ದಾವಣಗೆರೆ:
ಕೊರೊನಾ ಸಂಕಷ್ಟದ ಸಂದರ್ಭದಲ್ಲೂ ಸಾಲದ ಕಂತು ಪಾವತಿಸುವಂತೆ ಕಿರುಕುಳ ನೀಡುತ್ತಿರುವ ಸ್ತ್ರೀ ಶಕ್ತಿ ಸಂಘಗಳು ಮತ್ತು ಕಿರು ಹಣಕಾಸು ಸಂಸ್ಥೆಗಳ ವಿರುದ್ಧ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಜೆಡಿಎಸ್ ಕಾರ್ಯದರ್ಶಿ ಟಿ.ಮಹಮ್ಮದ್ ಗೌಸ್ ಆಗ್ರಹಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ನಾಲ್ಕೈದು ತಿಂಗಳಿನಿಂದ ಭಾರತ ಸೇರಿದಂತೆ ಇಡೀ ಜಗತ್ತಿನಲ್ಲಿಯೇ ಕೊರೊನಾ ಮಹಾಮಾರಿ ರಣಕೇಕೆ ಹಾಕುತ್ತಿದೆ. ಈ ಸೋಂಕು ನಿಯಂತ್ರಣ ಕ್ರಮವಾಗಿ ಘೋಷಣೆ ಮಾಡಿದ್ದ ಲಾಕ್‍ಡೌನ್ ಪರಿಣಾಮ ದುಡುಮೆ ಕಳೆದು ಕೊಂಡು ಸಾವಿರಾರು ಜನರು ಬೀದಿ ಪಾಲಾಗಿದ್ದಾರೆ. ಅಲ್ಲದೆ, ಕೆಲವರು ಒಂದು ಹೊತ್ತಿನ ಕೂಳಿಗಾಗಿಯೂ ಪರಿತಪ್ಪಿಸುವಂತಹ ಪರಿಸ್ಥಿತಿ ಇದೆ.
ಇಂತಹ ಸಂದರ್ಭದಲ್ಲಿ ಸ್ತ್ರೀಶಕ್ತಿ ಸಂಘಗಳು ಹಾಗೂ ಕಿರು ಹಣಕಾಸು ಸಂಸ್ಥೆಗಳು ಸಾಲದ ಕಂತು ಪಾವತಿಸುವಂತೆ ಮಹಿಳೆಯರನ್ನು ಪೀಡಿಸುತ್ತಿರುವುದು ಅತ್ಯಂತ ಖಂಡನೀಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಕಿರು ಹಣಕಾಸು ಸಂಸ್ಥೆಗಳಾದ ಎಸ್.ಕೆ.ಎಸ್, ಗ್ರಾಮೀಣ ಕೂಟ, ಧನಲಕ್ಷ್ಮೀ, ಗ್ರಾಮ ಶಕ್ತಿ, ಉಜ್ಜೀವನ್, ಸುರ್ಯೋದಯ, ರತ್ನಾಕರ, ಧರ್ಮಸ್ಥಳ ಸಂಘ, ಭಾರತ್ ಫೈನಾನ್ಸ್ ಹಾಗೂ ಸ್ತ್ರೀಶಕ್ತಿ ಸ್ವಸಹಾಯ ಸಂಘದವರು ಸಾಲ ಪಡೆದಿರುವ ಮಹಿಳೆಯರ ಬಳಿಗೆ ಹೋಗಿ, ನಮ್ಮ ಸಂಸ್ಥೆಗಳಿಂದ ಪಡೆದಿರುವ ಸಾಲದ ಕಂತು ಪಾವತಿಸಬೇಕು. ಇಲ್ಲದಿದ್ದರೆ, ನಿಮ್ಮ ಮನೆಗಳಲ್ಲಿರುವ ದ್ವಿ ಚಕ್ರ ವಾಹನಗಳು ಅಥವಾ ಸಾಮಾನು-ಸರಂಜಾಮುಗಳನ್ನು ಜಪ್ತು ಮಾಡುವುದಾಗಿ ಬೆದರಿಸುತ್ತಿದ್ದಾರೆ ಎಂದು ಆರೋಪಿಸಿದರು.
ಈ ಎಲ್ಲಾ ಸಂಸ್ಥೆಗಳವರು ವಾರದ ಏಳು ದಿನಗಳ ಕಾಲವೂ ಒಂದೊಂದು ದಿನಗಳಲ್ಲೂ ಒಂದೊಂದು ಪ್ರದೇಶಗಳಲ್ಲಿ ಸಾಲ ಪಡೆದಿರುವ ಮಹಿಳೆಯರನ್ನು ಸೇರಿಸಿ ಕಂತುಗಳನ್ನು ವಸೂಲಿ ಮಾಡಲು ಯಾವುದೇ ಸಾಮಾಜಿಕ ಅಂತರ ಕಾಯ್ದು ಕೊಳ್ಳದೆಯೇ ಸಭೆ ನಡೆಸುತ್ತಾರೆ. ಈ ಸಂದರ್ಭದಲ್ಲಿ ಬಹುತೇಕ ಮಹಿಳೆಯರು ಮಾಸ್ಕ್ ಧರಿಸಿರುವುದಿಲ್ಲ. ಹೀಗೆ ಸಭೆ ಮಾಡುವ ಸಂದರ್ಭದಲ್ಲಿ ಯಾರಿಗಾದರೂ ಕೊರೊನಾ ಸೋಂಕು ತಗುಲಿದರೆ ಯಾರು ಹೊಣೆ? ಎಂದು ಪ್ರಶ್ನಿಸಿದರು.
ಪ್ರಸ್ತುತ ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ದುಡುಮೆ ಇಲ್ಲದೆ ಸಾರ್ವನಿಕರು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಹೀಗಾಗಿ ಕೊರೊನಾ ಸೋಂಕಿನ ಆರ್ಭಟ ಸಂಪೂರ್ಣ ಕಡಿಮೆಯಾಗುವ ವರೆಗೂ ಸಾಲ ವಸೂಲಾತಿ ಪ್ರಕ್ರಿಯೆಗಳನ್ನು ಮುಂದೂಡುವಂತೆ ಜಿಲ್ಲಾಡಳಿತ ಮತ್ತು ಜಿಲ್ಲಾ ರಕ್ಷಣಾಧಿಕಾರಿಗಳು ಎಲ್ಲಾ ಕಿರು ಹಣಕಾಸು ಸಂಸ್ಥೆಗಳ ಮುಖ್ಯಸ್ಥರಿಗೆ ಸೂಚನೆ ನೀಡಬೇಕೆಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ನಸೀಮಾ ಬಾನು, ಮೊಹಮ್ಮದ್ ವಾಸೀಂ ಖಾದ್ರಿ, ಜಿ.ಎಂ.ಭಾಷಾ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ