ಚಿತ್ರದುರ್ಗ
ಶಾಸಕ ಮಹೇಶ್ ಕುಮಟಳ್ಳಿಗೆ ಅನ್ಯಾಯವಾಗಬಾರದು. ಇದು ನಮ್ಮ ಒತ್ತಾಯವೂ ಆಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೂ ತರಲಾಗುವುದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.ಭಾನುವಾರ ಮಾದಾರ ಚೆನ್ನಯ್ಯ ಗುರುಪೀಠ ಮತ್ತು ಮಡಿವಾಳ ಮಾಚಿದೇವ ಗುರುಪೀಠಕ್ಕೆ ಬೇಟಿ ನೀಡಿದ್ದ ಸಚಿವರು, ಸುದ್ದಿಗಾರರ ಜೊತೆ ಮಾತನಾಡಿದರು
ಕುಮಟಳ್ಳಿಯವರು ತ್ಯಾಗ ಮಾಡಿ ಬಂದಿದ್ದಾರೆ. ಅವರಿಗೆ ಸೂಕ್ತ ಸ್ಥಾನಮಾನ ಕಲ್ಪಿಸಲು ಸಿಎಂಗೆ ಮನವಿ ಮಾಡುತ್ತೇವೆ. ಸಿಎಂ ಯಾರಿಗೂ ಅನ್ಯಾಯ ಮಾಡುವದಿಲ್ಲವೆಂಬ ವಿಶ್ವಾಸವಿದೆ ಎಂದರು
ಬಿಜೆಪಿ ಸರ್ಕಾರ ಅನೈತಿಕ ಕೂಸು ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಅವರು ಈಗ ಹತಾಶರಾಗಿದ್ದಾರೆ. ಅವರು ನಮ್ಮನ್ನು ನೆನಪಿಸಿಕೊಳ್ಳಬೇಕು. ನಮ್ಮಿಂದ ಅವರಿಗೆ ವಿರೋಧ ಪಕ್ಷದ ನಾಯಕನ ಸ್ಥಾನ ಸಿಕ್ಕಿದೆ. ನಾವು 17 ಜನ ರಾಜೀನಾಮೆ ಕೊಟ್ಟು ಸರ್ಕಾರ ಬಿದ್ದಿದ್ದಕ್ಕೆ ಅವರಿಗೆ ವಿರೋಧ ಪಕ್ಷದ ಸ್ಥಾನ ಸಿಕ್ಕಿದೆ ಎಂದು ಹೇಳಿದರು ಸಿದ್ದರಾಮಯ್ಯ ಅವರಿಗೆ ಒಳಗೊಳಗೆ ನಮ್ಮ ಮೇಲೆ ಪ್ರೀತಿ ಇದೆ. ವಿರೋಧ ಪಕ್ಷದ ನಾಯಕ ಆದ ಮೇಲೆ ವಿರೋಧಿಸಲೇಬೇಕು ಎಲ್ಲವೇ ಎಂದರು
ಬಿಜೆಪಿ ಆಡಳಿತದಲ್ಲಿ ಪೊಲೀಸ್ ರಾಜ್ಯ ಆಗಿದೆ ಎಂಬ ಟೀಕೆಗೆ ಪ್ರತಿಕ್ರಿಯಿಸಿದ ಬಿ.ಸಿ.ಪಾಟೀಲ್, ವಿರೋಧ ಪಕ್ಷದಲ್ಲಿರುವವರು ಟೀಕಿಸುವುದು ಸಹಜ. ಪೊಲೀಸರು ನಿಸ್ಪಕ್ಷಪಾತವಾಗಿ ಕೆಲಸ ಮಾಡುತ್ತಿದ್ದಾರೆ. ಕಾಮಾಲೆ ಕಣ್ಣಿದ್ದವರಿಗೆ ಕಾಣೋದೆಲ್ಲಾ ಹಳದಿ ಎನ್ನುವಂತಾಗಿದೆ ಎಂದರು
ಕಂಡಲ್ಲಿ ಗುಂಡಿಕ್ಕುವ ಕಾನೂನು
ಅಮೂಲ್ಯ ಲಿಯೋನ್ ಪಾಕ್ ಪರ ಘೋಷಣೆ ಕೂಗಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ದೇಶದ್ರೋಹ ಕೆಲಸ ಮಾಡುವವರನ್ನು ಕಂಡಲ್ಲಿ ಗುಂಡಿಟ್ಟು ಕೊಲ್ಲುವ ಕಾನೂನು ತರಬೇಕು. ತಿನ್ನೋದು ಭಾರತದ ಅನ್ನ, ಕುಡಿಯೋದು ಭಾರತದ ಗಾಳಿ, ನೀರು, ಪಾಕಿಸ್ಥಾನಕ್ಕೆ ಜಿಂದಾಬಾದ್ ಎಂದು ಹೇಳುವುದಾದರೆ ಅಂತವರು ಏಕೆ ಇಲ್ಲಿರಬೇಕು ಎಂದು ಪ್ರಶ್ನೆ ಮಾಡಿದರು
ರಾಜ್ಯದಲ್ಲಿ ಕ್ಯಾಸಿನೋ ತೆರೆಯುವ ಪ್ರವಾಸೋಧ್ಯಮ ಸಚಿವ ಸಿ.ಟಿ.ರವಿ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡರು. ಕ್ಯಾಸಿನೋ ತೆರೆಯುವುದರಲ್ಲಿ ತಪ್ಪೇನೂ ಇಲ್ಲ. ಜನರು ಕ್ಯಾಸಿನೋ ಆಡಲು ದೇಶ ವಿದೇಶಗಳಿಗೆ ಹೋಗುತ್ತಾರೆ. ನಮ್ಮ ದುಡ್ಡು ಶ್ರೀಲಂಕಾ, ಸಿಂಗಾಪುರ ಸೇರುತ್ತದೆ. ಅದು ದೇಶಕ್ಕೆ ಕೊರತೆ ಆಗುವುದಿಲ್ಲವೇ ? ಟೂರಿಸಂ ಅನ್ನೊದು ಮಳೆ ಇಲ್ಲದ ಬೆಳೆ ಇದ್ದಂತೆ. ಅದನ್ನು ಕಾನೂನು ಚೌಕಟ್ಟಿನಲ್ಲಿ ನಿಯಮಿತವಾಗಿ ಮಾಡಲಿ ಎಂದರು
ಇದೇ ವೇಳೆ ನೀರಾ ಬಾರ್ ತೆರೆಯುವ ಅಬಕಾರಿ ಸಚಿವರ ಪ್ರಸ್ತಾವನೆಯ ಬಗ್ಗೆಯೂ ಮಾತನಾಡಿದ ಅವರು, ರೈತರಿಗೆ ಅನುಕೂಲ ಆಗುವುದಾದರೆ ನೀರಾ ಬಾರ್ ತೆರೆಯುವುದರಲ್ಲಿ ತಪ್ಪೇನೂ ಇಲ್ಲ. ಈ ಹಿಂದೆ ದೇವೇಗೌಡರು ತೆಂಗಿನಿಂದ ನೀರಾ ತೆಗೆಯಲು ಹೊರಾಟ ಮಾಡಿದ್ದರು ಎಂದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
