ಗುಬ್ಬಿ
ತಾಲ್ಲೂಕಿನ ಎಲ್ಲಾ ಕೆರೆಗಳಿಗೂ ಹೇಮಾವತಿ ನೀರು ಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದು ಎಲ್ಲಾ ಕೆರೆಗಳಿಗೂ ಏಕಕಾಲದಲ್ಲಿ ನೀರು ಹರಿಸುವುದು ಕಷ್ಟವಾಗುತ್ತದೆ. ಹಾಗಾಗಿ ಹಂತ ಹಂತವಾಗಿ ನೀರನ್ನು ಹರಿಸಲಾಗುತ್ತದೆ ಎಂದು ಸಣ್ಣ ಕೈಗಾರಿಕೆ ಸಚಿವ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.
ತಾಲ್ಲೂಕಿನ ಗುಬ್ಬಿ ಹೊಸಹಳ್ಳಿ ಗ್ರಾಮ ಪಂಚಾಯತಿಗೆ ವ್ಯಾಪ್ತಿಯ ವರ್ಜನ್ ಕೆರೆಯ ಗಂಗಾಪೂಜೆ ಹಾಗೂ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಹೇಮಾವತಿ ಜಲಾಶಯದಲ್ಲಿ ಸಾಕಷ್ಟು ನೀರು ಸಂಗ್ರಹವಾಗಿದ್ದು ಇನ್ನೂ 3 ತಿಂಗಳುಗಳ ಕಾಲ ನಾಲೆಯಲ್ಲಿ ನೀರು ಹರಿಸಲಾಗುತ್ತಿದೆ. ಯಾರು ಆತಂಕ ಪಡುವ ಅಗತ್ಯವಿಲ್ಲ. ಪ್ರಸ್ತುತ ಜಿಲ್ಲೆಯಲ್ಲೆ ಎರಡನೆ ದೊಡ್ಡಕೆರೆಯಾದ ಕಡಬ ಕೆರೆಗೆ ನೀರು ಹರಿಯುತ್ತಿದೆ. ನಂತರ ಗುಬ್ಬಿ ಕೆರೆಗೆ ನೀರುಹರಿಸಲಾಗುವುದು ಉಳಿದಂತೆ ಬಹುತೇಕ ಎಲ್ಲಾ ಕೆರೆಗಳನ್ನು ತುಂಬಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಸಮರ್ಪಕವಾಗಿ ಮಳೆ ಬಾರದೆ ಅಂತರ್ಜಲ ಮಟ್ಟ ಸಂಪೂರ್ಣವಾಗಿ ಕುಸಿದಿದ್ದು 1200 ಅಡಿ ಕೊಳವೆಬಾವಿ ಕೊರೆದರೂ ನೀರು ಬರುತ್ತಿಲ್ಲ. ಅದು ನನಗೆ ತಿಳಿದಿದೆ. ಕೆರೆಯಲ್ಲಿ ನೀರು ನಿಂತರೆ ಅಂತರ್ಜಲದ ಮಟ್ಟ ಹೆಚ್ಚಳವಾಗುತ್ತದೆ. ಕಳೆದ ವರ್ಷ ಸುಮಾರು 400 ಕ್ಕೂ ಹೆಚ್ಚು ಕೊಳವೆ ಬಾವಿ ಕೊರೆಯಲಾಗಿತ್ತು. 110 ರೀ ಬೋರ್ ಮಾಡಲಾಗಿತ್ತು. ಈ ವರ್ಷ ಅಂತಹ ಸಮಸ್ಯೆ ಕಾಣುತ್ತಿಲ್ಲ. ಕಳೆದ 15 ರಿಂದ ತಾಲ್ಲೂಕಿನ ಡಿ.12 ನಿಂದ 5 ಕೆರೆಗಳಿಗೆ, ಡಿ.15 ನಿಂದ 13 ಕೆರೆಗಳಿಗೆ ನೀರನ್ನು ಹರಿಸಲಾಗುತ್ತಿದೆ. ಈಗಾಗಲೆ ತಾಲ್ಲೂಕಿನ ನಿಟ್ಟೂರು, ಬೆಲವತ್ತ, ಪುರ, ಕಗ್ಗೆರೆ, ಹೊನ್ನವಳ್ಳಿ ಲಕ್ಕೇನಹಳ್ಳಿ ಕೆರೆಗಳು ಭರ್ತಿಯಾಗಿ ಕೋಡಿ ಬಿದ್ದಿವೆ. ಈ ನೀರು ಕಡಬ ಕೆರೆ ಮತ್ತು ಎಂ.ಹೆಚ್.ಪಟ್ಣ ಕೆರೆ ಮೂಲಕ ಗುಬ್ಬಿ ಕೆರೆಗೆ ಬರುತ್ತದೆ. ಇದರಿಂದ ಕಡಬ ಮತ್ತು ಗುಬ್ಬಿ ಕೆರೆಗಳನ್ನು ತುಂಬಿಸಲಾಗುವುದೆಂದು ತಿಳಿಸಿದರು.
ಈ ಭಾಗದಲ್ಲಿ ರಸ್ತೆ ಕಾಮಗಾರಿ, ಸಮುದಾಯಭವನ ನಿರ್ಮಾಣ ಕಾಮಗಾರಿಗಳು ನಡೆಯಬೇಕಾಗಿದ್ದು ನೆನೆಗುದಿಗೆ ಬಿದ್ದಿರುವ ಎಲ್ಲಾ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಅಗತ್ಯವಿರುವ ಅನುದಾನವನ್ನು ಬಿಡುಗಡೆಮಾಡುವುದಾಗಿ ತಿಳಿಸಿದ ಅವರು, ವರ್ಜನ ಕೆರೆಯನ್ನು ಬಹುಗ್ರಾಮ ಕುಡಿಯುವ ನೀರಿನ ಉದ್ದೇಶಕ್ಕಾಗಿ ಅಭಿವೃದ್ಧಿ ಪಡಿಸಲಾಗುತ್ತಿದ್ದು ತ್ವರಿತವಾಗಿ ಕಾಮಗಾರಿ ಆರಂಭಿಸುವುದರ ಜೊತೆಗೆ ಕೆರೆಗೆ ಹೇಮಾವತಿ ನೀರನ್ನು ಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಎಪಿಎಂಸಿ ಸದಸ್ಯ ಕಳ್ಳಿಪಾಳ್ಯ ಲೋಕೇಶ್ ಮಾತನಾಡಿ, ತಾಲ್ಲೂಕಿನ ಎಲ್ಲಾ ಕೆರೆಗಳನ್ನು ತುಂಬಿಸಲು ಸಚಿವರು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ. ಈಗಾಗಲೇ ಬಹುತೇಕ ಕೆರೆಗಳು ಭರ್ತಿಯಾಗಿದ್ದರೆ ಉಳಿದ ಕೆರೆಗಳಿಗೂ ಅಲ್ಪ ಸ್ವಲ್ಪ ನೀರು ಹರಿದಿದೆ. ಇನ್ನೂ ಮೂರು ತಿಂಗಳು ನಾಲೆಯಲ್ಲಿ ನೀರು ಹರಿಯುವುದರಿಂದ ಬಹುತೇಕ ತಾಲ್ಲೂಕಿನ ಎಲ್ಲಾ ಕೆರೆಗಳು ಭರ್ತಿಯಾಗಿಲಿವೆ ಎಂದು ತಿಳಿಸಿದ ಅವರು, ಜನಸಾಮಾನ್ಯರಲ್ಲಿ ಹತ್ತಿರವಾಗಿ ಇರುವಂತಹ ಮಂತ್ರಿಗಳು ಎಂದರೆ ಅದು ಶ್ರೀನಿವಾಸ್ ಅವರು ಮಾತ್ರ. ಸಚಿವ ಸ್ಥಾನದಲ್ಲಿರುವುದರಿಂದ ತಾಲ್ಲೂಕಿನ ಅಭಿವೃದ್ಧಿಗೆ ಯಾವುದೇ ಸಮಸ್ಯೆ ಇಲ್ಲ. ತಾಲ್ಲೂಕಿನಲ್ಲಿ ಸಾಕಷ್ಟು ಕಾಮಗಾರಿಗಳಿಗೆ ಯೋಜನೆಯನ್ನು ಮಾಡಲಾಗಿದ್ದು ಇದರಿಂದ ಸಾಕಷ್ಟು ಉದ್ಯೋಗದ ಅವಕಾಶ ದೊರೆಯುತ್ತದೆ ಎಂದರು.
ಜಿಲ್ಲಾ ಪಂಚಾಯತಿ ಮಾಜಿ ಉಪಾಧ್ಯಕ್ಷ ಕೆ.ಸಿ.ಕೃಷ್ಣಮೂರ್ತಿ ಮಾತನಾಡಿ, ಈ ಭಾಗದ ಕೆರೆಗಳಿಗೆ ಹೇಮಾವತಿ ನೀರು ಹರಿಸಲು ಸಚಿವರು ಹೆಚ್ಚಿನ ಗಮನ ಹರಿಸಿದ್ದು ತ್ವರಿತವಾಗಿ ಎಲ್ಲಾ ಕೆರೆಗಳನ್ನು ಭರ್ತಿ ಮಾಡಿಸಲಿದ್ದಾರೆ. ಅಲ್ಲದೆ ಈ ಭಾಗದ ರಸ್ತೆ ಮತ್ತು ಸಮುದಾಯ ಭವನಗಳ ನಿರ್ಮಾಣ ಮಾಡಲು ಕ್ರಮ ಕೈಗೊಂಡಿದ್ದು ಎಲ್ಲಾ ಕಾಮಗಾರಿಗಳನ್ನು ಹಂತ ಹಂತವಾಗಿ ಪೂರ್ಣಗೊಳಿಸಲಿದ್ದಾರೆ ಎಂದು ತಿಳಿಸಿದ ಅವರು, ನೆನೆಗುದಿಗೆ ಬಿದ್ದಿರುವ ಎಲ್ಲಾ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಸಚಿವರಿಗೆ ಮನವಿ ಮಾಡಿದರು.
ಇದೆ ಸಂದರ್ಭದಲ್ಲಿ ಸಣ್ಣ ಕೈಗಾರಿಕೆ ಸಚಿವ ಎಸ್.ಆರ್.ಶ್ರೀನಿವಾಸ್ ಅವರನ್ನು ಗ್ರಾಮಸ್ಥರು ಮತ್ತು ಯುವಕರು ಸನ್ಮಾನಿಸಿದರು .ಕಾರ್ಯಕ್ರಮದಲ್ಲಿ ಎಪಿಎಂಸಿ ಸದಸ್ಯ ಲಕ್ಷ್ಮಿರಂಗಯ್ಯ, ಯುವ ಜನತಾದಳದ ತಾಲ್ಲೂಕು ಅಧ್ಯಕ್ಷ ಕೆ.ಆರ್.ವೆಂಕಟೇಶ್, ಮುಖಂಡರಾದ ದೊಡ್ಡಯ್ಯ, ಸಿ.ಯೂ.ರಾಜಣ್ಣ, ಲಕ್ಷ್ಮಣ್, ರಂಗಸ್ವಾಮಿ, ಬಸವರಾಜು, ರಾಜು, ಸೋಮಶೇಖರ್, ವೀರಪ್ಪ, ನಾಗರಾಜುಅರಸ್, ವiಹಾಲಿಂಗಪ್ಪ, ನರಸಿಂಹರಾಜು ಸೇರಿದಂತೆ ವರ್ಜನಕೆರೆ ಯುವಕರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








