ವಿಜಯಪುರ
ಸರ್ಕಾರಗಳಿಗೆ ಕೊರೋನಾ ಎದುರಿಸುವ ಪೀಕಲಾಟ ಒಂದೆಡೆಯಾದರೆ ಮತ್ತೊಂದೆಡೆ ಹೊಸ ತಲೆನೋವೊಂದು ಶುರುವಾಗಿದೆ ಅದೇ ಬೆಳೆದು ನಿಂತತ ಬೆಳೆಗಳನ್ನು ಹಾಳುಗೆಡವುವ ರಕ್ಕಸ ಮಿಡತೆಗಳ ಹಾವಳಿ, ಜನತೆಗೆ ಸಾಲು ಸಾಲು ಸವಾಲುಗಳು ಎದುರಾಗುತ್ತಿವೆ. ಒಂದೆಡೆ ಕೊರೋನಾ ಕಾಟವಾದರೆ, ಮತ್ತೊಂದೆಡೆ ಉತ್ತರ ಭಾರತದ 5 ರಾಜ್ಯಗಳಲ್ಲಿ ಈಗಾಗಲೇ ತಲೆನೋವಾಗಿ ಪರಿಣಮಿಸಿರುವ ಮಿಡತೆಗಳ ಹಾವಳಿ ಮಹಾರಾಷ್ಟ್ರದ ಮೂಲಕ ರಾಜ್ಯಕ್ಕೂ ಕಾಡುವ ಆತಂಕ ಉಂಟಾಗಿದೆ.
ಉತ್ತರ ಭಾರತದಲ್ಲಿ ಬೆಳೆಗಳನ್ನು ನಾಶ ಮಾಡಿ ಮಹಾರಾಷ್ಟ್ರದೆಡೆಗೆ ಧಾವಿಸಿರುವ ಮಿಡತೆಗಳು ಕರ್ನಾಟಕಕ್ಕೂ ಆಗಮಿಸುವ ಸಾಧ್ಯತೆಗಳಿವೆ. ಈಗಾಗಲೇ ಈಶಾನ್ಯ ಮಹಾರಾಷ್ಟ್ರದ ಜಿಲ್ಲೆಗಳಲ್ಲಿ ಇವುಗಳ ಹಾವಳಿ ಹೆಚ್ಚಾಗಿದ್ದು, ಕರ್ನಾಟಕದ ಗಡಿ ಜಿಲ್ಲೆಗಳ ರೈತರಿಗೆ ಈ ಕುರಿತು ಆತಂಕ ಉಂಟಾಗಿದೆ. ಈ ಬೆನ್ನಲ್ಲೇ ಕೃಷಿ ಹಾಗೂ ರೈತ ಸಚಿವಾಲಯ ಮಿಡತೆ ಹಾವಳಿಯನ್ನು ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದೆ.
ಈ ಮಿಡತೆಗಳು ಬೆಳೆದು ನಿಂತಿರುವ ಪೈರುಗಳನ್ನು ಎಲ್ಲಾ ರೀತಿಯ ಸಸ್ಯಗಳನ್ನು ತಿನ್ನುತ್ತವೆ. ಗಾಳಿ ಯಾವ ಕಡೆ ಬೀಸುತ್ತದೆಯೋ ಆ ಭಾಗಕ್ಕೆ ಹಾರುವ ಇವುಗಳು ದಿನವೊಂದಕ್ಕೆ 200 ಕಿ.ಮೀ ಸಾಗುವ ಸಾಮರ್ಥ್ಯ ಹೊಂದಿವೆ. ಎಲ್ಲಾ ರೀತಿಯ ಸಸ್ಯಗಳಿಗೂ ಹಾನಿಕಾರಕವಾಗಿವೆ.
ಈ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿರುವ ಕೃಷಿ ಆಯುಕ್ತ ಬ್ರಿಜೇಶ್ ಕುಮಾರ್ ದೀಕ್ಷಿತ್, ಈ ಮಿಡತೆಗಳು ಗಾಳಿ ಬೀಸುವ ದಿಕ್ಕಿನಲ್ಲಿ ಹಾರಲಿವೆ. ಈಗ ಗಾಳು ಉತ್ತರಕ್ಕೆ ಬೀಸುತ್ತಿದೆ ಹಾಗಾಗಿ ರಾಜ್ಯಕ್ಕೆ ಇವುಗಳು ಆಗಮಿಸುವ ಸಾಧ್ಯತೆ ತುಂಬಾ ಕಡಿಮೆ. ಒಂದು ವೇಳೆ ಗಾಳಿ ದಕ್ಷಿಣ ಭಾಗಕ್ಕೆ ಬೀಸಿದರೆ, ಬೀದರ್ ಮೂಲಕ ರಾಜ್ಯಕ್ಕೆ ಪ್ರವೇಶಿಸುವ ಸಾಧ್ಯತೆ ಇದೆ. ಹಿರಿಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದು ತಿಳಿಸಿದ್ದಾರೆ.
ಈಗ ಬೆಳಗೆಳಾವು ಇಲ್ಲದಿದ್ದರೂ ಸಸ್ಯ ಸಂಕುಲಕ್ಕೆ ಇವುಗಳಿಂದ ಅಪಾಯವಿದೆ ಎನ್ನುತ್ತಾರೆ ಬ್ರಿಜೇಶ್ ಕುಮಾರ್. ಇನ್ನು ವಿಪಕ್ಷ ಕಾಂಗ್ರೆಸ್ ನ ನಾಯಕ, ಮಾಜಿ ಗೃಹ ಸಚಿವ ಎಂಬಿ ಪಾಟೀಲ್ ಮಾತನಾಡಿ, ಈ ಮಿಡತೆ ಹಾವಳಿಯ ಬಗ್ಗೆ ಒಂದು ತಿಂಗಳ ಮುಂಚೆಯೇ ಅಧಿಕಾರಿಗಳಿಗೆ ಮಾಹಿತಿ ನೀಡಿ ಎಚ್ಚರಿಸಲಾಗಿತ್ತು. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಪರಿಹಾರಕ್ಕೆ ಯತ್ನಿಸಬೇಕೆಂದು ಮುಖ್ಯಮಂತ್ರಿಗಳು, ಕೃಷಿ ಸಚಿವರಿಗೆ ಪತ್ರ ಬರೆಯುವುದಾಗಿ ಅವರು ತಿಳಿಸಿದ್ದಾರೆ.