ಕೆರೆಗೆ ನೀರು ಬಿಡದೇ ಇದ್ದಲ್ಲಿ ಮತದಾನ ಬಹಿಷ್ಕಾರ: ಆಣೂರು ಗ್ರಾಮಸ್ಥರು

ಬ್ಯಾಡಗಿ:

       ಆಣೂರು ಕೆರೆಗೆ ನೀರು ತುಂಬಿಸದೇ ಇದ್ದಲ್ಲಿ ಮತದಾನ ಬಹಿಷ್ಕರಿಸುವುದಾಗಿ ತಾಲೂಕಿನ ಶಿಡೇನೂರ ಗ್ರಾಮಸ್ಥರು ರೈತ ಸಂಘದ ನೇತೃತ್ವದಲ್ಲಿ ಶನಿವಾರ ಪಟ್ಟಣದಲ್ಲಿನ ತಾಲ್ಲೂಕ ಕಛೇರಿ ಎದುರು ಪ್ರತಿಭಟನೆ ನಡೆಸಿ ತಹಶೀಲ್ದಾರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

         ಅಸುಂಡಿ ಜಲಾನಯನದಡಿ ಆಣೂರು ಕೆರೆಯ ಮೂಲಕ ಬ್ಯಾಡಗಿ ಹಾಗೂ ಹಾವೇರಿ ತಾಲೂಕುಗಳ 36 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಅನುದಾನ ನೀಡುವಂತೆ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಹೋರಾಟ ಆರಂಭವಾಗಿದ್ದು ಇದೀಗ ಶಿಡೇನೂರ ಗ್ರಾಮದ ನೂರಾರು ಜನರು ಮನವಿಯೊಂದನ್ನು ಸಲ್ಲಿಸಿದರು.

         ನಮ್ಮ ಅಳಲನ್ನು ಕೇಳುವವರಿಲ್ಲ: ಸಂದರ್ಭದಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಬಳ್ಳಾರಿ, ಕುಡಿಯುವ ನೀರು ಮನುಷ್ಯ ಸೇರಿದಂತೆ ಪ್ರಾಣಿ, ಪಕ್ಷಿ ಇನ್ನಿತರ ಎಲ್ಲ ಜೀವ ಸಂಕುಲಗಳಿಗೆ ಅತೀ ಅವಶ್ಯವಿದೆ, ಆದರೆ ಆಣೂರು ಕೆರೆಗೆ ನೀರು ತುಂಬಿಸುವಂತೆ ಕಳೆದ 30 ವರ್ಷಗಳಿಂದ ಹೋರಾಟ ನಡೆಸುತ್ತಾ ಬಂದಿದ್ದರೂ ಜನಪ್ರತಿನಿಧಿಗಳು ಸೇರಿದಂತೆ ಯಾವೊಬ್ಬ ಅಧಿಕಾರಿಗಳು ಮುತುವರ್ಜಿ ವಹಿಸದೇ ಕೇವಲ ಸುಳ್ಳು ಭರವಸೆಗಳನ್ನು ನೀಡುತ್ತಾ ಬಂದಿರುವುದು ಎಷ್ಟರಮಟ್ಟಿಗೆ ಸರಿ..? ಎಂದು ಪ್ರಶ್ನಿಸಿದರು.

         ಸುಳ್ಳು ಹೇಳುವುದು ಇದೀಗ ಜಿಲ್ಲಾಧಿಕಾರಿಗಳ ಸರದಿ: ಯೋಜನೆಗೆ ಡಿಪಿಆರ್ (ಡಿಟೇಲ್ ಪ್ರಾಜೆಕ್ಟ ರಿಪೋರ್ಟ) ಸಿದ್ಧವಾ ಗಿದ್ದು, ಸಚಿವ ಸಂಪುಟದಲ್ಲಿ ಆಡಳಿತಾತ್ಮಕ ಅನುಮೋದನೆ ಆಗುವುದಷ್ಟೇ ಬಾಕಿ ಉಳಿದಿದೆ ಎಂದು ಆಣೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ, ಒಂದು ವೇಳೆ ಅವರು ಹೇಳಿದಂತೆ ಡಿಪಿಆರ್ ಸಿದ್ಧವಾಗಿದ್ದಲ್ಲಿ ಅದರ ಒಂದು ಪ್ರತಿಯನ್ನು ನಮಗೂ ಸಹ ನೀಡುವಂತೆ ಆಗ್ರಹಿಸಿದ ಅವರು, ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ 212 ಕೋಟಿ ಅನುದಾನ ಬಿಡುಗಡೆಯಾಗಿದ್ದಾಗಿ ಸುಳ್ಳು ಹೇಳಿದ್ದಾಯಿತು ಇದೀಗ ಜಿಲ್ಲಾಧಿಕಾರಿಗಳ ಸರದಿ ಆರಂಭವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

         ಇನ್ನಷ್ಟು ಗ್ರಾಮಗಳು ಸೇರ್ಪಡೆಯಾಗಲಿವೆ: ಗಂಗಣ್ಣ ಎಲಿ ಮಾತನಾಡಿ, ಇದೀಗ ಎರಡು ಗ್ರಾಮಗಳ ಜನರು ಚುನಾವಣೆ ಬಹಿಷ್ಕರಿಸಿದ್ದು ಕೆಲವೇ ದಿನಗಳಲ್ಲಿ ಇದಕ್ಕೆ ಇನ್ನಷ್ಟು ಗ್ರಾಮಗಳು ಸೇರ್ಪಡೆಯಾಗಲಿವೆ, ಮುಂಬರುವ ಲೋಕಸಭೆ ಸೇರಿದಂತೆ ಯಾವುದೇ ಸಾರ್ವತ್ರಿಕ ಚುನಾವಣೆಗಳಿಂದ ದೂರ ಉಳಿಯಲು ನಿರ್ಧರಿಸಿರುವ ನಮ್ಮ ಮೇಲೆ ಯಾವುದೇ ಕ್ರಮಗಳನ್ನು ಕೈಗೊಂಡರೂ ಜಗ್ಗುವುದಿಲ್ಲ ‘ಜೀವ ಬಿಟ್ಟೇವು ಜೀವಜಲ ಬಿಡುವುದಿಲ್ಲ’ ಎಂಬುದು ನಮ್ಮ ಹೋರಾಟದ ಘೋಷವಾಕ್ಯ ಹೀಗಾಗಿ ಕೆರೆಗೆ ನೀರು ತುಂಬಿಸುವುದು ನಮ್ಮ ಅಳಿವು ಉಳಿವಿನ ಪ್ರಶ್ನೆ ಎಂದ ಅವರು, ಸರ್ಕಾರಗಳನ್ನು ಎಚ್ಚರಿಸುವ ಕೆಲಸವನ್ನು ಮಾಡಿದ್ದೇವೆ ಎಂದರು.

         ಈ ಸಂದರ್ಭದಲ್ಲಿ ಗ್ರಾನಸ್ಥರಾದ ಗ್ರಾಪಂ ಸದಸ್ಯ ನಾಗಪ್ಪ ಭಾವಿಕಟ್ಟಿ, ಕುಮಾರ ನಾಯ್ಕ್, ನಾಗಪ್ಪ ಕಾರಗಿ, ಬಸವರಾಜ ಹುಲ್ಲತ್ತಿ, ಮಂಜು ಬನ್ನಿಹಟ್ಟಿ, ಕರಬಸಪ್ಪ ಮಳ್ಳಪ್ಪನವರ, ಮಂಜು ನಂದಿಹಳ್ಳಿ, ಮಂಜುನಾಥ ಮುನಿಗೋಳ, ಉಮೇಶ ತೆವರಿ, ಬಸನಗೌಡ ತೆವರಿ, ವೀರಪ್ಪ ಮಟ್ಟೇರ, ಈರಪ್ಪ ಕಾರಗಿ, ಮಂಜಪ್ಪ ಪೂಜಾರ, ಚಂದ್ರಪ್ಪ ಮೇಗಳಮನಿ, ಚಂದ್ರಪ್ಪ ದೊಡ್ಮನಿ, ಸುರೇಶ ದೊಡ್ಮನಿ, ಫಕ್ಕೀರಪ್ಪ ಮಳ್ಳಪ್ಪನವರ, ಕುಮಾರ ದೊಡ್ಮನಿ, ಮಂಜು ಕಳಕನವರ, ರುದ್ರಮುನಿ ಚರಂತಿಮಠ, ಪ್ರಕಾಶ ಮೂಡಿ, ಗಂಗಪ್ಪ ಬಣಕಾರ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

        ಸಾರ್ವತ್ರಿಕ ಚುನಾವಣೆ ಬೆನ್ನಲ್ಲೇ ಚುನಾವಣೆ ಬಹಿಷ್ಕಾರ ನಿರ್ಧಾರ ಅಧಿಕಾರಿಗಳನ್ನು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ, ಈಗಾಗಲೇ ಆಣೂರಿನಲ್ಲಿ ಮತದಾನ ಬಹಿಷ್ಕರಿಸಿದ್ದು ಸದರಿ ಯೋಜನೆಯಡಿ ಬರುವ ಶಿಡೇನೂರು ಮತದಾನ ಬಹಿಷ್ಕರಿಸಿದ ಇದೀಗ ಎರಡನೇ ಗ್ರಾಮವಾಗಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link