ಬಳ್ಳಾರಿ:
ಮಕ್ಕಳ ಪಾಲನಾ ಸಂಸ್ಥೆಯ ಪ್ರತಿನಿಧಿಗಳು ಹಾಗೂ ಸಿಬ್ಬಂದಿ ವರ್ಗದವರು ಮಕ್ಕಳಗಳ ವಿವರಗಳನ್ನು ಪ್ರಮಾಣಿಕ ಮಾಹಿತಿಯೊಂದಿಗೆ ವರದಿಯನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಸಲ್ಲಿಸಿ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಬಾಲನ್ಯಾಯ ಮಂಡಳಿಯ ಅಧ್ಯಕ್ಷೆ ಕೆ.ಕಾತ್ಯಯನಿ ಅವರು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಕೋಳಗಲ್ಲು ರಸ್ತೆಯ ಚರ್ಚ್ ಪಕ್ಕದಲ್ಲಿರುವ ನವಜೀವನ ಸಂಸ್ಥೆಯಲ್ಲಿ ಮಕ್ಕಳ ಪಾಲನಾ ಸಂಸ್ಥೆಯ ಪ್ರತಿನಿಧಿಗಳು ಹಾಗೂ ಸಿಬ್ಬಂದಿಗಳಿಗೆ ಮಕ್ಕಳ ಕಡತ ನಿರ್ವಹಣೆ, ವೈಯಕ್ತಿಕ ಪೋಷಣಾ ವರದಿ ಹಾಗೂ ಸಾಮಾಜಿಕ ತನಿಖಾ ವರದಿಯ ಕುರಿತು ಎರಡು ದಿನಗಳ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಎಲ್ಲಿ ಮನುಷ್ಯನು ಭ್ರಷ್ಟಾಚಾರದಲ್ಲಿ ತೊಡಗಿರುತ್ತಾನೋ… ಅಲ್ಲಿ ಕಾನೂನಿನ ನೆರವು ಅವಶ್ಯಕವಾಗಿರುತ್ತದೆ. ಇದರಿಂದ ಸಾರ್ವಜನಿಕರಿಗೆ ಕಾನೂನಿನ ಬಗ್ಗೆ ಅರಿವು ಮೂಡಿಸುವುದು ಅಗತ್ಯವಾಗಿರುತ್ತದೆ.
ಮಗುವನ್ನು ಮುಖ್ಯವಾಹಿನಿಗೆ ತರಲು ಸಂಸ್ಥೆಯವರು ನೀಡಿರುವ ವರದಿಯ ಮೇಲೆ ಅವಲಂಭಿತವಾಗಿರುತ್ತದೆ ಸದರಿ ಸಂಸ್ಥೆಗಳ ಸಿಬ್ಬಂದಿಗಳು ತಮ್ಮ ಮಕ್ಕಳೆಂದು ಭಾವಿಸಿ ಪ್ರಮಾಣಿಕವಾಗಿ, ವಾಸ್ತವಿಕವಾಗಿ ಹಾಗೂ ಕಾನೂನಿನ ಚೌಕಟ್ಟಿನಲ್ಲಿ ವರದಿ ತಯಾರಿಸಿ ಸಲ್ಲಿಸಿ, ಇದರಿಂದ ಆ ಮಕ್ಕಳಿಗೆ ಉತ್ತಮ ಜೀವನ ರೂಪಿಸಿದಂತೆ ಆಗುತ್ತದೆ ಎಂದು ಹೇಳಿದ ಅವರು ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಈ ತರಬೇತಿಯ ಉಪಯೋಗ ಪಡೆದುಕೊಂಡು ತಾವು ನೀಡುವ ಸೇವೆಯು ಸಮಾಜಿಕವಾಗಿರಲಿ ಇದು ನಮ್ಮೆಲ್ಲರ ಕರ್ತವ್ಯ ಎಂದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ಹಾಗೂ ನ್ಯಾಯಾಧೀಶರಾದ ಬಿ.ಎಸ್.ಹಂದ್ರಾಳ್ ಅವರು ಮಾತನಾಡಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದವತಿಯಿಂದ ಶೇ.80 ರಷ್ಟು ಕಾರ್ಯಕ್ರಮಗಳನ್ನು ಮಕ್ಕಳಿಗೆ ಹಾಗೂ ಮಹಿಳೆಯರ ರಕ್ಷಣೆ ಮಾಡಲಾಗುತ್ತಿದೆ. ಮಕ್ಕಳ ಮೇಲೆ ದೌರ್ಜನ್ಯ ಹಾಗೂ ಬಾಲಕಾರ್ಮಿಕ ಪದ್ಧತಿಗೆ ಎಲ್ಲರೂ ಕೈಜೋಡಿಸಬೇಕು ಎಂದರು.
ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳಿಗೆ ಮಕ್ಕಳ ಕಡತ ನಿರ್ವಹಣೆ, ವೈಯಕ್ತಿಕ ವರದಿ ಕುರಿತು ಮತ್ತು ಯಾವ ರೀತಿ ಮಕ್ಕಳ ಪೋಷಣೆ ಮಾಡುವ ಕುರಿತು ಈ ತರಬೇತಿಯಲ್ಲಿ ನೀಡಲಾಗುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ವಿಜಯಲಕ್ಷ್ಮೀ ಎಂ.ಎಸ್ ಅವರು ಮಾತನಾಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ನಾಗೇಶ ಬಿಲ್ವ್.ಎಲ್ ಅವರು ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಬಾಲಕಾರ್ಮಿಕ ಯೋಜನೆಯ ಯೋಜನಾ ನಿರ್ದೇಶಕ ಮೌನೇಶ್, ಕೊಪ್ಪಳದ ಯುನಿಸೆಫ್ ಸಂಯೋಜಕರಾದ ರಾಘವೇಂದ್ರ ಭಟ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರವಿಕುಮಾರ ಪವಾರ್ ಯಶೋಧ ಸೇರಿದಂತೆ ಸ್ವಯಂ ಸೇವಾ ಸಂಸ್ಥೆಯ ಪದಾಧಿಕಾರಿಗಳು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ