ದಾವಣಗೆರೆ:
ಪಾರಂಪರಿಕ ವೈದ್ಯ ಪದ್ಧತಿಯ ಚಿಕಿತ್ಸಾ ವಿಧಾನಗಳನ್ನು ದಾಖಲಿಸುವ ಜೊತೆಗೆ ಕೇಂದ್ರ ಸರ್ಕಾರದ ಮಾನ್ಯತೆ ಪಡೆಯುವ ನಿಟ್ಟಿನಲ್ಲಿ ಪ್ರಯತ್ನಿಸಬೇಕೆಂದು ಕ್ರಿಯಾಶೀಲ ಗೆಳೆಯರ ಬಳಗದ ಅಧ್ಯಕ್ಷ ಮುಕುಂದ ಮೈಗೂರು ಅವರು ಪಾರಂಪರಿಕ ವೈದ್ಯರಿಗೆ ಕರೆ ನೀಡಿದರು.
ನಗರದ ತರಳಬಾಳು ಕೃಷಿ ವಿಜ್ಞಾನ ಕೇಂದ್ರದಲ್ಲಿ ಸೋಮವಾರ ಪಾರಂಪರಿಕ ವೈದ್ಯ ಪರಿಷತ್ ಆಶ್ರಯದಲ್ಲಿ ಏರ್ಪಡಿಸಿದ್ದ ಧನ್ವಂತರಿ ಜಯಂತಿ ಹಾಗೂ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಪಾರಂಪರಿಕ ವೈದ್ಯರು ತಮ್ಮ ಚಿಕಿತ್ಸಾ ವಿಧಾನಗಳನ್ನು ದಾಖಲಿಸುವ ಜೊತೆಗೆ ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆಯಬೇಕಾಗಿದೆ. ಈ ನಿಟ್ಟಿನಲ್ಲಿ ಪರಿಷತ್ ಕಾರ್ಯೋನ್ಮುಖವಾಗಬೇಕೆಂದು ಕಿವಿಮಾತು ಹೇಳಿದರು.
ಅಸಾಧ್ಯ ರೋಗಗಳಿಗೂ ಸಹ ಪಾರಂಪರಿಕ ವೈದ್ಯ ಪದ್ಧತಿಯು ರಾಮಬಾಣವಾಗಿದೆ. ಹೀಗಾಗಿ ಜನರಿಗೆ ಆಯುರ್ವೇದ, ಪಾರಂಪರಿಕ ವೈದ್ಯ ಪದ್ಧತಿಯ ಮೇಲೆ ನಂಬಿಕೆ ಹೆಚ್ಚಾಗಿದೆ. ಆದ್ದರಿಂದ ನಮ್ಮ ಭಾರತೀಯ ಪರಂಪರೆಯ ಪಾರಂಪರಿಕ ವೈದ್ಯ ಪದ್ಧತಿಯನ್ನು ಉಳಿಸಿ, ಬೆಳೆಸಬೇಕಾದ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪರಿಷತ್ ರಾಜ್ಯಾಧ್ಯಕ್ಷ ನೇರ್ಲಿಗಿ ಗುರುಸಿದ್ಧಪ್ಪ ಮಾತನಾಡಿ, ಇತ್ತೀಚೆಗೆ ಪಾರಂಪರಿಕ ವೈದ್ಯ ಪದ್ಧತಿಯ ಚಿಕಿತ್ಸಾ ವಿಧಾನವನ್ನು ಸರಳ ಚಿಕಿತ್ಸೆಯ ಹೆಸರಿನಲ್ಲಿ ಹಣ ಮಾಡುವ ದಂಧೆಯನ್ನಾಗಿ ಕೆಲವರು ಮಾಡಿಕೊಂಡಿದ್ದಾರೆ. ಹಣ ಗಳಿಕೆ ಪಾರಂಪರಿಕ ವೈದ್ಯರ ಮೂಲ ಉದ್ದೇಶ ಆಗಕೂಡದು. ನಿಸ್ವಾರ್ಥ ಮನೋಭಾವದಿಂದ ಜನರ ಸೇವೆ ಮಾಡಬೇಕೆಂದು ಕಿವಿಮಾತು ಹೇಳಿದರು.
ನಮ್ಮ ಪರಿಷತ್ ಆರಂಭವಾದಾಗಿನಿಂದಲೂ ಧನ್ವಂತರಿ ಜಯಂತಿಯನ್ನು ಆಚರಿಸಿಕೊಂಡು ಬರುತ್ತಿದ್ದು, ಗಿಡಮೂಲಿಕೆಗಳಿಗೆ ಧನ್ವಂತರಿ ಅದ್ಭುತ ಶಕ್ತಿ ತುಂಬಿದ್ದಾರೆ. ಈಗಿನ ಆಧುನಿಕತೆಯ ಭರಾಟೆಯಲ್ಲಿ ದೇಶೀಯ ಚಿಕಿತ್ಸಾ ಪದ್ಧತಿ ಕಳೆಗುಂದಿದ್ದರೂ, ಸಹಸ್ರಾರು ವರ್ಷಗಳಿಂದ ಚಾಲ್ತಿಯಲ್ಲಿದ್ದದ್ದು ಪಾರಂಪರಿಕ ವೈದ್ಯ ಪದ್ಧತಿಯೇ ಎಂಬುದನ್ನು ಯಾರೂ ಸಹ ಮರೆಯಬಾರದು ಎಂದು ಹೇಳಿದರು.
ಪಾರಂಪರಿಕ ವೈದ್ಯ ರಹಮತ್ ಉಲ್ಲಾ ಮಾತನಾಡಿ, ಭೂಮಿಯಲ್ಲಿ ನಿಸರ್ಗದತ್ತವಾಗಿ ಸುಮಾರು 10 ಲಕ್ಷ ಗಿಡಮೂಲಿಕೆಗಳಿವೆ ಎಂಬ ಅಂದಾಜಿದೆ. ಧನ್ವಂತರಿಯಾಗಿ ಅವತರಿಸಿದ ಮಹಾವಿಷ್ಣುವು ಮನುಷ್ಯ ಶರೀರದ ಎಲ್ಲಾ ಕಾಯಿಲೆಗಳಿಗೂ 32 ಗಿಡಮೂಲಿಕೆಗಳಲ್ಲೇ ಪರಿಹಾರ ಒದಗಿಸಿ ಕೊಟ್ಟಿದ್ದಾರೆ ಎಂದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಪಾರಂಪರಿಕ ವೈದ್ಯ ಸಮ್ಮೇಳನದ ಯಶಸ್ಸಿಗೆ ಶ್ರಮಿಸಿದವರನ್ನು ಅಭಿನಂದಿಸಿ ಗೌರವಿಸಲಾಯಿತು . ಕಾರ್ಯಕ್ರಮದಲ್ಲಿ ಪಾರಂಪರಿಕ ವೈದ್ಯ ವಿರೂಪಾಕ್ಷಪ್ಪ ಮತ್ತಿತರರು ಉಪಸ್ಥಿತರಿದ್ದರು