ಕ್ಯಾಟ್ ಹತ್ಯೆಗೆ ಸಂಚು ರೂಪಿಸಿದ ನಾಲ್ವರ ಬಂಧನ..!

ಬೆಂಗಳೂರು

     ನ್ಯಾಯಾಲಯದ ಆವರಣ ಇಲ್ಲವೇ ಕಬ್ಬನ್‌ಪಾರ್ಕ್‌ನ ವಾಹನ ನಿಲುಗಡೆ ಪ್ರದೇಶದಲ್ಲಿ ಕುಖ್ಯಾತ ರೌಡಿ ಮಧುಸೂದನ್ ಅಲಿಯಾಸ್ ಕ್ಯಾಟ್‌ನ ಕೊಲೆಗೆ ರೂಪಿಸಿದ್ದ ಸಂಚನ್ನು ವಿಫಲಗೊಳಿಸಿರುವ ಉತ್ತರ ವಿಭಾಗದ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

     ಜೈಭಾರತಿ ನಗರದ ಆರ್. ಸತ್ಯ (೨೦), ಚೌಡೇಶ್ವರಿ ನಗರದ ಚಂದನ್ (೨೦), ಭೋವಿ ಪಾಳ್ಯದ ಮಹೇಶ್ ಅಲಿಯಾಸ್ ಪಿಚ್ಚಾ (೨೫), ಬಸವೇಶ್ವರ ನಗರದ ನಿಶಾಂತ್ ಅಲಿಯಾಸ್ ಜಾಯ್ (೨೧) ಬಂಧಿಸಿ ಕ್ಯಾಟ್ ಜೀವ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳಿಂದ ಮಚ್ಚು, ಲಾಂಗನ್ನು ವಶಪಡಿಸಿಕೊಳ್ಳಲಾಗಿದ್ದು, ಕೊಲೆ ಸಂಚಿನಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಇನ್ನು ೧೦ ಮಂದಿ ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ನಡೆಸಲಾಗಿದೆ ಎಂದು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ಅವರು ತಿಳಿಸಿದರು.

      ರಾಜಾಜಿನಗರ ಹಾಗೂ ಕೆಪಿ ಅಗ್ರಹಾರ ಪೊಲೀಸ್ ಠಾಣೆಯ ರೌಡಿ ಪಟ್ಟಿಯಲ್ಲಿರುವ ರೌಡಿ ಕ್ಯಾಟ್ ಅಪರಾಧ ಪ್ರಕರಣವೊಂದರಲ್ಲಿ ಜೈಲಿಗೆ ಹೋಗಿ ಇತ್ತೀಚೆಗೆ ಬಿಡುಗಡೆಯಾಗಿ ಬಂದಿದ್ದು, ನ್ಯಾಯಾಲಯಕ್ಕೆ ಹಾಜರಾಗುವ ಬಗ್ಗೆ ತಿಳಿದು ನಂದಿನಿ ಲೇಔಟ್‌ನ ಲಗ್ಗೆರೆ ಬ್ರಿಡ್ಜ್ ಬಳಿ ನಾಲ್ವರು ಸೇರಿ ೧೦ ಮಂದಿ ಕ್ಯಾಟ್‌ನ ಕೊಲೆಗೆ ಸಂಚು ರೂಪಿಸಿದ್ದರು.

     ಬಂಧಿತರು ಸೇರಿ ೧೦ ಮಂದಿ ಲಗ್ಗೆರೆ ಬ್ರಿಡ್ಜ್ ಬಳಿಗೆ ನಿನ್ನೆ ಮಧ್ಯಾಹ್ನ ೧೨ರ ವೇಳೆ ಹೋಗುತ್ತಿರುವ ಖಚಿತ ಮಾಹಿತಿಯಾಧರಿಸಿ ಕಾರ್ಯಾಚರಣೆ ಕೈಗೊಂಡ ನಂದಿನಿ ಲೇಔಟ್ ಪೊಲೀಸ್ ಇನ್ಸ್‌ಪೆಕ್ಟರ್ ಲೋಹಿತ್ ಮತ್ತವರ ಸಿಬ್ಬಂದಿ ನಾಲ್ವರನ್ನು ಬಂಧಿಸಿ ಕ್ಯಾಟ್‌ನ ಕೊಲೆಯ ಸಂಚನ್ನು ವಿಫಲಗೊಳಿಸಿದೆ.

    ವಿಚಾರಣೆಯಲ್ಲಿ ಆರೋಪಿ ನಿಶಾಂತ್ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ದರೋಡೆಗೆ ಸಂಚು, ಕೊಲೆ ಸಂಚು, ಕೊಲೆಯತ್ನ ಸೇರಿ ೪ ಪ್ರಕರಣಗಳು ದಾಖಲಾಗಿರುವುದನ್ನು ಒಪ್ಪಿಕೊಂಡಿದ್ದಾನೆ. ಆರೋಪಿ ಮಹೇಶ್ ವಿರುದ್ಧವೂ ಮಹಾಲಕ್ಷ್ಮಿ ಲೇಔಟ್ ಠಾಣೆಯಲ್ಲಿ ಕೊಲೆಸಂಚು, ಕೊಲೆಯತ್ನ ಪ್ರಕರಣ ದಾಖಲಾಗಿದೆ.
ಪ್ರತಿಯಾಗಿ ಕೊಲೆ

   ರೌಡಿ ಕ್ಯಾಟ್, ಹಿಂದೆ ಬಂಧಿತ ನಿಶಾಂತ್‌ನ ಕೊಲೆಯತ್ನ ನಡೆಸಿದ್ದು, ಇದರ ಪ್ರತಿಕಾರವಾಗಿ ಕ್ಯಾಟ್‌ನ್ನು ಮುಗಿಸಲು ನಿಶಾಂತ್ ಹಾಗೂ ಇತರ ಇಬ್ಬರು ಸಹತರರು ಬುಧವಾರ ಕ್ಯಾಟ್ ನ್ಯಾಯಾಲಯಕ್ಕೆ ಹಾಜರಾಗಲು ಹೋಗುವ ಮಾಹಿತಿಯಾಧರಿಸಿದ್ದರು. ಕ್ಯಾಟ್‌ನ್ನು ನ್ಯಾಯಾಲಯದ ಆವರದಲ್ಲಿ ಇಲ್ಲವೇ ಕಬ್ಬನ್‌ಪಾರ್ಕ್‌ನ ಪಾರ್ಕಿಂಗ್ ಸ್ಥಳದಲ್ಲಿ ತನ್ನ ಸಹಚರರೊಂದಿಗೆ ಕೊಲೆ ಮಾಡಲು ಸಂಚು ರೂಪಿಸಿರುವುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಶಶಿಕುಮಾರ್ ತಿಳಿಸಿದ್ದಾರೆ.

    ರೌಡಿ ಕ್ಯಾಟ್ ವಿರುದ್ಧ ಕೊಲೆಯತ್ನ, ಸುಲಿಗೆ, ಮನೆಗಳವು, ದರೋಡೆ ಸೇರಿ ೧೯ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ರಾಜಾಜಿನಗರ, ವಿಜಯನಗರ, ಹನುಮಂತ ನಗರ, ನಂದಿನಿ ಲೇಔಟ್, ಕೆಪಿ ಅಗ್ರಹಾರ ಪೊಲೀಸರಿಗೆ ಬೇಕಾಗಿದ್ದ ಎಂದು ತಿಳಿಸಿದ್ದಾರೆ.ಕೊಲೆ ಸಂಚನ್ನು ವಿಫಲಗೊಳಿಸಿ ಆರೋಪಿಗಳನ್ನು ಬಂಧಿಸಿದ ತಂಡದ ಕಾರ್ಯವನ್ನು ಶಶಿಕುಮಾರ್ ಪ್ರಶಂಸಿಸಿ ಬಹುಮಾನ ಘೋಷಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link