ದಾವಣಗೆರೆ:
ಸರ್ವರಿಗೂ ಉತ್ತಮ ಶಿಕ್ಷಣ ಹಾಗೂ ಆರೋಗ್ಯ ಕಲ್ಪಿಸುವುದು ಸಂವಿಧಾನದ ಆಶಯವಾಗಿದೆ. ಆದರೆ, ಪ್ರಸ್ತುತ ಶಿಕ್ಷಣ ಮತ್ತು ಆರೋಗ್ಯ ಸೇವೆಯು ದುಬಾರಿಯಾಗಿರುವ ಕಾರಣದಿಂದ ಬಡವರಿಗೆ ಇವು ಮರೀಚಿಕೆಯಾಗಿವೆ ಎಂದು ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಎಲ್.ಹೆಚ್.ಅರುಣಕುಮಾರ್ ಆರೋಪಿಸಿದರು.
ನಗರದ ರೋಟರಿ ಬಾಲಭವನದಲ್ಲಿ ಕರ್ನಾಟಕ ವಿದ್ಯಾರ್ಥಿ ಸಂಘಟನೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಮತ್ತು ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಪಾಸ್ ಆದ ರೈತರ, ಕಾರ್ಮಿಕರ, ಗುತ್ತಿಗೆ ನೌಕರರ ಮಕ್ಕಳಿಗೆ 4ನೇ ವರ್ಷದ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವದಲ್ಲಿ ಪ್ರಭುತ್ವದ ಮುಖ್ಯಸ್ಥ ಮತ್ತು ಕಟ್ಟ ಕಡೆಯ ವ್ಯಕ್ತಿಯ ಮಗನೂ ಸಹ ಸಮಾನವಾದ ಶಿಕ್ಷಣ ಮತ್ತು ಆರೋಗ್ಯ ಪಡೆಯಬೇಕೆನ್ನುವುದು ಸಂವಿಧಾನದ ಆಶಯ. ಆದರೆ ಇಂದು ಶಿಕ್ಷಣ ಮತ್ತು ಆರೋಗ್ಯ ಸಂಪೂರ್ಣ ಖಾಸಗಿಕರಣವಾಗಿದ್ದು, ಬಂಡವಾಳಶಾಹಿಗಳ ಕೈಯಲ್ಲಿ ಸಿಲುಕಿ ಬಡವರು ಸಂಪೂರ್ಣ ವಂಚಿತರಾಗಿದ್ದರೆ ಎಂದು ಕಳವಳ ವ್ಯಕ್ತ ಪಡಿಸಿದರು.
ಜಗತ್ತಿನಲ್ಲಿ ಶೇ.48ರಷ್ಟು ಮಕ್ಕಳಿದ್ದಾರೆ. ಆದರೆ ಸ್ವಾತಂತ್ರ ಬಂದು 70 ವರ್ಷ ಕಳೆದರೂ ಮಕ್ಕಳ ಅಭಿವೃದ್ದಿ, ಬದುಕಿನ ಬಗ್ಗೆ ಚಿಂತನೆ ನಡೆಯದಿರುವುದು ದುರಂತ. ಜಾತೀಯತೆ, ವರ್ಗಬೇಧ, ಧಾರ್ಮಿಕ ಆಚರಣೆಗಳಲ್ಲಿ ಶೋಷಣೆಗೆ ಒಳಪಡುತ್ತಿದ್ದಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಮಕ್ಕಳ ಹಕ್ಕುಗಳ ಆಯೋಗವು ಹಕ್ಕುಗಳನ್ನು ಜಾರಿಗೊಳಿಸಿದ್ದು, ಮಕ್ಕಳಿಗೆ ಬದುಕುವ ಹಕ್ಕು, ಭಾಗವಹಿಸುವ ಹಕ್ಕು, ಅಭಿವೃದ್ದಿ ಹಕ್ಕನ್ನು ನೀಡಲಾಗಿದ್ದರೂ ಸಹ ಅವು ಅನುಷ್ಠಾನಗೊಳ್ಳದೇ ಇಂದಿಗೂ ಸಹ ಭಿಕ್ಷೆ ಬೇಡುವ, ಚಿಂದಿ ಆಯುವ ಮತ್ತು ಶಾಲೆಯಿಂದ ಹೊರಗುಳಿದಿರುವ ಬಾಲ ಕಾರ್ಮಿಕರಾಗಿ ದುಡಿಯುತ್ತಿರುವ ಮಕ್ಕಳ ಸಂಖ್ಯೆ ಕಡಿಮೆ ಆಗಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದರು.
ಮಕ್ಕಳ ಅಭಿವೃದ್ದಿ ಬಗ್ಗೆ ಸರ್ಕಾರ ಗಂಭೀರವಾದ ಚಿಂತನೆ ನಡೆಸುವುದು ಅವಶ್ಯಕತೆ ಇದೆ. 14 ವರ್ಷದವರೆಗೂ ಕಡ್ಡಾಯವಾಗಿ ಶಿಕ್ಷಣ ನೀಡುತ್ತಿದ್ದರೂ ಸಹ ಮಕ್ಕಳನ್ನು ದುಡಿಮೆಗೆ ಬಳಸಿಕೊಳ್ಳಲಾಗುತ್ತಿದೆ. ಪ್ರತಿಭೆ ಯಾರೊಬ್ಬರ ಸೊತ್ತು ಅಲ್ಲ ಎನ್ನುವುದನ್ನು ಅರಿಯಬೇಕಿದೆ. ಮಕ್ಕಳಿಗೆ ಉತ್ತಮ ಪರಿಸರ, ಅವಕಾಶಗಳು ದೊರೆತರೆ, ತಮ್ಮ ಪ್ರತಿಭೆಯನ್ನು ಹೊರಹೊಮ್ಮಿಸಲು ಸಾಧ್ಯ. ಈ ನಿಟ್ಟಿನಲ್ಲಿ ಸರ್ಕಾರಗಳು ಮತ್ತು ಸಂಘ ಸಂಸ್ಥೆಗಳು ಗ್ರಾಮೀಣ ಪ್ರದೇಶದ ಮಕ್ಕಳ ಉನ್ನತಿಗಾಗಿ ಶ್ರಮಿಸಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ರೈತ ಮುಖಂಡ ಮೌಲನಾಯ್ಕ್, ಶಿಕ್ಷಣ ಎಂದರೆ ಹೆಚ್ಚು ಅಂಕಗಳಿಸಬೇಕೆಂಬ ಮನೋಭಾವನೆ ಇದೆ. ಕಡಿಮೆ ಅಂಕ ಗಳಿಸಿದ ಮಕ್ಕಳನ್ನು ಕಡೆಗಣಿಸಲಾಗುತ್ತಿದೆ. ಅಂತಹ ಮನೋಭಾವನೆ ಹೋಗಲಾಡಿಸಬೇಕು. ಕಡಿಮೆ ಅಂಕ ತೆಗೆದಂತ ಮಕ್ಕಳಲ್ಲೂ ಸಹ ಅಗಾಧವಾದ ಪ್ರತಿಭೆ ಇರುತ್ತದೆ. ಸಾಧನೆ ಮಾಡಿರುವುದನ್ನು ನೋಡಬಹುದಾಗಿದೆ. ಅಂಕ ಗಳಿಕೆಯೇ ಮಾತ್ರ ಶಿಕ್ಷಣವಲ್ಲ. ವಿದ್ಯೆಯಿಂದ ಮಕ್ಕಳಿಗೆ ಆತ್ಮವಿಶ್ವಾಸ ಜೊತೆಗೆ ಮಾನವೀಯತೆಯ ಗುಣ ಬೆಳೆಸಬೇಕು ಎಂದು ಹೇಳಿದರು.
ನೆರಳು ಬೀಡಿ ಕಾರ್ಮಿಕ ಯೂನಿಯನ್‍ನ ಅಧ್ಯಕ್ಷೆ ಜಬೀನಾಖಾನಂ ಮಾತನಾಡಿ, ಮಕ್ಕಳಲ್ಲಿ ಜಾತಿ, ಧರ್ಮ, ವರ್ಗಗಳನ್ನು ಮೀರಿ ವೈಚಾರಿಕ ನೆಲೆಗಟ್ಟಿನಲ್ಲಿ ಆಲೋಚಿಸುವ ಕ್ರಮವನ್ನು ಶಿಬಿರಗಳ ಮೂಲಕ ತಿಳಿಸಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ಜಿಲ್ಲಾ ಸಂಚಾಲಕ ಸತೀಶ್ ಅರವಿಂದ್ ವಹಿಸಿದ್ದರು. ಅಭಯ ಸ್ಪಂದನ ಸಂಸ್ಥೆಯ ಸಂಚಾಲಕಿ ಚೈತ್ರ, ಎಪಿಎಂಸಿ ಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ಗಂಗಾಧರ ಸ್ವಾಮಿ, ಕರ್ನಾಟಕ ಜನ ಶಕ್ತಿಯ ಸಂಚಾಲಕ ಖಲೀಲ್,ಆದಿಲ್ ಖಾನ್ ಮತ್ತಿತ್ತರು ಇದ್ದರು. ಸಮಾರಂಭದಲ್ಲಿ ಬೇಸಿಗೆ ಶಿಬಿರದಲ್ಲಿ ಪಾಲ್ಗೊಂಡಿದ್ದ ಮಕ್ಕಳು ಕಿರು ನಾಟಕ ಪ್ರದರ್ಶಿಸಿದರು.