ವಿಶ್ವ ವಿಕಲಚೇತನರ ದಿನಾಚರಣೆ

ಹಾವೇರಿ

        ವಿಕಲಚೇನರಲ್ಲಿ ಅದ್ಯಮ್ಯ ಚೇತನವಿರುತ್ತವದೆ. ಅಂಗವೈಕಲ್ಯತೆ ಮಕ್ಕಳು ಹಾಗೂ ತಂದೆ-ತಾಯಿಗಳ ತಪ್ಪಲ್ಲ, ಜೀವನದ ಮರು ಮುದ್ರಣಸಾಧ್ಯವಿಲ್ಲ ಹಾಗಾಗಿ ಅವರ ಅಂಗನ್ಯೂನ್ಯತೆ ಎತ್ತಿಹಿಡಿಯುವ ಬದಲು ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸವಾಗಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷರಾದ ಶ್ರೀಮತಿ ಎಸ್.ಎಚ್.ರೇಣುಕಾದೇವಿ ಅವರು ಹೇಳಿದರು.

         ಸೋಮವಾರ ಜಿಲ್ಲಾ ಆಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ಅಂಗವಿಕಲರ ಸಂಘ ಮತ್ತು ಜಿಲ್ಲಾ ಅಂಗವಿಕಲರ ವಿಶೇಷ ಶಾಲಾ ನೌಕರರ ಸಂಘ ಹಾಗೂ ಎಸ್.ಜೆ.ಎಂ.ದೈಹಿಕ ಅಂಗವಿಕಲರ ವಸತಿಯುತ ಪ್ರೌಢಶಾಲೆ ಇವರುಗಳ ಸಹಯೋಗದಲ್ಲಿ ನಗರದ ಹೊಸಮಠದ ಶ್ರೀ ಬಸವೇಶ್ವರ ಸಮುದಾಯ ಭವನದಲ್ಲಿ ಜರುಗಿದ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

         ಪಂಜಾಬಿ ಕವಿಗಳಾದ ಅಮೃತಾ ಪ್ರೀಮ ಅವರು ಹೇಳಿರುವ ಹಾಗೆ ಈ ಸುಂದರ ಸೃಷ್ಟಿಯಲ್ಲಿ ಅಂಗವೈಕಲ್ಯತೆ, ಬಡತನ, ದಾರಿದ್ರ್ಯ, ಹಸಿವು ದೇವರು ಸೃಷ್ಟಿಸಿದ ಲೋಪವಾಗಿದೆಯೇ? ಎಂಬ ಪ್ರಶ್ನೆ ಉದ್ಭವಿಸುತ್ತದೆ. ಅಂಗವೈಕಲ್ಯತೆಗೆ ವೈಜ್ಞಾನಿಕ ಕಾರಣವೇ ಬೇರೆಯಾಗಿದೆ. ಮಕ್ಕಳು ಹೇಗೆ ಹುಟ್ಟಿರಲಿ, ಗಂಡಾಗಲಿ ಹೆಣ್ಣಾಗಲಿ ಕುಟುಂಬಕ್ಕೆ ಒಂದೇ ಮಗು ಸಾಕು. ಮಕ್ಕಳನ್ನು ಪ್ರೀತಿ ಮಮತೆಯಿಂದ ಬೆಳೆಸಬೇಕು. ಸಮಾಜದಲ್ಲಿ ಸ್ವಾವಲಂಬಿಗಳಾಗಿ ಸದೃಢವಾಗಿ ಜೀವನ ನಡೆಸುವಂತೆ ಅವರಿಗೆ ಸ್ಫೂರ್ತಿ ತುಂಬಬೇಕು. ಆರೋಗ್ಯಕರ ಸ್ಪರ್ಧೆ ಇರಲಿ, ಇತರನ್ನು ಕಡೆಗಣಿಸುವ ಪ್ರವೃತ್ತಿ ಬೇಡ. ಅಂಗವೈಕ್ಯವನ್ನು ಮೆಟ್ಟಿ ನಿಲ್ಲಬೇಕು ಹಾಗೂ ನಮ್ಮ ನಮ್ಮ ಅಭಿವೃದ್ಧಿ ನಾವೇ ಮಾಡಿಕೊಳ್ಳಬೇಕು. ಹೃದಯ ಶ್ರೀಮಂತಿಕೆ ಇರುವವರು ವಿಕಲಚೇತನರಲ್ಲ ಎಂದು ಹೇಳಿದರು.

       ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರು ಮಾತನಾಡಿ, ಹುಟ್ಟು ಆಕಸ್ಮಿಕ, ಸಾವು ನಿಶ್ಚಿತ, ಈ ನಡುವೆ ಬರುವ ಸುಮಧುರ ಕ್ಷಣಗಳು ಅವಿಸ್ಮರಣೀಯವಾಗಿವೆ. ಸಾಮಾನ್ಯರಿಗಿಂತ ವಿಕಲಚೇತನರು ವಿಶ್ವಮಟ್ಟದಲ್ಲಿ ಅಸಾಮಾನ್ಯ ಸಾಧನೆ ಮಾಡಿದ ಉದಾಹರಣೆಗಳಿವೆ. ವಿಶ್ವದ ಶ್ರೇಷ್ಠ ವಿಜ್ಞಾನಿ ಐನ್‍ಸ್ಟಿನ್ ಅವರು ಕೂಡ ಒಬ್ಬ ವಿಕಲಚೇತನರು. ವಿಶ್ವ ಸಂಸ್ಥೆಯು 1992ರಿಂದ ಜನ ಸಾಮಾನ್ಯರಲ್ಲಿ ಜಾಗೃತಿ ಮೂಡಿಸಲು ವಿಶ್ವ ವಿಕಲಚೇತನರ ದಿನಾಚರಣೆ ಆಚರಿಸುತ್ತಿದೆ ಎಂದು ಹೇಳಿದರು.

          ಪ್ರತಿಯೊಬ್ಬರು ಅರ್ಥಪೂರ್ಣ ಹಾಗೂ ಪರಿಪೂರ್ಣವಾಗಿ ಬದುಕು ನಡೆಸಬೇಕು. ಭೌದಿಕ ಹಾಗೂ ಭಾವನಾತ್ಮಕ ಬೆಸೆಯುವ ಕೆಲಸವಾಗಬೇಕು. ವಿಕಲಚೇತನ ಮಕ್ಕಳು ಜನಿಸಿದರೆಂದು ತಂದೆ-ತಾಯಿಗಳು ಕೊರಗದೆ ಅವರಿಗೆ ಸಮಾಜದಲ್ಲಿ ಉತ್ತಮ ವೇದಿಕೆ, ಕೌಶಲ್ಯ ನೀಡಬೇಕು. ಪ್ರತಿ ಹಂತದಲ್ಲಿ ಪೂರಕ ವ್ಯವಸ್ಥೆ ಕಲ್ಪಿಸಬೇಕು. ಅವರಿಗೆ ಅಭಿರುಚಿ ಇರುವ ಕ್ಷೇತ್ರದಲ್ಲಿ ಪ್ರೋತ್ಸಾಹ ನೀಡಿದಲ್ಲಿ ಅಸಮಾನ್ಯ ಸಾಧನೆ ಮಾಡುತ್ತಾರೆ.

          ರಾಣೇಬೆನ್ನೂರಿನ ನಾಗರಾಜ ಗರಡಿಮನಿ ಅವರು ಇಂದು ರಾಜ್ಯ ಪ್ರಶಸ್ತಿ ಪಡೆಯುತ್ತಿದ್ದಾರೆ. ಪ್ರತಯೊಬ್ಬ ವ್ಯಕ್ತಿ ಮನಸ್ಥಿತಿ ಬದಲಾಯಿಸಬೇಕು. ಪ್ರತಿ ವ್ಯಕ್ತಿ ಸಾಧನೆ ಮಾಡಲು ಸಾಧ್ಯ, ಈ ಕಾರ್ಯಕ್ರಮ ಹೊಸ ಹುರುಪು, ಚುರುಕು, ಉತ್ಸಾಹ, ಹುಮ್ಮಸ್ಸು ತರಲಿ, ಎಲ್ಲರೂ ಅರ್ಥಪೂರ್ಣ ಬದುಕು ಕಟ್ಟಿಕೊಳ್ಳಿರಿ. ಸರ್ಕಾರ ವಿಕಲಚೇತನರಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಶೇ.3ರಷ್ಟು ಅನುದಾನ ವಿಕಲಚೇತನರ ಅಭಿವೃದ್ಧಿಗೆ ಮೀಸಲಿಡುತ್ತದೆ.

           ಈ ಯೋಜನೆಗಳ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಹೇಳಿದರು.ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿಗಳಾದ ಶ್ರೀಮತಿ ವೈ.ಎಲ್.ಲಾಡಖಾನ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಅನ್ಯಾಯವಾದವರಿಗೆ ನ್ಯಾಯ ಒದಗಿಸುವುದು ಕಾನೂನು ಸೇವೆಗಳ ಪ್ರಾಧಿಕಾರದ ಮುಖ್ಯ ಉದ್ದೇಶವಾಗಿದೆ. ತಾಲೂಕು, ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಪ್ರಾಧಿಕಾರವು ಕಾರ್ಯನಿರ್ವಹಿಸುತ್ತಿದೆ. ಪ್ರತಿಯೊಬ್ಬರೂ ನಮ್ಮ ಹಕ್ಕುಗಳನ್ನು ಕರ್ತವ್ಯಗಳನ್ನು ತಿಳಿದುಕೊಳ್ಳಬೇಕು. ವಿಕಲತೆ ಶರೀರಕ್ಕೆ ಹೊರತು ಮನಸ್ಸಿಗಲ್ಲ, ಎಲ್ಲರಂತೆ ವಿಕಲಚೇತನರು ಸರಿಸಮಾನರು ಎಂದು ಹೇಳಿದರು.

          ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪೆನಲ್ ವಕೀಲರಾದ ಕುಮಾರಿ ರಾಜೇಶ್ವರಿ ಚಕ್ಕಲೇರ ಅವರು ಸಮಾನ ಅವಕಾಶಗಳು, ಅವರ ಹಕ್ಕುಗಳ ಸಂರಕ್ಷಣೆ ಮತ್ತು ಸಂಪೂರ್ಣ ಭಾಗವಹಿಸುವಿಕೆ ಕಾಯ್ದೆ 1995 ಕುರಿತು ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪತ್ರವನ್ನು ವಿತರಿಸಲಾಯಿತು.

          ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಕೆ.ಸಿ.ಪಾವಲಿ, ಕಾರ್ಯದರ್ಶಿ ಪಿ.ಎಂ.ಬೆನ್ನೂರ, ಅಪರ ಜಿಲ್ಲಾಧಿಕಾರಿ ವಿನೋದ ಹೆಗ್ಗಳಗಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪಿ.ವೈ.ಶೆಟ್ಟೆಪ್ಪನವರ, ಜಿಲ್ಲಾ ಅಂಗವಿಕಲರ ಸಂಘದ ಅಧ್ಯಕ್ಷ ಪುಟ್ಟಪ್ಪ ಜಲದಿ, ಉಪಾಧ್ಯಕ್ಷ ಮೌನೇಶ ಬಡಿಗೇರ, ಹಾವೇರಿ ಜಿಲ್ಲಾ ಅಂಗವಿಕಲ ಮಕ್ಕಳ ವಸತಿ ಶಾಲೆಗಳ ಸ್ವಯಂ ಸೇವಾ ಸಂಘದ ಅಧ್ಯಕ್ಷ ಎಚ್.ಆರ್.ಶಿವಕುಮಾರ ಇತರರು ಉಪಸ್ಥಿತರಿದ್ದರು.

           ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಮಲ್ಲಿಕಾರ್ಜುನ ಮಠದ ಅವರು ಸ್ವಾಗತಿಸಿದರು. ಮುತ್ತುರಾಜ ಮಾದರ ವಂದಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link