ಜೋಗುಪಾಳ್ಯದ ಕುಖ್ಯಾತ ಕಳ್ಳನ ಬಂಧನ….!!!

ಬೆಂಗಳೂರು

        ಗಂಭೀರ ಸ್ವರೂಪದ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವ ಆರೋಪಿಗಳ ಮೇಲೆ ಗುಂಡಿನ ದಾಳಿಯನ್ನು ಮುಂದುವರೆಸಿರುವ ನಗರ ಪೊಲೀಸರು ಮೋಜಿನ ಜೀವನ ನಡೆಸಲು ಅಪ್ರಾಪ್ತ ಬಾಲಕರನ್ನೊಳಗೊಂಡ ಗ್ಯಾಂಗ್ ಕಟ್ಟಿಕೊಂಡು 50ಕ್ಕೂ ಹೆಚ್ಚು ಕಡೆಗಳಲ್ಲಿ ಕಳ್ಳತನ ಮಾಡಿದ್ದ ಜೋಗುಪಾಳ್ಯದ ಕುಖ್ಯಾತ ಕಳ್ಳ ಮುರಳಿ ಅಲಿಯಾಸ್ ಮುರಳೀಧರ್ ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ.

       ಸುಮಾರು 50 ಕಳವು ಕೃತ್ಯಗಳಲ್ಲಿ ಭಾಗಿಯಾಗಿದ್ದರೂ ಸಿಗದೇ ಕೆಲ ದಿನಗಳ ಹಿಂದಷ್ಟೇ ಕ್ಯಾಬ್ ಚಾಲಕನೊಬ್ಬನನ್ನು ಕೊಲೆಗೈದು ಸವಾಲಾಗಿ ಪರಿಣಮಿಸಿದ್ದ ಮುರುಳಿಗೆ ಬೈಯಪ್ಪನಹಳ್ಳಿ ಪೊಲೀಸರು ಗುಂಡಿನ ರುಚಿ ತೋರಿಸಿದ್ದಾರೆ.

      ಪೊಲೀಸರ ಗುಂಡೇಟು ತಗುಲಿ ಎಡಗಾಲಿಗೆ ಗಾಯಗೊಂಡಿರುವ ಜೋಗುಪಾಳ್ಯದ ಮುರಳಿ (25) ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಬಂಧಿಸಲು ಹೋದಾಗ ಆರೋಪಿ ಚಾಕುವಿನಿಂದ ಹಲ್ಲೆ ಮಾಡಿದ್ದರಿಂದ ಬೈಯಪ್ಪನಹಳ್ಳಿ ಪೊಲೀಸ್ ಠಾಣೆ ಮುಖ್ಯಪೇದೆ ವಿಜಯ್‍ಕುಮಾರ್ ಕೈಗೆ ಗಾಯಗೊಂಡು ಅಭಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

       ಈತನ ಗ್ಯಾಂಗ್‍ನಲ್ಲಿ ಕಳವು ಕೃತ್ಯದಲ್ಲಿ ತೊಡಗಿದ್ದ ಜೋಗುಪಾಳ್ಯದ ಪೀಟರ್ (25)ನನ್ನು ಬಂಧಿಸಿ ಇಬ್ಬರು ಅಪ್ರಾಪ್ತ ಬಾಲಕರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲಾಗಿದೆ ಎಂದು ಪೂರ್ವವಿಭಾಗದ ಡಿಸಿಪಿ ರಾಹುಲ್‍ಕುಮಾರ್ ಶಹಾಪುರವಾಡ ಅವರು ತಿಳಿಸಿದ್ದಾರೆ.

ಅಪ್ರಾಪ್ತರ ಗ್ಯಾಂಗ್ ಕಟ್ಟಿದ್ದ

        ವಿದ್ಯಾಭ್ಯಾಸವನ್ನು ಅರ್ಧಕ್ಕೆ ಬಿಟ್ಟು ಕೆಲಸಕ್ಕೂ ಹೋಗದೆ ಮೋಜಿನ ಜೀವನ ನಡೆಸಲು ಕಳ್ಳತನ, ಸುಲಿಗೆಗಿಳಿದಿದ್ದ ಮುರಳಿ, ಇಬ್ಬರು ಅಪ್ರಾಪ್ತರನ್ನೊಳಗೊಂಡ ನಾಲ್ವರ ಗ್ಯಾಂಗ್ ಕಟ್ಟಿಕೊಂಡು ಬೈಯಪ್ಪನಹಳ್ಳಿ ಸುತ್ತಮುತ್ತಲ ಪ್ರದೇಶಗಳಲ್ಲಿ ಮಧ್ಯರಾತ್ರಿ ಸ್ಕೂಟರ್‍ನಲ್ಲಿ ಸುತ್ತಾಡುತ್ತ ಒಂಟಿಯಾಗಿ ಓಡಾಡುವವರನ್ನು ಅಡ್ಡಗಟ್ಟಿ ಸುಲಿಗೆ, ಕಳ್ಳತನ ಮಾಡಿ ಎಲ್ಲರೂ ಸೇರಿ ಮೋಜು ಮಾಡುತ್ತಿದ್ದರು.

        ಬೈಯಪ್ಪನಹಳ್ಳಿ ಸುತ್ತಮುತ್ತಲ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ 50ಕ್ಕೂ ಹೆಚ್ಚು ಸುಲಿಗೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಈ ಗ್ಯಾಂಗ್, ಪೆÇಲೀಸರಿಗೆ ಕಣ್ತಪ್ಪಿಸಿ ಪರಾರಿಯಾಗುತ್ತ ಸವಾಲಾಗಿ ಪರಿಣಮಿಸಿತ್ತು. ಪೊಲೀಸರು ಬೆನ್ನು ಬಿದ್ದಿರುವುದು ಗೊತ್ತಿದ್ದರೂ ಗ್ಯಾಂಗ್ ಕಳೆದ ಡಿ. 3 ರಂದು ರಾತ್ರಿ 1.30ರ ವೇಳೆ ಬೈಯಪ್ಪನಹಳ್ಳಿಯ ಜೋಗುಪಾಳ್ಯದ ಬಳಿ ಹಾಸನದ ಅರಸೀಕೆರೆ ಮೂಲದ ಕ್ಯಾಬ್ ಚಾಲಕ ಮೋಹನ್ (28) ಎಂಬುವರಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿ ಮೊಬೈಲ್, ನಗದು ಸುಲಿಗೆ ಮಾಡಿ ಪರಾರಿಯಾಗಿತ್ತು.

          ಕೃತ್ಯ ನಡೆಸುವ ವೇಳೆ ಭಯಭೀತನಾಗಿ ಪರಾರಿಯಾಗಿದ್ದ ಮೋಹನ ಸ್ನೇಹಿತ ಸಂದೀಪ್ ನೀಡಿದ ಮಾಹಿತಿಯಾಧರಿಸಿ ಗ್ಯಾಂಗ್‍ನ ಪತ್ತೆಗೆ ಬೈಯಪ್ಪನಹಳ್ಳಿ ಪೊಲೀಸ್ ಇನ್ಸ್‍ಪೆಕ್ಟರ್ ರಮೇಶ್ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು.

ಎಡಗಾಲಿಗೆ ಗುಂಡು

            ತಂಡವು ಕಾರ್ಯಾಚರಣೆ ಕೈಗೊಂಡು ಮುರಳಿ ಬುಧವಾರ ಮಧ್ಯರಾತ್ರಿ ಬೈಯಪ್ಪನಹಳ್ಳಿಯ ಕತ್ತಾಳಿಪಾಳ್ಯದ ಬಳಿ ಹೋಗುತ್ತಿರುವ ಮಾಹಿತಿಯಾಧರಿಸಿ ಗುರುವಾರ ಮುಂಜಾನೆ ಸುಮಾರು 3.30ರ ವೇಳೆ ಹೋಂಡಾ ಆಕ್ಟಿವಾ ಸ್ಕೂಟರ್‍ನಲ್ಲಿ ಹೋಗುತ್ತಿದ್ದ ಮುರಳಿಯನ್ನು ಬೆನ್ನಟ್ಟಿತು.

           ಸ್ಕೂಟರ್‍ನ್ನು ತಡೆದು ಬಂಧಿಸಲು ಹೋದಾಗ ಮುರಳಿ ಓಡಿ ಹೋಗಿದ್ದು, ಆತನನ್ನು ಬೆನ್ನಟ್ಟಿ ಹಿಡಿಯಲು ಹೋದ ಮುಖ್ಯಪೇದೆ ವಿಜಯಕುಮಾರ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಮುಂದಾಗಿದ್ದಾನೆ.

         ಶರಣಾಗುವಂತೆ ಇನ್ಸ್‍ಪೆಕ್ಟರ್ ರಮೇಶ್ ಅವರು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಎಚ್ಚರಿಕೆ ನೀಡಿದರೂ ಆರೋಪಿ ಓಡಿ ಹೋಗುತ್ತಿದ್ದರಿಂದ ಮತ್ತೊಂದು ಗುಂಡು ಹಾರಿಸಿದ್ದು, ಎಡಗಾಲಿಗೆ ಆ ಗುಂಡು ತಗುಲಿ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ.ಕೂಡಲೇ ಆತನನ್ನು ವಶಕ್ಕೆ ತೆಗೆದುಕೊಂಡು ಬೌರಿಂಗ್ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ರಾಹುಲ್‍ಕುಮಾರ್ ತಿಳಿಸಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link