ತುಮಕೂರು
ತುಮಕೂರು ಲೋಕಸಭಾ ಟಿಕೆಟ್ ವಂಚಿರಾಗಿ ಹತಾಶರಾಗಿದ್ದ ಹಾಲಿ ಸಂಸದ ಎಸ್ ಪಿ ಮುದ್ದಹನುಮೇಗೌಡರು ಪಕ್ಷೇತರರಾಗಿ ಕಣದಲ್ಲಿ ಉಳಿಯುವರೆ ಅಥವಾ ಪಕ್ಷದ ನಾಯಕರ ಮಾತಿಗೆ ಮನ್ನಣೆ ನೀಡಿ ನಾಮಪತ್ರ ಹಿಂಪಡೆಯುವರೆ ಎಂಬುದು ಶುಕ್ರವಾರ ಗೊತ್ತಾಗಲಿದೆ. ಬಹುತೇಕ ಅವರು ತಮ್ಮ ನಾಮಪತ್ರ ವಾಪಸ್ ಪಡೆಯಲಿದ್ದಾರೆ ಎನ್ನಲಾಗಿದೆ.
ಮುದ್ದಹನುಮೇಗೌಡ ಹಾಗೂ ಕೆ ಎನ್ ರಾಜಣ್ಣ ಅವರು ತಮ್ಮ ನಾಮಪತ್ರ ಹಿಂದೆ ಪಡೆಯುವಂತೆ ಮನವೊಲಿಸುವಲ್ಲಿ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ. ಮುದ್ದಹನುಮೇಗೌಡರು ಹಾಗೂ ಕೆಎನ್ಆರ್ರವರನ್ನು ತಮ್ಮ ನಿವಾಸಕ್ಕೆ ಬರಮಾಡಿಕೊಂಡಿದ್ದ ಸಿದ್ದರಾಮಯ್ಯ ಅವರು ದಿನೇಶ್ ಗುಂಡೂರಾವ್ ಜೊತೆಗೂಡಿ ಮನವೊಲಿಸುವ ಪ್ರಯತ್ನ ಮಾಡಿದರು.
ತಮಗೆ ಅನ್ಯಾಯವಾಗಿದೆ, ನ್ಯಾಯಕ್ಕಾಗಿ ಜನತಾನ್ಯಾಯಾಲಯಕ್ಕೆ ಹೋಗುವುದಾಗಿ ಹೇಳುತ್ತಿದ್ದ ಮುದ್ದಹನುಮೇಗೌಡರು ನಾಯಕರ ಮಾತಿಗೆ ಕಟ್ಟುಬಿದ್ದಂತಿದೆ. ಮೊದಲಿದ್ದ ಸಿಟ್ಟು ಆಕ್ರೋಶ ಶಮನವಾದಂತಾಗಿ ಗೌಡರು ಮೆದುವಾಗಿದ್ದಾರೆ. ಮೈತ್ರಿ ಧರ್ಮಕ್ಕೆ ಧಕ್ಕೆಯಾಗದಂತಹ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕೆಂಬ ಉದ್ದೇಶದಿಂದ ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಮಾಡಿಕೊಂಡ ಮೈತ್ರಿ ಧರ್ಮದ ಅನ್ವಯ ಟಿಕೆಟ್ ಹೊಂದಾಣಿಕೆಯಲ್ಲಿ ತುಮಕೂರು ಕ್ಷೇತ್ರ ಜೆಡಿಎಸ್ ಪಾಲಾಯಿತು. ಅದರಂತೆ ಮಾಜಿ ಪ್ರಧಾನಿ ದೇವೇಗೌಡರು ಇಲ್ಲಿ ಸ್ಪರ್ಧೆ ಮಾಡುವ ಇಂಗಿತ ವ್ಯಕ್ತಪಡಿಸಿ, ಮೈತ್ರಿ ಪಕ್ಷಗಳ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.
ಇದರಿಂದ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುವ ಅವಕಾಶ ಸಿಗದೆ ಮುದ್ದಹನುಮೇಗೌಡರು ತಮ್ಮ ಬೆಂಬಲಿಗರ ಸಭೆ ಕರೆದು ಅಲ್ಲಿನ ಅಭಿಪ್ರಾಯದಂತೆ ಪಕ್ಷೇತ್ರರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿ ಮೈತ್ರಿ ಅಭ್ಯರ್ಥಿ ದೇವೇಗೌಡರ ವಿರುದ್ಧ ಬಂಡಾಯ ಸಾರಿದ್ದರು. ಜೊತೆಗೆ ದೇವೇಗೌಡರ ಸ್ಪರ್ಧೆ ವಿರೋಧಿಸಿ ಮಾಜಿ ಶಾಸಕ ಕೆ ಎನ್ ರಾಜಣ್ಣ ಕೂಡಾ ಸ್ವತಂತ್ರ ಅಭ್ಯರ್ಥಿಯಾಗಿ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ.
ಈ ಇಬ್ಬರು ಕಾಂಗ್ರೆಸ್ ನಾಯಕರ ಸ್ಪರ್ಧೆಯಿಂದ ಕಾಂಗ್ರೆಸ್ ಮತಗಳು ವಿಭಜನೆಯಾಗಿ ಮೈತ್ರಿ ಅಭ್ಯರ್ಥಿ ಗೆಲುವಿಗೆ ತೊಡಕಾಗಬಹುದು ಎಂಬ ಕಾರಣಕ್ಕೆ ನಾಮಪತ್ರ ವಾಪಸ್ ಪಡೆಯುವಂತೆ ಕಾಂಗ್ರೆಸ್ ನಾಯಕರು ಇವರಿಬ್ಬರ ಮನವೊಲಿಸಲು ಸತತ ಪ್ರಯತ್ನ ನಡೆಸಿದ್ದರು.
ಗುರುವಾರ ರಾಜಧಾನಿಯಲ್ಲೆ ಇದ್ದ ಮುದ್ದಹನುಮೇಗೌಡರನ್ನು ಭೇಟಿ ಮಾಡಿದ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಮನವೊಲಿಕೆ ಪ್ರಯತ್ನ ಮಾಡಿದರು. ಸಿದ್ದರಾಮಯ್ಯ ಹಾಗೂ ದಿನೇಶ್ ಗುಂಡೂರಾವ್ ಅವರು ಮುದ್ದಹನುಮೇಗೌಡರು ಹಾಗೂ ಕೆ ಎನ್ ರಾಜಣ್ಣರೊಂದಿಗೆ ಮಾತುಕತೆ ನಡೆಸಿ, ಎರಡು ಪಕ್ಷಗಳು ಮೈತ್ರಿ ಮಾಡಿಕೊಂಡ ಉದ್ದೇಶ, ನೀವು ಸ್ಪರ್ಧೆ ಮಾಡಿದರೆ ಪಕ್ಷಕ್ಕೆ ಆಗಬಹುದಾದ ಹಾನಿ ಕುರಿತು ಮಾತನಾಡಿ, ನಾಮಪತ್ರ ವಾಪಸ್ ಪಡೆಯುವಂತೆ ಮನವಿ ಮಾಡಿದರು. ನಾಯಕರ ಮಾತಿಗೆ ಇಬ್ಬರೂ ಸಮ್ಮತಿ ಸೂಚಿಸಿದರೆಂದು ಹೇಳಲಾಗಿದೆ. ನಾಮಪತ್ರ ಹಿಂಪಡೆಯಲು ಕಡೇ ದಿನವಾದ ಶುಕ್ರವಾರ ಈ ಇಬ್ಬರೂ ತಮ್ಮ ಉಮೇದುವಾರಿಕೆ ಹಿಂದೆ ಪಡೆದು ಮೈತ್ರಿ ಅಭ್ಯರ್ಥಿ ದೇವೇಗೌಡರನ್ನು ಬೆಂಬಲಿಸಲಿದ್ದಾರೆ ಎಂದು ಹೇಳಲಾಗಿದೆ.
ಇದರ ಜೊತೆಗೆ ಸಚಿವ ಎಸ್ ಆರ್ ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯ ಬೆಮೆಲ್ ಕಾಂತರಾಜು ಹಾಗೂ ಶಾಸಕ ಡಿ ಸಿ ಗೌರಿಶಂಕರ್ ಅವರು ಮುದ್ದಹನುಮೇಗೌಡರನ್ನ ಅವರ ಬೆಂಗಳೂರಿನ ನಿವಾಸದಲ್ಲಿ ಭೇಟಿ ನೀಡಿ, ನಾಮಪತ್ರ ಹಿಂಪಡೆಯುವ ಕುರಿತು ವಿನಂತಿ ಮಾಡಿಕೊಂಡರು. ಮುದ್ದಹನುಮೇಗೌಡರು ಇವರಿಗೂ ತೃಪ್ತಿದಾಯಕ ಭರವಸೆ ನೀಡಿದರೆಂದು ಹೇಳಲಾಗಿದೆ.
ನಾನು ಯಾವ ತಪ್ಪು ಮಾಡಿದೆ ಎಂದು ನನಗೆ ಟಿಕೆಟ್ ನೀಡದೆ ವಂಚಿಸಲಾಗಿದೆ, ಟಿಕೆಟ್ ಬದಲಾವಣೆ ಸಂಬಂಧ ಸೌಜ್ಯಕ್ಕೂ ನನ್ನನ್ನ ಒಂದು ಮಾತು ಕೇಳಲಿಲ್ಲ. ಸಂಸದನಾಗಿ, ಕಾಂಗ್ರೆಸ್ ಪ್ರತಿನಿಧಿಯಾಗಿ ನನ್ನಿಂದ ಯಾವುದಾದರೂ ಲೊಪವಾಗಿದೆಯೆ ಎಂದು ಮುದ್ದಹನುಮೇಗೌಡರು ತಮ್ಮ ಮನವೊಲಿಕೆಗೆ ಬಂದ ನಾಯಕರೆದುರು ಅಸಮಧಾನ ತೊಡಿಕೊಂಡರು ಎನ್ನಲಾಗಿದೆ.
ಬಂಡಾಯವಾಗಿ ಸ್ಪರ್ಧೆ ಮಾಡಿರುವ ಮುದ್ದಹನುಮೇಗೌಡರು ಹಾಗೂ ಕೆ ಎನ್ ರಾಜಣ್ಣ ಅವರು ಚುನಾವಣೆ ಕಣದಿಂದ ಹೊರಬಂದು ಮೈತ್ರಿ ಅಭ್ಯರ್ಥಿಯನ್ನ ಬೆಂಬಲಿಸುವಂತೆ ಮನವೊಲಿಸುವ ಜವಾಬ್ದಾರಿ ಉಪ ಮುಖ್ಯಮಂತ್ರಿ ಡಾ. ಪರಮೇಶ್ವರ್ ಹೆಗಲ ಮೇಲಿದೆ. ಏಪ್ರಿಲ್ 4 ಮತ್ತು 5ರಂದು ದೇವೇಗೌಡರು ತುಮಕೂರು ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ರಮ ಆರಂಭಿಸುತ್ತಿದ್ದು, ಆವೇಳೆಗೆ ಈ ಗೊಂದಲ ಬಗೆಹರಿಸಿ, ಚುನಾವಣಾ ಪ್ರಚಾರ ಸಭೆಗಳ ವೇದಿಕೆ ಮೇಲೆ ದೇವೇಗೌಡರ ಜೊತೆ ಮುದ್ದಹನುಮೇಗೌಡರು, ಕೆ ಎನ್ ರಾಜಣ್ಣರು ಇರುವಂತೆ ನೋಡಿಕೊಳ್ಳಬೇಕಾದ ಒತ್ತಡ ಡಾ. ಪರಮೇಶ್ವರ್ ಮೇಲಿದೆ. ಅದಕ್ಕೂ ಮೊದಲು ಏಪ್ರಿಲ್ 1ರಂದು ನಗರದಲ್ಲಿ ನಡೆಯುವ ಜೆಡಿಎಸ್, ಕಾಂಗ್ರೆಸ್ ಮುಖಂಡರ ಸಭೆಗೆ ಮುದ್ದಹನುಮೇಗೌಡರು , ಕೆ ಎನ್ ರಾಜಣ್ಣ ಅವರನ್ನು ಕರೆತರುವ ಹೊಣೆ ಕೂಡಾ ಡಾ. ಪರಮೇಶ್ವರ್ ಮೇಲಿದೆ.
ಹೀಗಾಗಿ ಈ ಇಬ್ಬರು ಮೈತ್ರಿ ಧರ್ಮ ಪಾಲನೆ ಮಾಡುವಂತೆ ಮನವೊಲಿಸಲು ಡಾ. ಪರಮೇಶ್ವರ್ ಅವರು ಸಿದ್ದರಾಮಯ್ಯ ಹಾಗೂ ದಿನೇಶ್ ಗುಂಡೂರಾವ್ ಅವರನ್ನು ಕೋರಿದ್ದರು. ಅಲ್ಲದೆ, ತಾವೂ ಪ್ರಯತ್ನಿಸಿ ಎಂದು ಜೆಡಿಎಸ್ ನಾಯಕರಿಗೂ ಸಲಹೆ ಮಾಡಿದ್ದರ ಪರಿಣಾಮ ಸಚಿವ ಶ್ರೀನಿವಾಸ್ ಹಾಗೂ ಶಾಸಕರು ಮುದ್ದಹನುಮೇಗೌಡರ ಮನೆಗೆ ತೆರಳಿ ಮಾತುಕತೆ ನಡೆಸಿದರು.
ಎರಡೂ ಪಕ್ಷಗಳ ನಾಯಕರ ಮನವಿಗೆ ಸ್ಪಂದಿಸಿರುವ ಮುದ್ದಹನುಮೇಗೌಡರು ಶುಕ್ರವಾರ ತಮ್ಮ ನಾಮಪತ್ರ ವಾಪಸ್ ಪಡೆಯಲಿದ್ದಾರೆ. ಇವರೊಂದಿಗೆ ಕೆ ಎನ್ ಆರ್ ಕೂಡಾ ಚುನಾವಣಾ ಕಣದಿಂದ ಹೊರಬರಲಿದ್ದಾರೆ ಎಂದು ಹೇಳಲಾಗಿದೆ.ಈ ನಡುವೆ ಮುದ್ದಹನುಮೇಗೌಡರು ಕಾಂಗ್ರೆಸ್ ಅಭ್ಯರ್ಥಿಯಾಗಿ ಸಲ್ಲಿಸಿದ್ದ ನಾಮಪತ್ರ ಬಿ ಫಾರಂ ನೀಡದ ಕಾರಣ ತಿರಸ್ಕೃತವಾಗಿದೆ. ಪಕ್ಷೇತರರಾಗಿ ಸಲ್ಲಿಸಿದ್ದ ನಾಮಪತ್ರ ಸಿಂಧುವಾಗಿದೆ.