ವಿಕೋಪಗಳಿಂದ ಹಾನಿ ತಡೆಗೆ ಮುನ್ನೆಚ್ಚರಿಕೆ ಅಗತ್ಯ

ಚಿತ್ರದುರ್ಗ

     ವಿಕೋಪಗಳು ಹೇಳಿ, ಕೇಳಿ ಬರುವುದಿಲ್ಲ, ವಿಕೋಪಗಳಿಂದ ತೀವ್ರ ಹಾನಿ ಸಂಭವಿಸುವ ಮೊದಲೇ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳು ಹಾಗೂ ಪೂರ್ವ ಸಿದ್ಧತೆಗಳನ್ನು ಕೈಗೊಂಡಲ್ಲಿ ಹಾನಿ ತಡೆಗಟ್ಟಲು ಸಹಾಯಕವಾಗಲಿದೆ ಎಂದು ಮೈಸೂರು ಆಡಳಿತ ತರಬೇತಿ ಸಂಸ್ಥೆ ವಿಕೋಪ ನಿರ್ವಹಣಾ ಕೇಂದ್ರದ ತರಬೇತಿ ನಿರ್ದೇಶಕ ಅಲೆಕ್ ಲೋಬೋ ಹೇಳಿದರು.

      ಜಿಲ್ಲಾ ವಿಕೋಪ ನಿರ್ವಹಣಾ ಪ್ರಾಧಿಕಾರ ಹಾಗೂ ಜಿಲ್ಲಾಡಳಿತದ ಸಹಯೋಗದೊಂದಿಗೆ ಸೋಮವಾರ ನಗರದ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ಆಯೋಜಿಸಿದ್ದ ಜಿಲ್ಲಾ ವಿಕೋಪ ನಿರ್ವಹಣಾ ಯೋಜನೆ ಪರಿಷ್ಕರಣೆ ಹಾಗೂ ವಿಕೋಪ ಮಿತಗೊಳಿಸುವಿಕೆ, ಪೂರ್ವ ಸಿದ್ದತೆ ಮತ್ತು ಸ್ಪಂದನಾ ಯೋಜನೆ ತರಬೇತಿ ಕಾರ್ಯಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.

      ಪ್ರಕೃತಿ ವಿಕೋಪಗಳು ಸಣ್ಣ ಮಟ್ಟದಲ್ಲಿಯೇ ಸಂಭವಿಸಿದರೂ ನಿಯಂತ್ರಿಸುವುದು ಕಷ್ಟಸಾಧ್ಯ. ಇನ್ನು ದೊಡ್ಡ ಮಟ್ಟದಲ್ಲಿ ಅವಘಡಗಳು ಸಂಭವಿಸಿದಾಗ ನಿರ್ವಹಣೆ ಹಾಗೂ ನಿಯಂತ್ರಣ ತೀವ್ರ ಕಷ್ಟಕರ. ಹೀಗಾಗಿ ಅವಘಡಗಳು ಸಂಭವಿಸುವ ಮೊದಲೆ ಮುನ್ನೆಚ್ಚರಿಕೆ, ಪೂರ್ವ ಸಿದ್ಧತೆ, ನಡೆಸಿದರೆ ಅವಘಡಗಳಿಂದ ನಮಗೆ ರಕ್ಷಣೆ ಸಿಗುತ್ತದೆ. ಇದಕ್ಕಾಗಿಯೇ ಸ್ಪಂದನ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದ್ದು, ವಿಕೋಪ ಸಂಭವಿಸುವ ಪೂರ್ವದಲ್ಲಿ ಸಾರ್ವಜನಿಕರು, ಅಧಿಕಾರಿಗಳು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಈಗಾಗಲೆ ಎಲ್ಲಾ ಜಿಲ್ಲೆಗಳಲ್ಲಿ ಸ್ಪಂದನಾ ಯೋಜನೆ ಪ್ರಾರಂಭವಾಗಿದ್ದು, ಚಿತ್ರದುರ್ಗ ಜಿಲ್ಲೆಯಲ್ಲಿಯೂ ಇದಕ್ಕೆ ಎಲ್ಲಾ ಅಧಿಕಾರಿಗಳು ಕೈ ಜೋಡಿಸುವ ಅಗತ್ಯವಿದೆ. ಜಿಲ್ಲೆಯಲ್ಲಿ ಸಂಭವಿಸುವಂತಹ ವಿಕೋಪಗಳನ್ನು ತಡೆಯಲು ಮುಂಜಾಗ್ರತೆ ಕ್ರಮಗಳ ಬಗ್ಗೆ ಎಲ್ಲರೂ ಅರಿತಿರಬೇಕು ಎಂದು ಅಲೆಕ್ ಲೋಬೊ ಹೇಳಿದರು.

       ಜಿಲ್ಲಾ ಅಗ್ನಿಶಾಮಕ ದಳದ ಅಧಿಕಾರಿ ಮಹಾಲಿಂಗಪ್ಪ ಅವರು ಅಗ್ನಿ ನಂದಿಸುವ ಬಗೆ ಪ್ರಾತ್ಯಕ್ಷಿಕೆ ನೀಡಿ, ಜಿಲ್ಲೆಯಲ್ಲಿ ಅಗ್ನಿ ಅವಘಡಗಳು ಸಂಭವಿಸಿದಾಗ ನಂದಿಸಲು ನೀರು, ಕೆಮಿಕಲ್ಸ್ ಬಳಸಿದ ಮಾತ್ರಕ್ಕೆ ನಂದಿಸಲು ಆಗುವುದಿಲ್ಲ. ಬೆಂಕಿಯನ್ನು ತೀವ್ರಗತಿಯಲ್ಲಿ ನಂದಿಸಲು ನಾಲ್ಕು ವಿಧಗಳಿದ್ದು, ಅದರಲ್ಲಿ ಮೊದಲನೆಯದಾಗಿ ಎ.ವರ್ಗದ ಬೆಂಕಿ ನಂದಿಸುವ ಗ್ಯಾಸ್ ಬಳಸಿ (ವಾಟರ್ ಟೈಪ್ ಗ್ಯಾಸ್) ಸಣ್ಣ ವಸ್ತುಗಳಿಗೆ ತಗುಲಿದ ಬೆಂಕಿಯನ್ನು ನಂದಿಸಬಹುದು.

       ಮೆಕ್ಯಾನಿಕಲ್ ಫೋಮ್ ಡೈರ್ ಎಕ್ಸ್‍ಪೆಸಸ್ (ಬಿ. ವರ್ಗದ ಅಗ್ನಿ ನಂದಕ) ದಿಂದ ಎಣ್ಣೆ ಪದಾರ್ಥಗಳಿಗೆ ತಗುಲಿದ ಬೆಂಕಿಯನ್ನು ನಂದಿಸಬಹುದು. ಕಾರ್ಬನ್ ಡೈ ಆಕ್ಸೈಡ್ ಅಗ್ನಿ ನಂದಕ ( ಸಿ. ವರ್ಗದ ಅಗ್ನಿ ನಂದಕ) ದಿಂದ ಗ್ಯಾಸ್ ರೆಗ್ಯುಲೇಟರ್, ಪೈಪ್‍ನಲ್ಲಿ ಉಂಟಾಗುವ ಅಗ್ನಿ ಅವಘಡಗಳನ್ನು ನಿಯಂತ್ರಿಸಬಹುದು. ಡ್ರೈ ಕೆಮಿಕಲ್ ಪೌಡರ್ ಅಗ್ನಿ ನಂದಕ (ಡಿ. ವರ್ಗದ ಅಗ್ನಿ ನಂದಕ) ದಿಂದ ಫ್ಯಾಕ್ಟರಿ, ಕಾರು, ಲಾರಿಗಳಲ್ಲಿ ಉಂಟಾಗುವ ಅಗ್ನಿ ಅವಘಡಗಳನ್ನು ತಡೆಯಬಹುದು ಎಂದು ಮಾಹಿತಿ ನೀಡಿದರು.

      ಗ್ಯಾಸ್ ಸಿಲಿಂಡರ್‍ಗಳನ್ನು ವಿತರಕರಿಂದ ಪಡೆಯಬೇಕಾದರೆ ಮೊದಲು ಲೀಕ್ ಆಗುತಿದೆಯೇ, ಇಲ್ಲವೆ ಎಂದು ಪರೀಕ್ಷಿಸಿ ತೆಗೆದುಕೊಳ್ಳಬೇಕು. ಕೆಲವು ಸಿಲಿಂಡರ್‍ಗಳು ತೆಗೆದುಕೊಳ್ಳುವಾಗ ಲೀಕ್ ಆಗುತ್ತಿರುತ್ತವೆ. ಅಂತಹ ಸಮಯದಲ್ಲಿ ಮನೆಗಳಲ್ಲಿ ಸಿಲಿಂಡರ್ ಬಳಕೆ ಮಾಡಿದಾಗ ವಿದ್ಯುತ್ ಲೈಟ್ ಸ್ವಿಚ್ ಹಾಕಿದ ಕೂಡಲೆ, ಸಿಲಿಂಡರ್ ಸ್ಪೋಟವಾಗಿ ಅವಘಡಗಳು ನಡೆಯುತ್ತವೆ. ಹೀಗಾಗಿ ಸಿಲಿಂಡರ್ ಸೋರಿಕೆ ಆಗುವುದು ಕಂಡು ಬಂದರೆ ಮನೆಯಲ್ಲಿ ಕಿಟಕಿಗಳನ್ನು ತೆರೆದು, ಸಿಲಿಂಡರ್ ಮೇಲೆ ನೀರಿನಿಂದ ನೆನೆಸಿದ ಗೋಣಿಚೀಲವನ್ನು ಸಿಲಿಂಡರ್‍ಗೆ ಸುತ್ತಬೇಕು.

       ಇಲ್ಲದಿದ್ದಲ್ಲಿ ತಕ್ಷಣವೇ ಗ್ಯಾಸ್ ಏಜೆನ್ಸಿ ಹಾಗೂ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಬೇಕು ಎಂದು ಹೇಳಿದರು.ಕೆಲವು ಹಳ್ಳಿಗಳಲ್ಲಿ ಬೆಂಕಿ ಅವಘಡಗಳು ಸಂಭವಿಸಿದಾಗ ಸಾರ್ವಜನಿಕರು ಬೇರೊಂದು ಊರುಗಳಲ್ಲಿ ಇದ್ದುಕೊಂಡು 101 ಕ್ಕೆ ಕರೆ ಮಾಡುತ್ತಾರೆ, ಅದರೆ ಎಲ್ಲಿ ಬೆಂಕಿ ಬಿದ್ದಿದೆ ಎಂದು ಸರಿಯಾಗಿ ಮಾಹಿತಿ ನೀಡುವುದಿಲ್ಲ, ಕರೆ ಮಾಡಿದ ನೆಟ್‍ವರ್ಕ್ ಮಾಹಿತಿಯ ಮೂಲ ಆಧರಿಸಿ ಹೋದಾಗ, ಅಲ್ಲಿ ಅಗ್ನಿ ಅವಘಡ ನಡೆದಿರುವುದಿಲ್ಲ.

        ಜಿಲ್ಲೆಯಲ್ಲಿ ಅಗ್ನಿ ಅವಘಡಗಳು ನಡೆದಾಗ ಜಿಲ್ಲೆಯ ಕೋಡ್ ನಮೂದಿಸಿ ಕಾಲ್ ಮಾಡಬೇಕು, ತಾಲ್ಲೂಕುಗಳಲ್ಲಿ ಘಟನೆ ಸಂಭವಿಸಿ ದಾಗ ತಾಲ್ಲೂಕಿನ ಕೋಡ್ ನಮೂದಿಸಿ ಕಾಲ್ ಮಾಡಿ ತಿಳಿಸಬೇಕು. ಅಗ್ನಿಶಾಮಕ ದಳದವರು ಕೇವಲ ಬೆಂಕಿ ನಂದಿಸುವ ಕೆಲಸ ಮಾತ್ರವಲ್ಲದೆ ಪ್ರಾಣಿಗಳು ನೀರಿನಲ್ಲಿ ಅಥವಾ ಇತರೆ ಗುಂಡಿಗಳಲ್ಲಿ ಬಿದ್ದಾಗಲೂ ರಕ್ಷಿಸುತ್ತೇವೆ. ಮಾಹಿತಿ ನೀಡಬೇಕಾದರೆ ಅಗ್ನಿಶಾಮಕ ದಳ ಕಛೇರಿ ದೂರವಾಣಿ ನಂಬರ್-221900 ಗೆ ಸಂಪರ್ಕಿಸುವಂತೆ ತಿಳಿಸಿದರು.

       ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ಪಿ.ವಿ. ಸವಿತಾ ಪ್ರಾಸ್ತಾವಿಕವಾಗಿ ಮಾತನಾಡಿದರು. ತರಬೇತಿ ಕಾರ್ಯದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು. ತರಬೇತಿ ಜೂ. 4 ರಂದು ಮುಂದುವರೆಯಲಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap