ಇಂದು ಫಲಿತಾಂಶ ಪ್ರಕಟ : ಯಾರಿಗೆ ಒಲಿಯಲಿದೆ ಅದೃಷ್ಠ

ಬೆಂಗಳೂರು

     ಮತಗಟ್ಟೆ ಸಮೀಕ್ಷೆಗಳಿಂದ ರಾಜಕೀಯ ವಲಯದಲ್ಲಿ ಸಂಚಲನ ಮೂಡಿದ್ದು, ಬಿಜೆಪಿ ನೇತೃತ್ವದ ಎನ್‍ಡಿಎ 300 ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆದರೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ 125ರ ಆಸುಪಾಸಿನಲ್ಲಿವೆ ಎಂಬುದನ್ನು ಸಮೀಕ್ಷೆಗಳು ತಿಳಿಸಿದ್ದು, ಒಂದು ಕಡೆ ಬಿಜೆಪಿಯವರು ಸಂಭ್ರಮ ಮಾಡಿಕೊಳ್ಲಲು ಸಜ್ಜಾಗುತ್ತಿದ್ದಾರೆ. ಇನ್ನೊಂದು ಕಡೆ ಬಿಜೆಪಿಯಲ್ಲಿ ಸೋಲಿಸಲೇಬೇಕು ಎಂದು ಪಣ ತೊಟ್ಟಿರುವ ಕಾಂಗ್ರೆಸ್ ನೇತೃತ್ವದ ಪಕ್ಷಗಳು ಸ್ವಲ್ಪ ಅಸಮಾಧಾನವಿದ್ದರೂ ಗೆಲ್ಲುವ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

        2019ರ ಪ್ರಸ್ತುತ ಚುನಾವಣೆಗೆ ಸಂಬಂಧಿಸಿದಂತೆ ವಿವಿಧ ಸಮೀಕ್ಷೆಗಳು ಈ ಕೆಳಕಂಡಂತೆ ತಮ್ಮ ಸಮೀಕ್ಷಾ ವರದಿಗಳನ್ನು ಪ್ರಕಟಿಸಿವೆ.

       ಟೈಮ್ಸ್ ನೌ ಎನ್‍ಡಿಎಗೆ 306, ಯುಪಿಎಗೆ 132 ಸ್ಥಾನಗಳನ್ನು, ಚಾಣಕ್ಯ ಸಂಸ್ಥೆಯು ಎನ್‍ಡಿಎಗೆ 350, ಯುಪಿಎಗೆ 95, ಇಂಡಿಯಾ ಟುಡೇ ಸಮೀಕ್ಷೆಯು ಎನ್‍ಡಿಎಗೆ 339ರಿಂದ 365, ಯುಪಿಎಗೆ 77ರಿಂದ 108 ಸ್ಥಾನಗಳನ್ನು ನೀಡಿದೆ. ನ್ಯೂಸ್-18 ಸಂಸ್ಥೆಯು ಎನ್‍ಡಿಎಗೆ 336, ಯುಪಿಎಗೆ 82 ಸ್ಥಾನಗಳನ್ನು ಹೇಳಿದೆ. ಸಿ ಓಟರ್ ಸಮೀಕ್ಷೆಯು ಎನ್‍ಡಿಎಗೆ 287, ಯುಪಿಎಗೆ 128, ಎಬಿಪಿ ನ್ಯೂಸ್ ಎನ್‍ಡಿಎಗೆ 267, ಯುಪಿಎಗೆ 127 ಸ್ಥಾನಗಳನ್ನು, ನ್ಯೂಸ್ ನೇಷನ್ ಎನ್‍ಡಿಎಗೆ 282ರಿಂದ 290 ಹಾಗೂ ಯುಪಿಎಗೆ 118 ರಿಂದ 126 ಸ್ಥಾನಗಳನ್ನು ನೀಡಿದೆ. ನೇತಾ ನ್ಯೂಸ್ ಎಕ್ಸ್ ಸಂಸ್ಥೆಯು ಎನ್‍ಡಿಎಗೆ 242, ಯುಪಿಎಗೆ 164 ಸ್ಥಾನಗಳನ್ನು, ಇಂಡಿಯಾ ನ್ಯೂಸ್ ಸಂಸ್ಥೆಯು ಎನ್‍ಡಿಎಗೆ 287, ಯುಪಿಎಗೆ 128 ಸ್ಥಾನಗಳನ್ನು, ಜಾನ್‍ಕೀಬಾತ್ ಸಮೀಕ್ಷೆಯು ಎನ್‍ಡಿಎಗೆ 305, ಯುಪಿಎಗೆ 124 ಸ್ಥಾನಗಳನ್ನು ಪ್ರಕಟಿಸಿದೆ.

      ಒಟ್ಟು 11 ವಿವಿಧ ಏಜೆನ್ಸಿಗಳು ಸಮೀಕ್ಷೆಗಳನ್ನು ನಡೆಸಿದ್ದು, ಒಟ್ಟಾರೆ ಸಮೀಕ್ಷೆಯ ಪ್ರಕಾರ (ಅವರೇ ಪ್ರಕಟಿಸಿರುವಂತೆ) ಬಿಜೆಪಿ ನೇತೃತ್ವದ ಎನ್‍ಡಿಎ ಮೈತ್ರಿಕೂಟ 300ರಿಂದ 306 ಸ್ಥಾನಗಳನ್ನು ಪಡೆಯುವುದಾಗಿ, ಕಾಂಗ್ರೆಸ್ ನೇತೃತ್ವದ ಯುಪಿಎ ಅಂಗಪಕ್ಷಗಳು 120ರಿಂದ 124 ಸ್ಥಾನಗಳನ್ನು ಪಡೆಯುವುದಾಗಿ ಹೇಳಿಕೊಂಡಿವೆ. ಇತರೆ ಪಕ್ಷಗಳು 87ರಿಂದ 122 ಸ್ಥಾನಗಳನ್ನು ಪಡೆಯುವುದಾಗಿ ಸಮೀಕ್ಷಾ ವರದಿಗಳು ತಿಳಿಸುತ್ತವೆ.

       ಇನ್ನೂ ಕರ್ನಾಟಕ ರಾಜ್ಯವನ್ನು ಗಮನಿಸಿದರೆ, ಎಲ್ಲಾ ಸಮೀಕ್ಷೆಗಳ ಪ್ರಕಾರ ಬಿಜೆಪಿ ಮುನ್ನಡೆ ಸಾಧಿಸಲಿದೆ. ಸಿಓಟರ್ ಸಮೀಕ್ಷೆಯಲ್ಲಿ ಬಿಜೆಪಿ 18, ಕಾಂಗ್ರೆಸ್ 7, ಜೆಡಿಎಸ್ 2 ಮತ್ತು ಇತರೆ ಒಂದು ಸ್ಥಾನದಲ್ಲಿ ಜಯಗಳಿಸಲಿದ್ದಾರೆ ಎಂದು ಹೇಳಿದೆ. ಇಂಡಿಯಾ ಟುಡೇ ಮತ್ತು ಆಕ್ಸಿಸ್ ಸಂಸ್ಥೆಯೂ ಕೂಡ ಕರ್ನಾಟಕದಲ್ಲಿ ಬಿಜೆಪಿ ಮುನ್ನಡೆ ಸಾಧಿಸಲಿದೆ ಎಂದು ಹೇಳಿದೆ. ಬಿಜೆಪಿ 21 ರಿಂದ 25 ಸ್ಥಾನಗಳಲ್ಲಿ ಕಾಂಗ್ರೆಸ್ 3 ರಿಂದ 6 ಸ್ಥಾನಗಳಲ್ಲಿ, ಜೆಡಿಎಸ್ 1 ರಿಂದ 3 ಸ್ಥಾನಗಳಲ್ಲಿ ಜಯಗಳಿಸಲಿದ್ದಾರೆ ಎಂದು ಹೇಳಿದೆ.

       ಇಂಡಿಯಾ ಟಿವಿ ಸಮೀಕ್ಷೆಯ ಪ್ರಕಾರ ಬಿಜೆಪಿ 17, ಕಾಂಗ್ರೆಸ್ 8 ಮತ್ತು ಜೆಡಿಎಸ್ 8 ಸ್ಥಾನ ಗಳಿಸಲಿದೆಯಂತೆ. ಚಾಣಕ್ಯ ಸಮೀಕ್ಷೆಯು ಬಿಜೆಪಿಗೆ ರಾಜ್ಯದಲ್ಲಿ 23 ಸೀಟುಗಳು ಸಿಗುತ್ತವೆ ಎಂದು ಹೇಳಿದೆ. ಕೇಂದ್ರದಲ್ಲಿ ಎನ್‍ಡಿಎ ಮತ್ತೊಮ್ಮೆ ಅಧಿಕಾರಕ್ಕೆ ಬರುವ ಸೂಚನೆಗಳನ್ನು ಸಮೀಕ್ಷೆಗಳು ನೀಡಿರುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿನ ರಾಜಕೀಯ ಸಮೀಕರಣದ ಬದಲಾವಣೆಗಳು ಆಗಬಹುದಾ? ಎಂಬ ಲೆಕ್ಕಾಚಾರಗಳು ನಡೆಯುತ್ತಿದ್ದು, ಇದರ ಫಲಿತಾಂಶ ಇಂದು ಹೊರಬೀಳಲಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ