ಬಳ್ಳಾರಿ
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಶಯದಂತೆ ಬಳ್ಳಾರಿ ನಗರದಲ್ಲಿ ಗುಡಿಸಲು ರಹಿತ ಬಳ್ಳಾರಿ ಮಾಡುವ ಪಣ ತೊಟ್ಟಿರುವುದಾಗಿ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಸೋಮಶೇಖರ್ ರೆಡ್ಡಿ ಹೇಳಿದರು.
ರೂಪನಗುಡಿ ರಸ್ತೆಯ ಹಳೆ ಮುನಿಸಿಪಲ್ ಮನೆಗಳ ಶ್ರೀ ಹುಲಿಗೆಮ್ಮ ದೇವಸ್ಥಾನ ಹಿಂಭಾಗದಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಇವರಿಂದ ಆಯೋಜಿಸಿದ್ದ ವಿವಿಧ 6 ಘೋಷಿತ ಕೊಳಚೆ ಪ್ರದೇಶಗಳಲ್ಲಿ ಪಿಎಂಎವೈಹೆಚ್‍ಎ ಸರ್ವರಿಗೂ ಸೂರು ಯೋಜನೆಯಡಿ 1613 ಮನೆಗಳ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ಹಾಗೂ ನೂತನವಾಗಿ ನಿರ್ಮಿಸಿದ್ದ ಸಮುದಾಯ ಭವನವನ್ನು ಉದ್ಘಾಟಿಸಿ ಮಾತನಾಡಿದರು.
ಈ ಯೋಜನೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಣ ಒದಗಿಸುತ್ತಿವೆ. ಫಲಾನುಭವಿಗಳೂ ಸಹ ಬ್ಯಾಂಕ್ ನವರಿಂದ ಸಾಲಸೌಲಭ್ಯ ಪಡೆದು ಮನೆಗಳನ್ನು ನಿರ್ಮಿಸಿಕೊಳ್ಳಲು ಮುಂದೆ ಬರಬೇಕೆಂದು ಕರೆ ನೀಡಿದರು. ಬಾಪೂಜಿ ನಗರದಲ್ಲಿ 424 ಮನೆಗಳು, ಆಕುಲ ಚೆಲುಮಯ್ಯ ಚೆರುವು ಕೊಳಚೆ ಪ್ರದೇಶದಲ್ಲಿ 63, ಮಿಲ್ಲರ್ ಪೇಟೆ ನಂ:1 ಕೊಳಚೆ ಪ್ರದೇಶದಲ್ಲಿ 345, ಚೆಲುವಾದಿ ಕೇರಿಯಲ್ಲಿ 254, ಅಂದ್ರಾಳ್ ನಲ್ಲಿ 326 ಮತ್ತು ಬಿಸಿಲಹಳ್ಳಿಯ ಹರಿಜನ ಕೇರಿಯಲ್ಲಿ 201 ಹೀಗೆ ಒಟ್ಟು 1613 ಮನೆಗಳನ್ನು ನಿರ್ಮಿಸುವ ಯೋಜನೆ ಇದೆ.
ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯು ನಿಗದಿತ ಅವಧಿಯೊಳಗೆ ಮನೆ ನಿರ್ಮಿಸಿಕೊಡಲಿದೆ. ಫಲಾನುಭವಿಗಳು ಸಹ ಆಸಕ್ತಿವಹಿಸಬೇಕೆಂದರು. ಬಳ್ಳಾರಿ ನಗರದಲ್ಲಿ ಎರಡನೇ ಹಂತದಲ್ಲಿ ಇನ್ನೂ 4 ಸಾವಿರ ಮನೆಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ. ಒಂದೆ ಮನೆಗೆ ಅಂದಾಜು ವೆಚ್ಚ 4.91 ಲಕ್ಷ ರೂ., ಇದ್ದು ಮನೆಯ ವಿಸ್ತೀರ್ಣ 360 ಚದುರ ಮೀಟರ್ ನಲ್ಲಿ ನಿರ್ಮಾಣಗೊಳ್ಳಲಿದೆ ಎಂದರು.
ಮೇಯರ್ ಸುಶೀಲಾಬಾಯಿ ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಕೇಂದ್ರ ಸರ್ಕಾರದಿಂದ 1.50 ಲಕ್ಷಗಳು, ರಾಜ್ಯ ಸರ್ಕಾರದಿಂದ 2. ಲಕ್ಷ ರೂ., ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಶೇ 10 ರಷ್ಟು ಅಂದರೆ ರೂ.49,100 ಠೇವಣಿ ಹಣ ಪಾವತಿಸಬೇಕೆಂದರು.
ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಜಿ.ಕೃಷ್ಣರೆಡ್ಡಿ ಮಾತನಾಡಿ, ಅಲ್ಪಸಂಖ್ಯಾತರು ಮತ್ತು ಇತರರಿಗೆ ಕೇಂದ್ರ ಸರ್ಕಾರದ ಅನುದಾನ ರೂ.1.50 ಲಕ್ಷ, ರಾಜ್ಯ ಸರ್ಕಾರದ ಅನುದಾನ ರೂ.1.20 ಲಕ್ಷ ದೊರೆಯಲಿದೆ. ಈ ಸಮುದಾಯದ ಜನರು ರೂ.73,650 ರಷ್ಟು ಠೇವಣಿ ಹಣ ಪಾವತಿಸಬೇಕು. ಇನ್ನುಳಿದ ಬಾಕಿ ಮೊತ್ತವನ್ನು ಸಾಲದ ರೂಪದಲ್ಲಿ 15 ವರ್ಷಗಳ ಅವಧಿಯಲ್ಲಿ ಕಂತಿನ ಮೂಲಕ ಪಾವತಿಸಬೇಕೆಂದರು.
ಸ್ಥಳೀಯ ಮುಖಂಡರಾದ ಚಂದ್ರ ಮತ್ತಿತರರು ಮಾತನಾಡಿದರು. ಉಪಮೇಯರ್ ಲಕ್ಷ್ಮಿದೇವಿ, ಪಾಲಿಕೆ ಸದಸ್ಯರಾದ ಗಾಜುಲ ಶ್ರೀನಿವಾಸ್, ದಿವ್ಯಾ ಕುಮಾರಿ, ಎಸ್.ಮಲ್ಲನಗೌಡ, ಶ್ರೀನಿವಾಸ್ ಮೋತ್ಕರ್, ಬಿಜೆಪಿ ಎಸ್‍ಸಿ ಮೋರ್ಚಾದ ಮುಖಂಡ ಜಿ.ರಾಮಚಮದ್ರಯ್ಯ, ಮಾಜಿ ಮೇಯರ್ ಇಬ್ರಾಹಿಂ ಬಾಬು, ಸಹಾಯಕ ಕಾರ್ಯಪಾಲಕ ಅಬಿಯಂತರವರ ಕಚೇರಿಯ ವ್ಯವಸ್ಥಾಪಕ ಬಿ.ಸಲೀಂ, ಪ್ರಥಮದರ್ಜೆ ಸಹಾಯಕ ಎ.ಶಿವಶಂಕರ್ ಸೇರಿದಂತೆ ಅನೇಕ ಮುಖಂಡರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ