2020-21 ಹೊಸ ಬಜೆಟ್‍ನಲ್ಲಿ ಹೊಸ ನಿರೀಕ್ಷೆಗಳು…!

     2020-21ನೇ ಹಣಕಾಸು ವರ್ಷದ ಬಜೆಟ್ ಘೋಷಣೆ ಬಗ್ಗೆ ಜನ ಸಾಮಾನ್ಯರು, ಉದ್ಯಮಿಗಳು, ಸರ್ಕಾರಿ ಉದ್ಯೋಗಿಗಳು, ರಿಯಲ್ ಎಸ್ಟೇಟ್ ವಹಿವಾಟುದಾರರಲ್ಲಿ ಅತಿ ಹೆಚ್ಚಿನ ಕುತೂಹಲ ಮೂಡಿದೆ. ದೇಶದ ಆರ್ಥಿಕತೆಯು ಕಳೆದ ಹನ್ನೊಂದು ವರ್ಷಗಳಲ್ಲಿ ಕನಿಷ್ಠ ಮಟ್ಟದ ಆರ್ಥಿಕ ಪ್ರಗತಿ ಸಾಧಿಸುತ್ತಿರುವಾಗ ಆರ್ಥಿಕತೆಯ ವಿವಿಧ ವಲಯಗಳು ಉನ್ನತಿ ಸಾಧಿಸಲು ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರ ಎರಡನೇ ಬಜೆಟ್‍ನ ಮಂತ್ರದಂಡವು ಯಾವ ರೀತಿ ಬಳಸಲಿದ್ದಾರೆ ಎಂಬುದನ್ನು ಕಾತುರದಿಂದ ನೋಡುತ್ತಿವೆ.

    ರಾಷ್ಟ್ರದ ಆರ್ಥಿಕತೆಯ ಪ್ರಮುಖ ಮಾನದಂಡಗಳಾದ ಜಿಡಿಪಿ ದರ, ರಫ್ತು, ಬಂಡವಾಳ ಹೂಡಿಕೆ, ವಾಹನಗಳ ಮಾರಾಟ, ಉದ್ಯೋಗಗಳ ಅವಕಾಶ, ಸರಕು ಮತ್ತು ಸೇವೆಗಳ ಬೇಡಿಕೆ, ಜಿಎಸ್‍ಟಿ ದರದಲ್ಲಿನ ಗೊಂದಲ ಮುಂತಾದ ವಲಯಗಳು ಕಳಪೆ ಸಾಧನೆ ತೋರಿಸುತ್ತಿದೆ. ಉತ್ಪಾದಕತೆ ಹಾಗೂ ಬಳಕೆ ಹೆಚ್ಚಿಸಿ ಆರ್ಥಿಕ ಚೇತರಿಕೆ ನೀಡಲು ಮೂಲ ಸೌಕರ್ಯದಲ್ಲಿ ಬಂಡವಾಳ ಹೂಡಿಕೆಯು ಹೆಚ್ಚಳವಾಗಬೇಕಿದೆ. ಬೇಡಿಕೆ ಹೆಚ್ಚಿಸಲು ಬಳಕೆದಾರರ ಜೇಬಿನಲ್ಲಿ ಹೆಚ್ಚು ಹಣ ಇರುವಂತೆ ಮಾಡಬೇಕಾಗಿದೆ. ತೆರಿಗೆ ಸಂಗ್ರಹ ಕುಸಿತಗೊಂಡಿರುವುದರಿಂದ ಪರ್ಯಾಯ ಸಂಪನ್ಮೂಲ ಮಾರ್ಗಗಳು ಯಶಸ್ವಿಯಾಗುತ್ತವೆಯಾ? ಎಂಬ ಎಂಬುದನ್ನು ಕಾದುನೋಡಬೇಕಿದೆ.

ಹೊಸ ನಿರೀಕ್ಷೆಗಳು:

    2019-20ನೇ ವರ್ಷದಲ್ಲಿ 27.86 ಲಕ್ಷ ಕೋಟಿ ವಾರ್ಷಿಕ ಬಜೆಟ್ ವೆಚ್ಚವನ್ನು ಸರ್ಕಾರ ನಿಗದಿಗೊಳಿಸಿತ್ತು ಹಾಗೂ 20.82 ಲಕ್ಷ ಕೋಟಿ ಸಾಲ ಹೊರತುಪಡಿಸಿದ ಸರ್ಕಾರದ ವರಮಾನವಾಗಿದೆ. ಇತ್ತೀಚಿನ ದಿನಗಳಲ್ಲಿ ಜಿಎಸ್‍ಟಿ ಗೊಂದಲ ಹಾಗೂ ನಿರುದ್ಯೋಗ ಹೆಚ್ಚಳ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. ಸರ್ಕಾರದ ವೆಚ್ಚ ಹೆಚ್ಚಿಸಿದರೆ ಆರ್ಥಿಕ ಕೊರತೆಯನ್ನು ಜಿಡಿಪಿಯ ಶೇ.3ಕ್ಕೆ ಮಿತಿಗೊಳಿಸುವ ಉದ್ದೇಶ ವಿಫಲಗೊಳ್ಳಲಿದೆ.

   ಕೃಷಿ ವಲಯ, ನವೋದ್ಯಮ, ಹಣಕಾಸು ತಂತ್ರಜ್ಞಾನ, ಡಿಜಿಟಲ್ ವಲಯ, ಸುಲಭವಾಗಿ ಉದ್ದಿಮೆ ಆರಂಭಿಸಲು ಒದಗಿಸಬೇಕಾದ ಅನುಕೂಲತೆಗಳು, ಖಾಸಗಿ ಬಂಡವಾಳ ಹೂಡಿಕೆಗೆ ಉತ್ತೇಜನ, ರಫ್ತುದಾರಿಗೆ ಆರ್ಥಿಕ ನೆರವು, ಬ್ಯಾಂಕ್ ವಲಯದ ಕಾರ್ಮಿಕ ನೀತಿ ಸುಧಾರಣೆ, ಕೃಷಿ ಕ್ಷೇತ್ರದ ಸುಧಾರಣೆ, ಹೆದ್ದಾರಿ, ರೈಲ್ವೆ ಹಾಗೂ ಕೈಗಾರಿಕಾ ಸುಧಾರಣೆ, ಹೂಡಿಕೆದಾರರ ವಿಶ್ವಾಸವೃದ್ಧಿಗೆ, ಆರ್ಥಿಕತೆಯ ಅವಲೋಕನಕ್ಕೆ ಸ್ವತಂತ್ರ ಆಯೋಗ ರಚನೆ ಹಾಗೂ ಕೌಟುಂಬಿಕ ಉದ್ಯಮ ಸಮೂಹಗಳಿಗೆ ಸಾರ್ವಜನಿಕ ಕಂಪೆನಿಗಳ ಮಾರಾಟದಿಂದ ದೂರ ಇರುವ ಬಗ್ಗೆ ಮಾರ್ಗೋಪಾ ಯಗಳ ಕುರಿತಂತೆ ಈ ಬಜೆಟ್‍ನಲ್ಲಿ ಹೊಸತನ್ನು ನಿರೀಕ್ಷಿಸಲಾಗಿದೆ. ಆರೋಗ್ಯ, ಪ್ರವಾಸೋದ್ಯಮ, ಶಿಕ್ಷಣ ವಲಯದಲ್ಲಿ ಬಜೆಟ್‍ನ ಹೊಸ ಕೊಡುಗೆಗಳ ಬಗ್ಗೆ ಹೆಚ್ಚಿನ ನಿರೀಕ್ಷ್ಷಣೆ ಇದೆ.

   ವರಮಾನ ಕೊರತೆ ವೆಚ್ಚ ಹೆಚ್ಚಳ, ಕೊರತೆ ಕಡಿವಾಣ ಸವಾಲುಗಳನ್ನು ಹಣಕಾಸು ಸಚಿವರು ಸಮರ್ಥವಾಗಿ ನಿಭಾಯಿಸುವರೆ? ಎನ್ನುವ ಕುತೂಹಲದ ನಿರೀಕ್ಷೆಯಲ್ಲಿ ನಾವಿದ್ದೇವೆ. ಬೇಡಿಕೆ ಹೆಚ್ಚಿಸಲು ಆದಾಯ ತೆರಿಗೆಯಲ್ಲಿ ಗಮನಾರ್ಹ ರಿಯಾಯಿತಿ ನೀಡುತ್ತಿದೆ ಎಂಬುದು ವರಮಾನದಾರರ ನಿರೀಕ್ಷೆಯಾಗಿದೆ. ತೆರಿಗೆ ಸಂಗ್ರಹದಲ್ಲಿನ ಕೊರತೆಯ ಕಾರಣಕ್ಕೆ ಸಮಾಜದ ಮಧ್ಯಮವರ್ಗದ ಜನ ಹಾಗೂ ವೇತನದಾರರಿಗೆ ವೈಯಕ್ತಿಕ ಆದಾಯ ತೆರಿಗೆಯಲ್ಲಿ ಬಹುನಿರೀಕ್ಷಿತ ಅರ್ಥಪೂರ್ಣ ಕೊಡುಗೆ ಇರಲಿಕ್ಕಿಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ. ಆರ್ಥಿಕತೆ ಪುಟಿದೇಳಲು ಹಣಕಾಸು ನೀತಿ ಹಾಗೂ ಮುಂಗಡಪತ್ರದಿಂದಷ್ಟೇ ಸಾಧ್ಯವಿಲ್ಲ; ವಿತ್ತೀಯ ನೀತಿ ಹಾಗೂ ಆರ್ಥಿಕತೆಯ ಸುಧಾರಣೆಯ ಕ್ರಮಗಳು ಕೈಗೊಂಡರೆ ಮಾತ್ರ ರಾಷ್ಟ್ರದ ಅರ್ಥವ್ಯವಸ್ಥೆ ಚೇತರಿಸಿಕೊಳ್ಳಲಿದೆ.

ಆರ್ಥಿಕ ಉತ್ತೇಜನದ ಬಗ್ಗೆ ವಿಭಿನ್ನ ಧೋರಣೆ:

   ಆರ್ಥಿಕತೆ ಪ್ರಗತಿ ಹೊಂದಲು ದೊಡ್ಡ ಪ್ರಮಾಣದ ಹಣಕಾಸು ನೆರವು ನೀಡಲು ಸಾಧ್ಯವಿಲ್ಲದಿರುವಾಗ ಸರ್ಕಾರ ಇತರ ಮಾರ್ಗಗಳನ್ನು ಕಂಡುಕೊಳ್ಳಬೇಕಾಗಿದೆ. ಇತ್ತೀಚಿನ ವರ್ಷಗಳಲ್ಲಿ ಸರ್ಕಾರವು ವಿತ್ತೀಯ ಕೊರತೆಗಳ ಬಗ್ಗೆ ಹಾಗೂ ಅರ್ಥಶಾಸ್ತ್ರಜ್ಞರಲ್ಲಿ ವಿವಿಧ ಬಿನ್ನ ನಿಲುವುಗಳು ತಳೆಯುತ್ತಿವೆ. ಮಂದಗತಿಯ ಆರ್ಥಿಕತೆಗೆ ಉತ್ತೇಜನ ನೀಡುವುದರ ಬಗ್ಗೆ ಪರಿಣಿತರು ವಿಭಿನ್ನ ಧೋರಣೆ ತಳೆದಿರುವುದು ಆಶ್ಚರ್ಯ ಉಂಟುಮಾಡಿದೆ. ಈ ಗೊಂದಲವು 2020-21ನೇ ಮುಂಗಡಪತ್ರದಲ್ಲಿಯೂ ಪ್ರತಿಫಲಗೊಳ್ಳುವುದೋ ಅಥವಾ ಸ್ಪಷ್ಟ ದಾರಿಗೆ ಮಾರ್ಗೋಪಾಯ ಸೂಚಿಸುವುದೋ ಎಂಬುದು ಇಂದು ಗೊತ್ತಾಗಲಿದೆ.

   ಈ ನಿರೀಕ್ಷಿತ ಬಜೆಟ್‍ಗೆ ವಿರೋಧ ಪಕ್ಷಗಳು ಹಾಗೂ ಉದ್ಯಮ ಪಂಡಿತರು ಮತ್ತು ವಿವಿಧ ವಲಯಗಳ ಪ್ರತಿಕ್ರಿಯೆ ಹೇಗಿರುತ್ತದೆ ಎಂಬುದು ಇಂದು ಅನಾವರಣಗೊಳ್ಳಲಿದೆ. ಈ ಮುಂಗಡಪತ್ರವು ಇಂದಿನ ಆರ್ಥಿಕ ಕುಸಿತಕ್ಕೆ ಯಾವ ಪರ್ಯಾಯ ಮಾರ್ಗೋಪಾಯಗಳನ್ನು ಸೂಚಿಸಲಿದೆ ಎಂಬುದನ್ನು ಕಾತುರದಿಂದ ನೋಡುತ್ತಿದ್ದೇವೆ ಹಾಗೂ ಕರ್ನಾಟಕ ಸರ್ಕಾರದ ಪ್ರಕೃತಿ ವಿಕೋಪಕ್ಕೆ ಈ ಮುಂಗಡದಲ್ಲಿ ವಿಶೇಷ ಅನುದಾನವು ಸಿಗುವ ನಿರೀಕ್ಷೆಯಿದೆ. ತುಮಕೂರು ನಗರಕ್ಕೂ ಮೆಟ್ರೋ ವಿಸ್ತರಿಸುವ ಯೋಜನೆ ಸಾಕಾರಗೊಳ್ಳುವುದೆ? ಎಂಬುದನ್ನು ಕಾದುನೋಡಬೇಕಿದೆ.

ಪ್ರೊ. ಪರಮಶಿವಯ್ಯ ಪಿ.
ಪ್ರಾಧ್ಯಾಪಕರು
ತುಮಕೂರು ವಿಶ್ವವಿದ್ಯಾನಿಲಯ
ಮೊ. 9448533326

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap