ತುಮಕೂರಿಗೆ ದೇವೇಗೌಡರು ಏಕೆ ಬಂದರು?

ತುಮಕೂರು

       ಇದು ನನ್ನ ಕೊನೆ ಭಾಷಣ, ಮತ್ತೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳಿದ್ದ ದೇವೇಗೌಡರು ಚುನಾವಣೆಗಿಳಿದಿರುವುದು ಅವರು ಹೇಳಿದಂತೆ ನಡೆದುಕೊಳ್ಳುವುದಿಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಅವರ ಕುಟುಂಬದವರು ಮೂರು ಬಾರಿ ಮುಖ್ಯಮಂತ್ರಿಯಾಗಿದ್ದಾರೆ, ಸಂಸದರು, ಸಚಿವರು, ಶಾಸಕರೂ ಆಗಿದ್ದಾರೆ ಆದರೂ ಅವರ ಕುಟುಂಬದ ಅಧಿಕಾರ ದಾಹ ಮುಗಿದಿಲ್ಲ ಎಂದು ನಿವೃತ್ತ ಐಪಿಎಸ್ ಅಧಿಕಾರಿ, ವಿಶ್ವ ವೀರಶೈವ ಲಿಂಗಾಯತ ಒಕ್ಕೂಟ ಅಧ್ಯಕ್ಷ ಜ್ಯೋತಿಪ್ರಕಾಶ್ ಮಿರ್ಜಿ ಹೇಳಿದರು.

       ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಕ್ಷೇತ್ರ ಹಾಸನ ಬಿಟ್ಟು ತುಮಕೂರಿಗೆ ದೇವೇಗೌಡರು ಯಾಕೆ ಬಂದರು, ಏನೇ ಮೈತ್ರಿ ಧರ್ಮ ಮಾಡಿಕೊಂಡಿದ್ದರೂ ಸ್ಥಳೀಯ ಮುಖಂಡರಿಗೆ ಸ್ಪರ್ಧಿಸುವ ಅವಕಾಶ ನೀಡಬೇಕಾಗಿತ್ತು, ಹಾಸನವನ್ನು, ರೇವಣ್ಣ, ಪ್ರಜ್ವಲ್‍ಗೆ, ರಾಮನಗರ, ಮಂಡ್ಯವನ್ನು ಕುಮಾರಸ್ವಾಮಿ ಕುಟುಂಬಕ್ಕೆ ಬಿಟ್ಟುಕೊಟ್ಟಿರುವ ದೇವೇಗೌಡರು ಈಗ ತಾವು ಸ್ಪರ್ಧೆ ಮಾಡಿ ತುಮಕೂರನ್ನ ಅವರ ಇನ್ನೊಬ್ಬ ಮಗ ರಮೇಶ್ ಅವರಿಗೆ ಕೊಡುಗೆಯಾಗಿ ನೀಡುವ ಉದ್ದೇಶದಿಂದ ಇಲ್ಲಿ ತಮ್ಮ ಸಾಮ್ರಾಜ್ಯಸ್ಥಾಪಿಸಲು ಬಂದಿದ್ದಾರೆ ಎಂದು ಆಪಾದಿಸಿದರು.

         ದೇವೇಗೌಡರನ್ನು ಎದುರು ಹಾಕಿಕೊಂಡರೆ ಯಾವ ನಾಯಕರೂ ಉಳಿಯುವುದಿಲ್ಲ, ಜಿಲ್ಲೆಯ ಕಾಂಗ್ರೆಸ್ ನಾಯಕರೂ ದೇವೇಗೌಡರ ಎದುರು ಶರಣಾಗಬೇಕಾಗುತ್ತದೆ, ಎಂಟು ವರ್ಷ ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಾ. ಪರಮೇಶ್ವರ್ ಹಾಗೂ ಸಿದ್ದರಾಮಯ್ಯ ಅವರು ತುಮಕೂರನ್ನು ದೇವೇಗೌಡರಿಗೆ ವಹಿಸುವ ಮೂಲಕ ಇಲ್ಲಿನ ಕಾಂಗ್ರೆಸ್ ಪಕ್ಷವನ್ನು ಅವರೇ ಬಲಿ ಮಾಡುತ್ತಿದ್ದಾರೆ. ಎಲ್ಲಿಂದಲೋ ಅಧಿಕಾರಕ್ಕಾಗಿ ಬಂದವರಿಂದ ತುಮಕೂರಿನ ಅಭಿವೃದ್ಧಿ ನಿರೀಕ್ಷಸುವಂತಿಲ್ಲ ಎಂದು ಹೇಳಿದರು.

       ದೇವೇಗೌಡರು ಹಾಗೂ ಜೆಡಿಎಸ್ ನಾಯಕರನ್ನು ಹೀನಾಯವಾಗಿ ಟೀಕಿಸುತ್ತಿದ್ದ ಸಿದ್ದರಾಮಯ್ಯ, ಡಾ. ಪರಮೇಶ್ವರ್ ಅವರಂತಹ ನಾಯಕರೂ ಈಗ ದೇವೇಗೌಡರನ್ನು ಹಾಡಿ ಹೊಗಳುತ್ತಿದ್ದಾರೆ. ಇವರ ನೈತಿಕತೆ ಎಲ್ಲಿ ಹೋಯಿತು. ದೇವೇಗೌಡರು ಕಣ್ಣಿರು ಹಾಕುತ್ತಾ ಜನರನ್ನು ಮರಳು ಮಾಡುತ್ತಾರೆ, ಜನನಾಯಕ ತಾನು ಕಣ್ಣಿರು ಹಾಕುವುದಲ್ಲ, ಜನರ ಕಣ್ಣೀರು ಒರೆಸುವಂತಿರಬೇಕು ಎಂದು ಜ್ಯೋತಿಪ್ರಕಾಶ್ ಮಿರ್ಜಿ ಹೇಳಿದರು.ದೇವೇಗೌಡರ ಕುಟುಂಬ ತುಮಕೂರಿನಲ್ಲಿ ಬೇರುಬಿಟ್ಟರೆ, ಅದನ್ನು ಬಿಡಿಸಲು ಸ್ವಾತಂತ್ರ್ಯ ಹೋರಾಟದ ರೀತಿಯ ಹೋರಾಟವನ್ನೇ ಮಾಡಬೇಕಾಗುತ್ತದೆ ಎಂದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link