ಆಳುವವರಿಂದ ಕವಿಗಳ ಮೇಲೆ ನಿರ್ಬಂಧ

ದಾವಣಗೆರೆ:

       ಪ್ರಸ್ತುತ ದೇಶದಲ್ಲಿ ಆಳುವವರು ಕವಿಗಳ ಮೇಲೆ ನಿರ್ಬಂಧ ಹೇರುತ್ತಿದ್ದಾರೆಂದು ಖ್ಯಾತ ಕವಿ ಡಾ.ಸಿದ್ಧಲಿಂಗಯ್ಯ ಆತಂಕ ವ್ಯಕ್ತಪಡಿಸಿದರು.

       ನಗರದ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ಡಾ.ಸಿದ್ಧಲಿಂಗಯ್ಯ ಪ್ರತಿಷ್ಠಾನ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಇವುಗಳ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬರಹಗಾರ ಪಾಪುಗುರು ಅವರ ಮುಳ್ಳೆಲೆಯ ಮದ್ದು ಕವನ ಸಂಕಲನ ಲೋಕಾರ್ಪಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

     ಕವಿಗಳು ನಾವು ಹೇಳಿದನ್ನೇ ಬರೆಯಬೇಕೆಂಬ ಧೋರಣೆ ಹೊಂದಿರುವ ಸರ್ಕಾರವು, ಕವಿಗಳು ತನ್ನನ್ನು ಹೊಗಳಬೇಕೆಂಬುದನ್ನು ಬಯಸುವುದು ಖಂಡಿತಾ ಒಪ್ಪಲುಸಾಧ್ಯವಿಲ್ಲ. ಇದಕ್ಕೆ ಒಪ್ಪದವರನ್ನು, ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವದ ಬಗ್ಗೆ ಮಾತನಾಡುವ ಕವಿಗಳ ಮೇಲೆ ಆಳುವವರು ನಿರ್ಬಂಧ ಹೇರುತ್ತಿದೆ. ಅಲ್ಲದೆ, ಅಂಥಹ ಕವಿಗಳನ್ನು ಗೃಹ ಬಂಧನದಲ್ಲಿರಿಸಿದ್ದಾರೆ. ಇದನ್ನು ಎಲ್ಲರೂ ಖಂಡಿಸಬೇಕು, ಪ್ರತಿಭಟಿಸಬೇಕೆಂದು ಕರೆ ನೀಡಿದರು

      ರಾಷ್ಟ್ರಕವಿ ಕುವೆಂಪು ಅವರು `ರಾಜನ ಬಿರುದನ್ನು ಕೋಗಿಲೆ ಬಯಸದು’ ಎಂದು ಹೇಳಿದ ಮಾತುಗಳನ್ನು ಪ್ರಸ್ತುತ ನೆನಪಿಸಿಕೊಳ್ಳುವ ತುರ್ತಿದೆ. ಕವಿತೆ ಬರೆಯುವವರ ಮೇಲೆ ನಿರ್ಬಂಧ ಹೇರಬಾರದು. ಅಕಸ್ಮಾತ್ ಹಿಂಸೆಗೆ ಇಳಿದರೆ, ಪ್ರಚೋದನೆ ಮಾಡಿದರೆ ಮಾತ್ರ ಬಂಧಿಸಬೇಕು. ಹೀಗೇ ಬರೆಯಬೇಕು ಎಂದು ಹೇಳುವುದು ಸರ್ಕಾರದ ಕೆಲಸವಲ್ಲ. ಸರ್ಕಾರ ಸಮಾಜದಲ್ಲಿ ನೊಂದವರ ಪರ ಕೆಲಸ ಮಾಡಬೇಕು. ಸರ್ಕಾರ ಸ್ವಾತಂತ್ರ್ಯ ಕೊಡುವ ದಿಕ್ಕಿನಲ್ಲಿ ಸಾಗಬೇಕೇ ವಿನಹ ಸ್ವಾತಂತ್ರ್ಯ ಅಪಹರಿಸುವ ಕೆಲಸ ಮಾಡಬಾರದು ಎಂದು ಹೇಳಿದರು.

      ಯುವ ಕವಿಗಳು ಒಮ್ಮೆಲೇ ಮಹಾಕಾವ್ಯ ಬರೆಯಲು ಹೊರಡಬಾರದು. ಸರಳವಾಗಿಯೇ ಪರಿಣಾಮಕಾರಿಯಾಗಿ ಕವನಗಳನ್ನು ರಚಿಸಲುಸಾಧ್ಯ. ಕವಿತೆಗೆ ತನ್ನದೇ ಆದ ಶಕ್ತಿ ಇದೆ, ಆ ಶಕ್ತಿಯನ್ನು ಬಳಸಿಕೊಳ್ಳಬೇಕು. ಈಗ ನಾವು ಎದುರಿಸುತ್ತಿರುವ ಪರಿಸ್ಥಿತಿಯಿಂದ ಹೊರ ಬರಲು ಸಾಧ್ಯವಾಗಲಿದೆ ಎಂದರು.

      ಪಾಪುಗುರು ತಮ್ಮ ಮೊದಲಕೃತಿಯಲ್ಲಿ ಕೇವಲ ಕವಿತೆಗಳಷ್ಟೇ ಅಲ್ಲದೇ ಕವಿತೆ ಬರೆಯಲು ಪ್ರೇರಣೆ ಏನು? ಎಂಬುದನ್ನು ಬರೆದುಕೊಂಡಿದ್ದಾರೆ. ಜೊತೆಗೆ ವಿಮರ್ಷಕರ ಅಭಿಪ್ರಾಯವನ್ನೂ ದಾಖಲಿಸಿದ್ದಾರೆ. ಫೇಸ್‍ಬುಕ್‍ನಲ್ಲಿ ಕವಿತೆಗಳನ್ನು ಬರೆದು ಆ ಮೂಲಕ ಒಂದು ಬಳಗವನ್ನು ಜೊತೆ ಮಾಡಿಕೊಂಡು ಈ ರೀತಿ ಸಂಕಲನವೊಂದನ್ನು ಬಿಡುಗಡೆ ಮಾಡುತ್ತಿರುವುದು ಕನ್ನಡದಲ್ಲಿ ಇದೇ ಮೊದಲು. ಹೀಗಾಗಿ ಇದು ಕಾವ್ಯಲೋಕಕ್ಕೆ ಹೊಸ ದಿಕ್ಕು ತೋರಿಸುವ ಕೃತಿ ಇದಾಗಿದೆ ಎಂದು ಬಣ್ಣಿಸಿದರು.

     ಸಾಮಾಜಿಕ ಜಾಲತಾಣದ ಮೂಲಕ ಇಷ್ಟು ಜನರನ್ನು ಸೇರಿಸಲಾಗಿದೆ. ಸಾಮಾಜಿಕ ಮಾಧ್ಯಮದಲ್ಲೂ ಸಕಾರಾತ್ಮಕ ಕ್ರಾಂತಿ ಸಾಧ್ಯವಿದೆ. ಸಾಮಾಜಿಕ ಜಾಲತಾಣಗಳಲ್ಲಿ ವಿಶ್ವಾಸ ಇಡಬಹುದು ಎಂಬುದಕ್ಕೆ ಈ ಸಮಾರಂಭ ಸಾಕ್ಷಿಕರಿಸುತ್ತದೆ ಎಂದು ಹೇಳಿದರು.
ಎಸ್‍ಜೆವಿಪಿ ಕಾಲೇಜಿನ ಪ್ರಾಧ್ಯಾಪಕ, ಚಿಂತಕ ಪ್ರೊ.ಎ.ಬಿ.ರಾಮಚಂದ್ರಪ್ಪ ಮಾತನಾಡಿ, ಪಾಪುಗುರು ಅವರ ಕೃತಿಯಲ್ಲಿ 25 ಕವನಗಳಿದ್ದರೆ, 80 ವಿಮರ್ಷೆಗಳಿವೆ.

      ಸಾಮಾಜಿಕ ಮಾಧ್ಯಮ ನಮ್ಮ ಸಂವೇದನೆಗೆ, ಸಾಹಿತ್ಯಕ್ಕೆ ಹೇಗೆ ಬಳಸಿಕೊಳ್ಳಬಹುದು ಎಂಬುದಕ್ಕೆ ಈ ಕೃತಿ ಸಾಕ್ಷಿಯಾಗಿದೆ. ಪೇಪರ್ ಹಂಚುವ ಹಾಗೂ ಬಡಿಗೆ ವೃತ್ತಿಯಲ್ಲಿ ತೊಡಗಿರುವ ಪಾಪುಗುರು ಬರೆದಿರುವ ಕವಿತೆಗಳಲ್ಲಿ ಬೆವರಿನ ಸೊಗಡಿದೆ. ತಮ್ಮ ಕವನಗಳ ಬಗ್ಗೆ ಅವರು `ಸರ್ಟಿಫೈಡ್’ ವಿರ್ಷಮಕರನ್ನು ಮೀರಿ ಹೊಸ ಓದುಗರಿಂದ ವಿಮರ್ಷೆಗಳನ್ನು ಪಡೆದುಕೊಂಡಿರುವುದು ನಿಜಕ್ಕೂ ಹೊಸ ವಿಧಾನವಾಗಿದೆ ಎಂದರು.

        ತಾಲೂಕು ಕಸಾಪ ಅಧ್ಯಕ್ಷ ಬಿ.ವಾಮದೇವಪ್ಪ ಮಾತನಾಡಿ, ಡಾ.ಸಿದ್ಧಲಿಂಗಯ್ಯನವರು ನಾಡು ಕಂಡ ಶ್ರೇಷ್ಠ ಸಾಹಿತಿ ಅವರಿಗೆ ಜ್ಞಾನಪೀಠ ಪ್ರಶಸ್ತಿ ದೊರೆಯಬೇಕು. ಇತ್ತೀಚೆಗೆ ಕವನ ಆಸ್ವಾದಿಸುವವರ ಸಂಖ್ಯೆ ಕಡಿಮೆ ಆಗಿದೆ. ಸಾಹಿತ್ಯ ಕೃತಿಗಳು ಧೂಳು ಹಿಡಿಯುವ ಸ್ಥಿತಿಗೆ ತಲುಪಿರುವುದು ವಿಷಾಧಕರ. ಕಾವ್ಯ ಸಂಗೀತದ ಜೊತೆ ಸೇರಿ ಹಾಡಿನ ರೂಪ ಪಡೆದರೆ ಜನರಿಗೆ ತಲುಪಿ ಹೆಚ್ಚು ದಿನ ಉಳಿಯಲು ಸಾಧ್ಯವಾಗಲಿದೆ ಎಂದರು.

      ಕಾರ್ಯಕ್ರಮದಲ್ಲಿ ಕವಿ ಮುದಲ್ ವಿಜಯ್, ಯುವಕವಿ ಪಾಪುಗುರು, ಪತ್ರಕರ್ತ ಎ.ಫಕೃದ್ದೀನ್ ಮತ್ತಿತರರು ಉಪಸ್ಥಿತರಿದ್ದರು. ಕವಯತ್ರಿ ಅಕ್ಕಮಹಾದೇವಿ ಹಾರೋಗೇರಿ ನಿರೂಪಿಸಿದರು. ಸಾಹಿತಿ ಶ್ರೀಕಾಂತ್‍ರಾವ್ ಸ್ವಾಗತಿಸಿದರು. ಗಂಗಾಧರ ಬಿ.ಎಲ್.ನಿಟ್ಟೂರು ವಂದಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link