಯತೆ ಹಾಗು ಸಮಗ್ರತೆಗೆ ಹಾನಿಯನ್ನುಂಟು ಮಾಡುವ ಸಂಗತಿಯಾಗಿದೆ. ಈ ಮಸೂದೆಯ ಉದ್ದೇಶ ಕೋಮು ವಿಭಜನೆ ಹಾಗು ಸಾಮಾಜಿಕ ಧ್ರುವೀಕರಣವನ್ನು ತೀವ್ರಗೊಳಿಸುವದೇ ಆಗಿದೆ ಎಂದು ಆರೋಪಿಸಿದರು.

ಆರ್ಥಿಕ ಬಿಕ್ಕಟ್ಟು :

     ಕೇಂದ್ರ ಸರ್ಕಾರದ ಆರ್ಥಿಕ, ಜಾಗತೀಕರಣ, ಉದಾರಿಕರಣ ನೀತಿಗಳಿಂದ ಕೃಷಿ, ಕೈಗಾರಿಕೆ ವಲಯದ ಉತ್ಪಾದನೆ ಕುಂಠಿತವಾಗಿದೆ. ಸಣ್ಣ ಸಣ್ಣ ಉದ್ಯಮಗಳು ಮುಚ್ಚುತ್ತಿವೆ. ಇದರಿಂದ ದೇಶ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆ. ರೈತರ ಬೆಳೆಗಳಿಗೆ ಬೆಂಬಲ ಬೆಲೆ ಇಲ್ಲದೇ ರೈತ ಆತ್ಮಹತ್ಯ ಮಾಡಿಕೊಳ್ಳುತ್ತಿದ್ದರೂ ರೈತರ ಸಾಲಮನ್ನಾ ಮಾಡುತ್ತಿಲ್ಲ. ಆದರೆ ಬಂಡವಾಳಶಾಯಿಗಳಿಗೆ ಮಾತ್ರ ಸಾಲಮನ್ನಾ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

      25 ವಿಮಾನ ನಿಲ್ದಾಣಗಳು ಸೇರಿದಂತೆ ದೇಶಕ್ಕೆ ಆದಾಯ ತರುವ ರೈಲ್ವೇ ಇಲಾಖೆ, ಸರ್ಕಾರಿ ಸ್ವಾಮ್ಯದ ಎಲ್ಲಾ ಕೈಗಾರಿಕೆಗಳನ್ನು ಕೇಂದ್ರ ಸರ್ಕಾರ ಖಾಸಗೀಕರಣ ಮಾಡುತ್ತಿದೆ. ಬಂಡವಾಳಶಾಯಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ದೇಶದ ಸಂಪನ್ಮೂಲವನ್ನು ಧಾರೆ ಎರೆದು ಕೊಡುತ್ತಿದೆ. ಆದರೆ ಆದಾಯ ತರುವ ಕಾರ್ಮಿಕ ವರ್ಗಕ್ಕೆ ಮಾತ್ರ ವೇತನ ಕಡಿತಗೊಳಿಸುತ್ತಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ಆರ್.ಎಸ್.ಬಸವರಾಜ, ಕಾರ್ಯಕಾರಿ ಸಮಿತಿ ಸದಸ್ಯರಾದ ಮರಡಿ ಜಂಬಯ್ಯನಾಯಕ, ಆರ್.ಭಾಸ್ಕರರೆಡ್ಡಿ, ಕೆ.ಎಂ.ಸಂತೋಷ್ ಇದ್ದರು.

 

 

Recent Articles

spot_img

Related Stories

Share via
Copy link
Powered by Social Snap