ಹೊಳಲ್ಕೆರೆ:
ಶಿವಪುರ ಗ್ರಾಮದಲ್ಲಿ ಜ.31 ರಂದು ನಡೆಯಲಿರುವ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಸಂಪೂರ್ಣ ಸಹಕಾರ ನೀಡಲಿದೆ ಎಂದು ತಾಲೂಕು ಯೋಜನಾಧಿಕಾರಿ ಮೇದಪ್ಪ ಭರವಸೆ ನೀಡಿದರು.ಪಟ್ಟಣದ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಮಲ್ಲಾಡಿಹಳ್ಳಿ ಹಾಗೂ ಅರೆಹಳ್ಳಿ ಒಕ್ಕೂಟದ ಅಧ್ಯಕ್ಷರು, ಸೇವಾಪ್ರತಿನಿಧಿಗಳು, ಮೇಲ್ವಿಚಾರಕರ ಸಭೆಯಲ್ಲಿ ಮಾತನಾಡಿದರು.
ಕನ್ನಡ ನಾಡು, ನುಡಿ, ಸಾಹಿತ್ಯ, ಕಲೆಯನ್ನು ನಾವೆಲ್ಲರೂ ಪ್ರೀತಿಸಬೇಕು. ಹಾಗೆಯೇ ಆರಾಧಿಸಬೇಕು. ಸಾಹಿತ್ಯ ಹಿರಿಮೆಯನ್ನು ಹೆಚ್ಚಿಸಲು ಸಂಘದ ಪದಾಧಿಕಾರಿಗಳು ಸಿದ್ದರಿದ್ದು, ಸಮ್ಮೇಳನಕ್ಕೆ ಅಗತ್ಯವಾದ ಎಲ್ಲಾ ಸಹಕಾರ ನೀಡಲು ಬದ್ಧರಿದ್ದೇವೆ. ಆ ನಿಟ್ಟಿನಲ್ಲಿ ಒಕ್ಕೂಟದ ಪದಾಧಿಕಾರಿ ಹಾಗೂ ಮಹಿಳಾ ಒಕ್ಕೂಟಗಳು ಇಂದಿನಿಂದಲೇ ಎಲ್ಲಾ ರೀತಿಯ ಪೂರ್ವಸಿದ್ದತೆಯನ್ನು ಮಾಡಿಕೊಳ್ಳಬೇಕು ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಶಿವಪುರ ಒಕ್ಕೂಟದ ಅಧ್ಯಕ್ಷೆ ರುದ್ರಮ್ಮ ರಾಜಪ್ಪ ಮಾತನಾಡಿ, ಸಾಹಿತ್ಯ ಸಮ್ಮೆಳನದಲ್ಲಿ ನಡೆಯುವ ಸಮ್ಮೇಳನಾಧ್ಯಕ್ಷರ ಮೆರವಣಿಗೆಯಲ್ಲಿ ಸುಮಾರು 300ಕ್ಕೂ ಹೆಚ್ಚು ಮಹಿಳೆಯರಿಂದ ಪೂರ್ಣಕುಂಬ ಮೇಳ ನಡೆಯಲಿದೆ. ಹಾಗೆಯೇ ಸ್ತ್ರೀ ಶಕ್ತಿ ಸಂಘಗಳ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಮಹಿಳೆಯರು ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.
ಇದು ಕನ್ನಡದ ಹಬ್ಬವಾಗಿದ್ದು, ಇಲ್ಲಿ ಜಾತಿ ಭೇದ, ಮತ ಯಾವುದು ಇಲ್ಲ. ನಾವೆಲ್ಲರೂ ಕನ್ನಡಾಂಬೆಯ ಮಕ್ಕಳು, ಆಕೆಯ ಹಬ್ಬವನ್ನು ಒಗ್ಗಟ್ಟಾಗಿ ಆಚರಿಸಬೇಕಾಗಿರುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ.
ತಾಲೂಕಿನ ಯಾವುದೇ ಮೂಲೆಯಲ್ಲಿ ಸಾಹಿತ್ಯ ಸಮ್ಮೆಳನ ನಡೆದರೂ ಕೂಡ ನಾವೆಲ್ಲರೂ ಭಾಗವಹಿಸಬೇಕು. ಹಾಗೆಯೇ ಈ ಬಾರಿ ನಡೆಯುತ್ತಿರುವ ಸಮ್ಮೇಳನಕ್ಕೆ ತಾಲೂಕಿನ ಎಲ್ಲಾ ಒಕ್ಕೂಟದ ವ್ಯಾಪ್ತಿಯ ಮಹಿಳೆಯರು ಸ್ವಯಂ ಪ್ರೇರಿತರಾಗಿ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಬೇಕು.
ಅಲ್ಲಿ ನಡೆಯುವ ಚಟುವಟಿಕೆಗಳಲ್ಲಿ ಪಾಲ್ಗೊಂಡು ಸ್ವಯಂ ಸೇವಕರಾಗಿ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.
ತಾಲೂಕು ಕಸಾಪ ಅಧ್ಯಕ್ಷ ಲೋಕೇಶ್ ಮಾತನಾಡಿ, ಸಮ್ಮೆಳನಕ್ಕೆ ಆಗಮಿಸುವವರಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಿದ್ದು, ರಾಮಗಿರಿ, ಚಿಕ್ಕಜಾಜೂರು, ಹೊರಕೆರೆ ದೇವರಪುರ, ಹೊಳಲ್ಕೆರೆ ಹಾಗೂ ಮಲ್ಲಾಡಿಹಳ್ಳಿಯಿಂದ ಬಸ್ ವ್ಯವಸ್ಥೆ ಮಾಡಲಾಗಿದೆ. ಹಾಗೆಯೇ ಕುಂಬಮೇಳಕ್ಕೆ ಆಗಮಿಸುವ ಮಹಿಳೆಯರಿಗೆ ಬೆಳಗ್ಗೆ 7 ಗಂಟೆಗೆ ಬಸ್ ವ್ಯವಸ್ಥೆ ಮಾಡಲಾಗಿದ್ದು, ಕುಂಬ ಮೇಳದ ಉಸ್ತುವರಿ ಹೊತ್ತಿರುವ ರುದ್ರಮ್ಮ ಅವರೊಂದಿಗೆ ಸಂಪರ್ಕದಲ್ಲಿದ್ದು, 8 ಗಂಟೆಗೆ ಆರಂಭವಾಗುವ ಮೆರವಣಿಗೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ತಾಪಂ ಮಾಜಿ ಅಧ್ಯಕ್ಷ ಮೋಹನ್ ನಾಗರಾಜ್ ಮಾತನಾಡಿ, ಸಮ್ಮೇಳನದಲ್ಲಿ ನಡೆಯುವ ಎಲ್ಲಾ ಸಾಂಸ್ಕತಿಕ ಕಾರ್ಯಕ್ರಮಗಳಿಗೆ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಕನ್ನಡ ನಾಡು ನುಡಿ ಬಗ್ಗೆ ಹೆಚ್ಚು ಒತ್ತು ನೀಡಲಾಗಿದೆ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಶಿವಪುರ, ಅರೆಹಳ್ಳಿ ಒಕ್ಕೂಟದ ವ್ಯಾಪ್ತಿಯ ಅಧ್ಯಕ್ಷರು, ಮೇಲ್ವಿಚಾರಕರು, ಪದಾಧಿಕಾರಿಗಳು, ಸೇವಾಪ್ರತಿನಿಧಿಗಳು, ಸಿಬ್ಬಂದಿ ವರ್ಗದವರು, ಸಾಹಿತ್ಯ ಪರಿಷತ್ ಪದಾಧಿಕಾರಿಗಳು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
