ತುಮಕೂರು
ಎಲ್ಲೆಡೆ ಕೊರೋನಾ ವೈರಸ್ ಹರಡುತ್ತಿರುವ ಭೀತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತುಮಕೂರು ನಗರದ ಹಿಂದೂ ದೇವಾಲಯಗಳಲ್ಲಿ ಕೆಲವೊಂದು ನಿರ್ಬಂಧಗಳ ನಡುವೆ ಪೂಜಾದಿಗಳನ್ನು ನಿರ್ವಹಿಸಲು ನಿರ್ಧರಿಸಲಾಯಿತು.
ಮೇಯರ್ ಫರೀದಾಬೇಗಂ ಅವರ ಅಧ್ಯಕ್ಷತೆಯಲ್ಲಿ ತುಮಕೂರು ಮಹಾನಗರ ಪಾಲಿಕೆ ಕಚೇರಿಯ ಸಭಾಂಗಣದಲ್ಲಿ ತುಮಕೂರು ನಗರದ ಹಿಂದು ಮತ್ತು ಜೈನ ದೇವಾಲಯಗಳ ಮುಖ್ಯಸ್ಥರು ಮತ್ತು ಅರ್ಚಕರುಗಳಿಗಾಗಿ ಏರ್ಪಡಿಸಿದ್ದ ಚರ್ಚಾಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಯಿತು.
ಈಗ ಹಬ್ಬದ ಸಮಯ. ದೇವಾಲಯಗಳಿಗೆ ಬರುವವರ ಭಕ್ತಾದಿಗಳ ಸಂಖ್ಯೆಯೂ ಅಧಿಕವಾಗಿರುತ್ತದೆ. ಆದರೆ ಈಗ ಕೊರೋನಾ ಭೀತಿ ಇರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಒಂದೆಡೆ ಗುಂಪಾಗಿ ಸೇರುವುದು ಅತ್ಯಂತ ಅಪಾಯಕಾರಿಯಾಗುತ್ತಿದೆ. ಯಾರು- ಯಾವುದೇ ಕಾರಣಕ್ಕೂ ಒಂದೇ ಸ್ಥಳದಲ್ಲಿ ಅಧಿಕ ಸಂಖ್ಯೆಯಲ್ಲಿ ಸೇರದಿರುವುದೇ ಕೊರೋನಾ ವೈರಸ್ ನಿಯಂತ್ರಣಕ್ಕೆ ಈಗಿರುವ ಏಕೈಕ ಮಾರ್ಗೋಪಾಯ.
ಈ ಹಿನ್ನೆಲೆಯಲ್ಲಿ ದೇವಾಲಯಗಳಲ್ಲಿ ಪೂಜಾದಿಗಳನ್ನು ಯಾವುದೇ ಚ್ಯುತಿ ಬಾರದಂತೆ ನಡೆಸಿಕೊಂಡು ಹೋಗಲು ಹಾಗೂ ಅದೇ ಹೊತ್ತಿಗೆ ಅಧಿಕ ಸಂಖ್ಯೆಯಲ್ಲಿ ಭಕ್ತಾದಿಗಳು ಗುಂಪುಗೂಡದಂತೆ ಗಮನಿಸಲು ಪಾಲಿಕೆ ಮೇಯರ್ ಫರೀದಾಬೇಗಂ ಮತ್ತು ಪಾಲಿಕೆಯ ಉಪ ಆಯುಕ್ತ (ಆಡಳಿತ)ರೂ ಆದ ಆರೋಗ್ಯಾಧಿಕಾರಿ ಡಾ.ನಾಗೇಶ್ ಕುಮಾರ್ ಅವರು ನಗರದ ದೇವಾಲಯಗಳ ಮುಖ್ಯಸ್ಥರುಗಳು ಮತ್ತು ಅರ್ಚಕ ವೃಂದಕ್ಕೆ ಮನವಿ ಮಾಡಿಕೊಂಡರು.
ಪಂಚಾಂಗ ಶ್ರವಣ
“ಯುಗಾದಿ ಹಿಂದುಗಳ ಪವಿತ್ರ ಹಬ್ಬ. ಆ ದಿನದಂದು ಎಲ್ಲ ದೇಗುಲಗಳಲ್ಲೂ ಸಾಮಾನ್ಯವಾಗಿ ಪಂಚಾಂಗ ಶ್ರವಣ ಮಾಡುವುದು ಹಿಂದಿನಿಂದ ಬಂದಿರುವ ಸಂಪ್ರದಾಯ. ಇದನ್ನು ಆಲಿಸಲು ಸುಮಾರು ನೂರಿನ್ನೂರು ಭಕ್ತಾದಿಗಳು ಸೇರುವುದು ವಾಡಿಕೆ. ಸುಮಾರು ಮುಕ್ಕಾಲುಗಂಟೆ ಕಾಲ ಬೇಕಾಗುವುದು. ಆದರೆ ಈಗ ಸರ್ಕಾರದ ನಿರ್ಬಂಧ ಇರುವುದರಿಂದ ಏನು ಮಾಡಬೇಕು?’’ ಎಂದು ಅರ್ಚಕರೊಬ್ಬರು ಪ್ರಶ್ನೆಯನ್ನು ಮುಂದಿಟ್ಟರು.
“ಇಂದಿನ ಪರಿಸ್ಥಿತಿ ತೀರಾ ಭಿನ್ನವಾಗಿದೆ. ಹಿಂದೆಂದೂ ಕಾಣದ ಪರಿಸ್ಥಿತಿ ನಮ್ಮ ಮುಂದಿದೆ. ಆದ್ದರಿಂದ ಆದಷ್ಟೂ ಕಡಿಮೆ ಸಂಖ್ಯೆಯ ಭಕ್ತಾದಿಗಳ ಸಮ್ಮುಖ, ಅತಿ ಕಡಿಮೆ ಸಮಯದಲ್ಲಿ ಸಾಂಕೇತಿಕವಾಗಿ ಪಂಚಾಂಗ ಶ್ರವಣ ಮಾಡಿಕೊಳ್ಳಬಹುದು. ಇದಲ್ಲದೆ ಬೆಳಗ್ಗೆ ಮತ್ತು ಸಂಜೆ ಹೊತ್ತಿಗೆ ದೇವರ ಪೂಜೆಯನ್ನು ಅರ್ಚಕರು ನೆರವೇರಿಸಬಹುದಾಗಿದೆ. ಆದರೆ ಭಕ್ತಾದಿಗಳು ಗುಂಪುಗೂಡದಂತೆ ಕ್ರಮ ಕೈಗೊಳ್ಳಬೇಕು. ಸಾಧ್ಯವಾದಷ್ಟು ಎಲ್ಲ ದೇವಾಲಯಗಳಲ್ಲೂ ಭಕ್ತರು ಒಳಗೆ ಬರುವಾಗ ಮತ್ತು ಹೊರಗೆ ಹೋಗುವಾಗ ಸಾಬೂನಿನಿಂದ ಕೈತೊಳೆದುಕೊಳ್ಳುವ ವ್ಯವಸ್ಥೆ ಮಾಡುವುದು ಒಳ್ಳೆಯದು” ಎಂದು ಆರೋಗ್ಯಾಧಿಕಾರಿ ಡಾ.ನಾಗೇಶ್ ಕುಮಾರ್ ಪ್ರತಿಕ್ರಿಯಿಸಿದರು.
ನೀವೇ ಕ್ರಮ ಕೈಗೊಳ್ಳಿ
ಮೇಯರ್ ಫರೀದಾಬೇಗಂ ಮಾತನಾಡುತ್ತ, “ನಾವು ಯಾವ ಧರ್ಮದವರಾದರೂ ಎಲ್ಲರಿಗೂ ಒಳ್ಳೆಯದಾಗಬೇಕೆಂದು ನಾವೆಲ್ಲ ದೇವರಲ್ಲಿ ಪ್ರಾರ್ಥಿಸಲೇಬೇಕು. ಅದಕ್ಕಾಗಿ ದೇವಾಲಯ, ಮಸೀದಿ, ಚರ್ಚ್‍ಗಳು ಇವೆ. ಆದರೆ ಇವತ್ತಿನ ಸನ್ನಿವೇಶದಲ್ಲಿ ಕರೋನಾ ನಿಯಂತ್ರಣಕ್ಕೆ ನಾವೆಲ್ಲ ಸರ್ಕಾರದೊಂದಿಗೆ ಸಹಕರಿಸಬೇಕಾಗಿದೆ. ಅದಕ್ಕಾಗಿ ಹೆಚ್ಚು ಜನರು ದೇವಾಲಯದೊಳಗೆ ಸೇರದಂತೆ ಗಮನಿಸಬೇಕು ಹಾಗೂ ಕಡಿಮೆ ಅವಧಿಯಲ್ಲಿ ಪೂಜಾದಿಗಳನ್ನು ಪೂರ್ಣಗೊಳಿಸಬೇಕು. ಇದನ್ನು ನಿರ್ವಹಿಸುವುದು ನಿಮ್ಮೆಲ್ಲರ ಜವಾಬ್ದಾರಿಯಾಗಿದ್ದು, ಈ ನಿಟ್ಟಿನಲ್ಲಿ ನಿಮ್ಮ ದೇವಾಲಯದಲ್ಲಿ ನೀವೇ ಕ್ರಮ ಕೈಗೊಳ್ಳಬೇಕು” ಎಂದು ಎಲ್ಲರಿಗೂ ಮನವಿ ಮಾಡಿಕೊಂಡರು.
ಸಭೆಯಲ್ಲಿ ನಗರದ ಹಿಂದು ಮತ್ತು ಜೈನ ದೇವಾಲಯಗಳ ಅರ್ಚಕರುಗಳು ಮತ್ತು ಮುಖಂಡರುಗಳು ಆಗಮಿಸಿ, ವಿವಿಧ ವಿಷಯಗಳ ಬಗ್ಗೆ ಮಹಾನಗರ ಪಾಲಿಕೆಯ ಗಮನ ಸೆಳೆದರು. ಕೆಲವರು ದೇವಾಲಯಗಳ ಸುತ್ತಮುತ್ತಲಿನ ಪ್ರದೇಶದ ಸ್ವಚ್ಛತೆ ಕಾಪಾಡುವಂತೆ ಮನವಿ ಮಾಡಿದರು.
ಉಪಮೇಯರ್ ಶಶಿಕಲಾ ಗಂಗಹನುಮಯ್ಯ, ಪಟ್ಟಣ ಯೋಜನೆ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್. ಮಲ್ಲಿಕಾರ್ಜುನಯ್ಯ, ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಎಂ.ಮಹೇಶ್, ಪಾಲಿಕೆ ಸದಸ್ಯರುಗಳಾದ ಜಿ.ಬಿ. ವೀಣಾ, ಎಚ್.ಎಸ್. ನಿರ್ಮಲ, ವಿ.ಎಸ್.ಗಿರಿಜಾ ಮೊದಲಾದವರು ಸಭೆಯಲ್ಲಿ ಭಾಗವಹಿಸಿದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
