ಚಿತ್ರದುರ್ಗ
ಬೆಸ್ಕಾಂ, ಆಹಾರ ಇಲಾಖೆ, ವಿಮಾ ಕಂಪನಿಯಲ್ಲಿಯೂ ಸಹಾ ಲಂಚದ ಹಾವಳಿ ಹೆಚ್ಚಾಗಿದೆ, ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ಹಣವನ್ನು ಬಾರ್‍ಗಳಲ್ಲಿ ವಸೂಲಿ ಮಾಡಲಾಗುತ್ತಿದೆ ಅಧಿಕಾರಿಗಳು ನಿಯಂತ್ರಣ ಮಾಡುವಲ್ಲಿ ವಿಫಲರಾಗಿದ್ದಾರೆ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ನೇರವಾಗಿ ಆರೋಪಿಸಿದ್ದಾರೆ.
ಚಿತ್ರದುರ್ಗ ತಾಲ್ಲೂಕು ಪಂಚಾಯಿತಿಯಲ್ಲಿ ಮಂಗಳವಾರ ನಡೆದ ತ್ರೈಮಾಸಿಕ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಸಾಮಾನ್ಯವಾಗಿ ದರೋಡೆಕೋರರು ರಾತ್ರಿ ಹೊತ್ತು ದರೋಡೆ ಮಾಡುತ್ತಾರೆ. ಆದರೆ ಬೆಸ್ಕಾಂ ಇಲಾಖೆಯಲ್ಲಿ ವಿದ್ಯುತ್ ಪರಿವರ್ತಕ ಅಳವಡಿಸಲು ರೈತರಿಂದ ನಲವತ್ತು ಐವತ್ತು ಸಾವಿರ ವಸೂಲಿ ಮಾಡಲಾಗಿದೆ. ಇದು ಹಗಲು ದರೋಡೆ. ನಾನು ಇದೇ ರೀತಿ ಆರೋಪ ಮಾಡಿದ್ದೇನೆ ಎಂಬುದನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರುವಂತೆ ಹೇಳಿದರು.
ಆಹಾರ ಇಲಾಖೆಯ ಅಧಿಕಾರಿಗಳಿಗೆ ಪ್ರತಿಯೊಂದು ನ್ಯಾಯಬೆಲೆ ಅಂಗಡಿಗಳಿಂದ ಮಾಮೂಲಿ ಬರುತ್ತದೆ. ಈ ತಾಲ್ಲೂಕಿನಲ್ಲಿ ನಗರ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ 1 ಲಕ್ಷ ಪಡಿತರ ಚೀಟಿಗಳಿವೆ. ಒಂದೊಂದು ಕಾರ್ಡಿಗೆ ಐದು ರೂಪಾಯಿ ಮಾಮೂಲಿ ನೀಡಲಾಗುತ್ತಿದೆ. ಅಂದರೆ ಒಂದು ತಿಂಗಳಿಗೆ ತಾಲ್ಲೂಕಿನಲ್ಲಿ 5 ಲಕ್ಷ ರೂಪಾಯಿ ಮಾಮೂಲಿ ನೀಡಲಾಗುತ್ತಿದೆ. ನ್ಯಾಯಬೆಲೆ ಅಂಗಡಿ ಮಾಲೀಕರು ಸರಿಯಾಗಿ ಪಡಿತರ ವಿತರಣೆ ಮಾಡಿದರೆ ಅಧಿಕಾರಿಗಳಿಗೆ ಹೆದರುವ ಅಗತ್ಯವಿಲ್ಲ. ಮಾಮೂಲಿ ನೀಡುತ್ತಿರುವುದು ಏತಕ್ಕಾಗಿ ಎಂದು ಪ್ರಶ್ನಿಸಿದರು.
ನ್ಯಾಯಬೆಲೆ ಅಂಗಡಿಗಳಲ್ಲಿ ಅಕ್ಕಿ ಬೇಳೆ ನೀಡಲಿ. ಆದರೆ ಕೆಲವು ನ್ಯಾಯಬೆಲೆ ಅಂಗಡಿಗಳಲ್ಲಿ ಸಾಬೂನು, ಅಡುಗೆ ಎಣ್ಣೆ ತೆಗೆದುಕೊಳ್ಳುವುದು ಕಡ್ಡಾಯ ಮಾಡಲಾಗಿದೆ. ಇವೆರಡನ್ನು ತೆಗೆದುಕೊಳ್ಳದಿದ್ದರೆ ಪಡಿತರ ನೀಡುವುದಿಲ್ಲ ಎಂಬ ದೂರು ಬಂದಿದೆ ಎಂದಾಗ ಗ್ರಾಮೀಣ ವಿಭಾಗದ ಆಹಾರ ನಿರೀಕ್ಷಕರು ಇದು ನಗರದಲ್ಲಿದೆ. ಗ್ರಾಮೀಣ ನ್ಯಾಯಬೆಲೆ ಅಂಗಡಿಗಳಲ್ಲಿ ಇಲ್ಲ ಎಂದರು. ಸಭೆಗೆ ಆಗಮಿಸಿದ ನಗರ ಪ್ರದೇಶದ ಆಹಾರ ನಿರೀಕ್ಷಕಿ ಶಭಾನಾ, ಯಾವುದೇ ನ್ಯಾಯಬೆಲೆ ಅಂಗಡಿಗಳಲ್ಲಿ ಕಡ್ಡಾಯಗೊಳಿಸಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ಹಿಂದೆ ಇದ್ದ ಆಹಾರ ನಿರೀಕ್ಷಕರು ಸುಮಾರು 3800 ಬಡವರಿಗೆ ಅಡುಗೆ ಅನಿಲ ಇದೆ ಎಂದು ಬರೆದಿರುವುದರಿಂದ ಅನೇಕರು ಉಜ್ವಲಾ ಯೋಜನೆಯಿಂದ ವಂಚಿತರಾಗಿದ್ದಾರೆ. ಈ ಅಧಿಕಾರಿ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು. ಬಡವರಿಗೆ ಅನುಕೂಲವಾಗುವಂತೆ ಪಡಿತರ ಚೀಟಿಗಳನ್ನು ಬದಲಾಯಿಸುವಂತೆ ತಿಪ್ಪಾರೆಡ್ಡಿ ಸೂಚನೆ ನೀಡಿದರು.
ಪಂಚಾಯಿತಿ ಅಧ್ಯಕ್ಷರೊಬ್ಬರು ಫಸಲ್ ಬಿಮಾ ಯೋಜನೆಯಡಿ ಬೆಳೆ ಹಾನಿ ಹೆಚ್ಚಾಗಿದೆ ಎಂದು ವರದಿಯನ್ನು ನೀಡಲು ವಿಮಾ ಕಂಪನಿ ಪ್ರತಿನಿಧಿಗಳಿಗೆ ಲಂಚ ನೀಡಿದ್ದಾರೆ. ಇದು ಕೇವಲ ಒಂದು ಪಂಚಾಯಿತಿಯಲ್ಲಿ ಮಾತ್ರ. ಇದರಿಂದ ಅಕ್ಕಪಕ್ಕದ ರೈತರಿಗೆ ತೊಂದರೆಯಾಗಲಿದೆ. ವಿಮಾ ಪರಿಹಾರ ನೀಡುವಲ್ಲಿಯೂ ತಾರತಮ್ಯ ಮಾಡಲಾಗುತ್ತಿದೆ. ಇದನ್ನು ಸರಿಪಡಿಸಬೇಕು ಎಂದರು.
ಎಪಿಎಂಸಿ ಯಾರ್ಡ್‍ನಲ್ಲಿ ಅಡಿಕೆ ವ್ಯಾಪಾರಿಗಳಿಂದ ಯಾವುದೇ ದಾಖಲೆ ಇಲ್ಲದೆ ಹಣ ಪಡೆಯಲಾಗುತ್ತಿದೆ ಎಂದು ಶಾಸಕರು ಆರೋಪಿಸಿದಾಗ ಇದಕ್ಕೆ ಧನಿಗೂಡಿಸಿದ ತಾಲ್ಲೂಕುಪಂಚಾಯತ್ ಅಧ್ಯಕ್ಷ ಲಿಂಗರಾಜು, ಒಂದೊಂದು ಲಾರಿಯಿಂದ ಒಂದು ಲಕ್ಷ ರೂಪಾಯಿ ವಸೂಲಿ ಮಾಡಲಾಗುತ್ತಿದೆ. ಎಪಿಎಂಸಿ ಅಧ್ಯಕ್ಷರು, ನಿರ್ದೇಶಕರು, ಕಾರ್ಯದರ್ಶಿ ಹಾಗೂ ಇತರರು ಲಾರಿ ತಪಾಸಣೆ ಮಾಡಿ ಹಣ ಪಡೆಯುತ್ತಿದ್ದಾರೆ. ಲಾರಿ ತಪಾಸಣೆ ಮಾಡಲು ಯಾರಿಗೆ ಅಧಿಕಾರ ಇದೆ ಎಂದು ಪ್ರಶ್ನಿಸಿದರು. ಇದಕ್ಕೆ ಎಪಿಎಂಸಿ ಅಧಿಕಾರಿಗಳು ಹಿರಿಯ ಅಧಿಕಾರಿಗಳು ಸಭೆಗೆ ಬಂದಿಲ್ಲ ಅವರ ಗಮನಕ್ಕೆ ತರುವುದಾಗಿ ಹೇಳಿದರು.
ಸೂರು ಇಲ್ಲದವರಿಗೆ ಸೂರು ನಿವೇಶನ ಇಲ್ಲದವರೆಗೆ ನಿವೇಶನ ನೀಡಬೇಕು. ಈ ತಿಂಗಳ ಅಂತ್ಯದವರೆಗೂ ಅರ್ಜಿ ಸಲ್ಲಿಸಲು ಅವಕಾಶ ಇದ್ದು ಅರ್ಜಿ ಸಲ್ಲಿಸುವಂತೆ ಜನರಿಗೆ ಮಾಹಿತಿ ನೀಡಬೇಕು. ವಸತಿ ಯೋಜನೆಯಡಿ ಮನೆ ಕಟ್ಟಿಕೊಂಡವರಿಗೆ ಹಣ ಬಿಡುಗಡೆಯಾಗಿಲ್ಲ. ಕೂಡಲೇ ಹಣ ಬಿಡುಗಡೆ ಮಾಡಿಸುವಂತೆ ಹೇಳಿದರು.
ಜಿಲ್ಲಾಪಂಚಾಯತ್ ಸದಸ್ಯರಾದ ನರಸಿಂಹರಾಜು, ಕೃಷ್ಣಮೂರ್ತಿ, ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಾನಾಯ್ಕ್, ಸಹಾಯಕ ಅಧಿಕಾರಿ ಹನುಮಂತಪ್ಪ ಹಾಗೂ ಇತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
