ಬೆಂಗಳೂರು
ಕೌಟಂಬಿಕ ಕಲಹ ಹಿನ್ನೆಲೆಯಲ್ಲಿ ದೂರು ನೀಡಲು ಬಂದಿದ್ದ ಮಹಿಳೆಯರ ಮೇಲೆ ದರ್ಪ ತೋರಿ ಕತ್ತು ಹಿಡಿದು ಹೊರದಬ್ಬಿ ಅಮಾನವೀಯವಾಗಿ ವರ್ತಿಸಿರುವ ಘಟನೆ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ನಡೆದಿದ್ದು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಪೊಲೀಸ್ ಠಾಣೆಗಳನ್ನು ಜನಸ್ನೇಹಿಯಾಗಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಅಧಿಕಾರಿಗಳು ನಿರಂತರವಾಗಿ ಹೇಳುತ್ತಿರುವ ಬೆನ್ನಲ್ಲೇ ದೂರು ನೀಡಲು ಬಂದ ಮಹಿಳೆಯ ಮೇಲೆ ಸಹಾಯಕ ಪೊಲೀಸ್ ಇನ್ಸ್‍ಪೆಕ್ಟರ್(ಎಎಸ್‍ಐ)ರೇಣುಕಯ್ಯ ಹಲ್ಲೆ ನಡೆಸಿ ದರ್ಪ ತೋರಿ ಪೊಲೀಸ್ ಇಲಾಖೆಯೇ ತಲೆತಗ್ಗಿಸುವಂತೆ ನಡೆದುಕೊಂಡಿದ್ದಾರೆ.
ನ್ಯಾಯ ಕೇಳಿ ಠಾಣೆಗೆ ಬಂದ ಮಹಿಳೆಯ ಸಮಸ್ಯೆ ಆಲಿಸದೇ ಮಹಿಳೆಯ ಕುತ್ತಿಗೆ ಹಿಡಿದು ಠಾಣೆಯಿಂದ ಹೊರ ದಬ್ಬಿದಲ್ಲದೆ ಅವರಿಗೆ ಹೊಡೆದ ಕುಮಾರಸ್ವಾಮಿ ಠಾಣೆ ಎಎಸ್‍ಐ ರೇಣುಕಯ್ಯ ದರ್ಪ ಮೆರೆದಿದ್ದಾರೆ
ಠಾಣೆಗೆ ಬಂದ ಮಹಿಳೆಯ ಮೇಲೆ ಪೆÇಲೀಸ್ ಅಧಿಕಾರಿ ಹಲ್ಲೆ ಮಾಡಿರುವ ದೃಶ್ಯವನ್ನು ಠಾಣೆಯ ಇತರ ಪೆÇಲೀಸರೇ ಮೊಬೈಲ್‍ನಲ್ಲಿ ಸೆರೆಹಿಡಿದಿದ್ದಾರೆ. ಸಮವಸ್ತ್ರವಿಲ್ಲದಿದ್ದರೂ ಖದರ್ ತೋರಿಸಿರುವ ಎಎಸ್‍ಐ ರೇಣುಕಯ್ಯ ಮೇಲೆ ಈಗ ಎಲ್ಲೆಡೆಯಿಂದ ಆಕ್ರೋಶ ವ್ಯಕ್ತವಾಗುತ್ತಿದೆ.
ಎಎಸ್‍ಐ ಸಸ್ಪೆಂಡ್
ಮಹಿಳೆಯರ ಮೇಲೆ ಹಲ್ಲೆ ನಡೆಸಿ ಠಾಣೆಯಿಂದ ಹೊರದಬ್ಬಲು ಮುಂದಾಗಿ ಎಎಸ್‍ಐ ರೇಣುಕಯ್ಯ ಅಮಾನವೀಯವಾಗಿ ವರ್ತಿಸಿರುವುದನ್ನು ಗಂಭೀರವಾಗಿ ಪರಿಗಣಿಸಿದ ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ಅವರು ರೇಣುಕಯ್ಯನನ್ನು ಸೇವೆಯಿಂದ ಅಮಾನತ್ತು ಗೊಳಿಸಿದ್ದಾರೆ.
ದರ್ಪದ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಮಾದ್ಯಮಗಳಲ್ಲಿ ಪ್ರಸಾರವಾಗಿರುವುದನ್ನು ನೋಡಿ ಠಾಣಾಧಿಕಾರಿಯಿಂದ ಮಾಹಿತಿ ಪಡೆದ ಡಿಸಿಪಿ ಅಣ್ಣಾಮಲೈ ಅವರು ಕೂಡಲೇ ಎಎಸ್‍ಐ ರೇಣುಕಯ್ಯನನ್ನು ಅಮಾನತ್ತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಎಎಸ್‍ಐ ದರ್ಪ ಏಕೆ
ಕಳೆದ ಭಾನುವಾರ ಹೋಟೆಲ್‍ವೊಂದರಲ್ಲಿ ಗಲಾಟೆ ನಡೆಯುತ್ತಿದೆ ಎಂದು ಕುಮಾರಸ್ವಾಮಿ ಪೆÇಲೀಸ್ ಠಾಣೆಗೆ ಕರೆಬಂದ ಕೂಡಲೇ ಹೋಟೆಲ್‍ಗೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದಾಗ ಆಂಧ್ರದಿಂದ ಬಂದಿದ್ದ ವ್ಯಕ್ತಿಗಳು ಯುವತಿಯೊಬ್ಬರ ಜೊತೆ ಜಗಳ ಮಾಡಿ ಆಕೆಯನ್ನು ಅಪಹರಿಸಲು ಯತ್ನಿಸುತ್ತಿರುವುದು ಗಮನಕ್ಕೆ ಬಂದಿದೆ ರಕ್ಷಣೆಗಾಗಿ ಬೇಡುತ್ತಿದ್ದ ಯುವತಿಯನ್ನು ಠಾಣೆಗೆ ಕರೆದುಕೊಂಡು ಬಂದು ರಕ್ಷಣೆ ನೀಡಲಾಗಿತ್ತು
ಈ ಸಂಬಂಧ ಕೈಗೊಂಡ ವಿಚಾರಣೆಯಲ್ಲಿ ಪೊಲೀಸರಿಗೆ ರಕ್ಷಿಸಿದ ಯುವತಿಯು 11 ವರ್ಷ ಇರುವಾಗಲೇ ತಾಯಿ ತನ್ನ ತಮ್ಮನ ಜೊತೆ ಮದುವೆ ಮಾಡಿಕೊಟ್ಟಿದ್ದು ಆಕೆ ಸುಮಾರು 6 ವರ್ಷಗಳ ಕಾಲ ಸಂಸಾರ ಮಾಡಿ ಬಳಿಕ ಪತಿ, ಮನೆಯವರನ್ನು ಬಿಟ್ಟು ಬೆಂಗಳೂರಿಗೆ ಬಂದು ಹೋಟೆಲ್‍ನಲ್ಲಿ ಕೆಲಸ ಮಾಡುತ್ತಿದ್ದರು.ಈ ವಿಷಯ ತಿಳಿದು ಕುಟುಂಬದವರು ಬಂದು ಆಕೆಯನ್ನು ತಮ್ಮ ಜೊತೆ ಕರೆದುಕೊಂಡು ಹೋಗಲು ಅಪಹರಣ ಯತ್ನ ನಡೆಸಿರುವುದು ಕಂಡುಬಂದಿದೆ
ಯುವತಿಯು ತಾಯಿ ಮತ್ತು ಕುಟುಂಬವರು ಪೊಲೀಸ್ ಠಾಣೆಗೆ ಬಂದು ಯುವತಿಯನ್ನು ನಮ್ಮ ಜೊತೆ ಕಳುಹಿಸಿ, ಇಲ್ಲದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಗಲಾಟೆ ಮಾಡುತ್ತಿದ್ದಾಗ ಯುವತಿಯು ಅವರ ಜೊತೆ ಹೋಗಲು ಇಷ್ಟಪಡದೇ ಭಯ ಪಡುತ್ತಿದ್ದಳು ಇದರಿಂದ ಯಾವುದೇ ಕಾರಣಕ್ಕೂ ನಾವು ಪ್ರಾಪ್ತ ವಯಸ್ಕಳಾದ ಆಕೆಯನ್ನು ಬಿಡುವುದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಇದರಿಂದ ಆಕ್ರೋಶಗೊಂಡ ತಾಯಿ ಮಹಿಳಾ ಪೊಲೀಸರನ್ನು ತಳ್ಳಿ ಒಳಗೆ ಹೋಗಲು ಪ್ರಯತ್ನ ಮಾಡಿದ್ದಾರೆ. ಈ ವೇಳೆ ಎಎಸ್‍ಐ ರೇಣುಕಯ್ಯ ಬಂದು ಮಹಿಳೆಗೆ ಹೊಡೆದಿದ್ದಾರೆ. ಆದರೆ ಈ ರೀತಿ ಮಾಡಿದ್ದು ತಪ್ಪು ಹಾಗೂ ಅಮಾನವೀಯ ಕ್ರಮವಾಗಿರುವುದರಿಂದ ಅವರನ್ನು ಸಸ್ಪೆಂಡ್ ಮಾಡಿದ್ದೇವೆ ಎಂದು ಅಣ್ಣಾಮಲೈ ತಿಳಿಸಿದ್ದಾರೆ.
ಈ ರೀತಿ ಘಟನೆ ಯಾವಾಗಲೂ ಆಗುವುದಿಲ್ಲ. ಒಮ್ಮೆ ನಮ್ಮ ಕೈ ಮೀರಿ ಹೋಗುತ್ತದೆ. ಆದರೆ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ವಿಚಾರಣೆ ಮಾಡಿ ಕ್ರಮ ತೆಗೆದು ಕೊಂಡಿದ್ದೇವೆ.ಎಎಸ್‍ಐ ರೇಣುಕಯ್ಯ ಹಾಗೂ ಠಾಣೆಯ ಪೊಲೀಸರು ಉದ್ದೇಶ ಪೂರ್ವಕವಾಗಿ ಈ ರೀತಿ ಮಾಡಿಲ್ಲ.ಯುವತಿಗೆ ರಕ್ಷಣೆ ಕೊಡಬೇಕೆಂದು ಮಹಿಳೆಗೆ ಹೊಡೆದಿದ್ದಾರೆ. ಆದರೆ ಮಹಿಳೆಗೆ ತಾಳ್ಮೆಯಿಂದ ಹೇಳಬಹುದಿತ್ತು. ಪೊಲೀಸರಿಂದ ತಪ್ಪಾಗಿದೆ.ಈ ಸಂಬಂಧ ಮಾಹಿತಿ ಪಡೆದು ಎಎಸ್‍ಐ ಸಸ್ಪೆಂಡ್ ಮಾಡಿ ತನಿಖೆಗೆ ಆದೇಶಿಸಿದ್ದೇವೆ ಎಂದು ಅಣ್ಣಾಮಲೈ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
