ಪ್ಯಾರಿಸ್
ಒಲಿಂಪಿಕ್ಸ್‌ನ ಪುರುಷರ ಡಬಲ್ಸ್ ವಿಭಾಗದಲ್ಲಿ ಕಾರ್ಲೋಸ್ ಅಲ್ಕರಾಝ್ ಮತ್ತು ರಾಫೆಲ್ ನಡಾಲ್ ಜೋಡಿ ಮುಗ್ಗರಿಸಿದೆ. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅಮೆರಿಕನ್ ಜೋಡಿ ಆಸ್ಟಿನ್ ಕ್ರಾಜಿಸೆಕ್ ಮತ್ತು ರಾಜೀವ್ ರಾಮ್ ವಿರುದ್ಧ ನಡಾಲ್-ಅಲ್ಕರಾಝ್ ಸೋಲನುಭವಿಸಿದ್ದಾರೆ. ಈ ಬಾರಿಯ ಒಲಿಂಪಿಕ್ಸ್ನಲ್ಲಿ ಸ್ಪೇನ್ ಜೋಡಿಯು ಜೊತೆಯಾಗಿ ಕಣಕ್ಕಿಳಿದಿದ್ದರಿಂದ ಡಬಲ್ಸ್ನಲ್ಲಿ ಪದಕ ನಿರೀಕ್ಷಿಸಲಾಗಿತ್ತು. ಆದರೆ ಕ್ವಾರ್ಟರ್ ಫೈನಲ್ನಲ್ಲಿ ಆಸ್ಟಿನ್ ಮತ್ತು ರಾಜೀವ್ ಅದ್ಭುತ ಪ್ರದರ್ಶನ ನೀಡುವ ಮೂಲಕ ಅಲ್ಕರಾಝ್-ನಡಾಲ್ ರನ್ನು ಹೊರದಬ್ಬುವಲ್ಲಿ ಯಶಸ್ವಿಯಾಗಿದ್ದಾರೆ.
ಇದಾಗ್ಯೂ ನಡಾಲ್ – ಅಲ್ಕರಾಝ್ ಕಂಬ್ಯಾಕ್ ಮಾಡುವ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ದ್ವಿತೀಯ ಸುತ್ತಿನಲ್ಲೂ ನಿರಾಸೆ ಕಾದಿತ್ತು. ಅದ್ಭುತ ಫುಟ್ವರ್ಕ್ ಪ್ರದರ್ಶಿಸಿದ ಆಸ್ಟ್ರಿಕ್ ಕ್ರಾಜಿಸೆಕ್ ಫೋರ್ಹ್ಯಾಂಡ್, ಬ್ಯಾಂಕ್ಹ್ಯಾಡ್ ಶಾಟ್ಗಳ ಮೂಲಕ ಕಮಾಲ್ ಮಾಡಿದರು. ಪರಿಣಾಮ ಸ್ಪೇನ್ ಜೋಡಿಯು 4 ಅಂಕಗಳನ್ನು ಕಲೆಹಾಕುವಷ್ಟರಲ್ಲಿ ಆಸ್ಟಿನ್ ಕ್ರಾಜಿಸೆಕ್ ಮತ್ತು ರಾಜೀವ್ ರಾಮ್ 6 ಅಂಕಗಳನ್ನು ಪೂರ್ಣಗೊಳಿಸಿದರು.
ಈ ಮೂಲಕ ಕ್ಲೇ ಕೋರ್ಟ್ನ ಕಿಂಗ್ ಎಂದು ಕರೆಸಿಕೊಳ್ಳುವ ರಾಫೆಲ್ ನಡಾಲ್ ಹಾಗೂ ಕಾರ್ಲೋಸ್ ಅಲ್ಕರಾಝ್ ಅವರನ್ನು 6-2, 6-4 ನೇರ ಸೆಟ್‌ಗಳಿಂದ ಸೋಲಿಸಿದರು. ಈ ಗೆಲುವಿನೊಂದಿಗೆ ಯುಎಸ್ಎನ ಆಸ್ಟಿನ್ ಕ್ರಾಜಿಸೆಕ್ ಮತ್ತು ರಾಜೀವ್ ರಾಮ್ ಜೋಡಿಯು ಪುರುಷರ ಡಬಲ್ಸ್ ವಿಭಾಗದಲ್ಲಿ ಸೆಮಿ ಫೈನಲ್ ಹಂತಕ್ಕೇರಿದ್ದಾರೆ.
ಪುರುಷರ ಸಿಂಗಲ್ಸ್ ವಿಭಾಗದಿಂದಲೂ ರಾಫೆಲ್ ನಡಾಲ್ ಹೊರಬಿದ್ದಿದ್ದಾರೆ. ನೊವಾಕ್ ಜೊಕೊವಿಚ್ ವಿರುದ್ಧದ ಪಂದ್ಯದಲ್ಲಿ ನೀರಸ ಪ್ರದರ್ಶನ ನೀಡಿದ ನಡಾಲ್ 6-1, 6-4 ಅಂತರದಿಂದ ಸೋಲುವ ಮೂಲಕ ಪ್ರಿ ಕ್ವಾರ್ಟರ್ ಫೈನಲ್ಗೂ ಮುನ್ನ ಒಲಿಂಪಿಕ್ಸ್ ಅಭಿಯಾನ ಅಂತ್ಯಗೊಳಿಸಿದ್ದರು.
ಇದಾಗ್ಯೂ ಕಾರ್ಲೋಸ್ ಅಲ್ಕರಾಝ್ ಪುರುಷರ ಸಿಂಗಲ್ಸ್ನಲ್ಲಿ ಕ್ವಾರ್ಟರ್ ಫೈನಲ್ಗೆ ಪ್ರವೇಶಿಸಿದ್ದು, ಆಗಸ್ಟ್ 1 ರಂದು ನಡೆಯಲಿರುವ ಮೊದಲ ಕ್ವಾರ್ಟರ್ ಫೈನಲ್ನಲ್ಲಿ ಅಮೆರಿಕದ ಟಾಮಿ ಪೌಲ್ ಅವರನ್ನು ಎದುರಿಸಲಿದ್ದಾರೆ.