ಬೆಂಗಳೂರು:
ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳುವಾಗ ಕಾರ್ಯಕರ್ತರನ್ನು ವಿಶ್ವಾಸಕ್ಕೆ ಪಡೆದಿಲ್ಲ. ಇದರಿಂದ ಮಂಡ್ಯ ಸೇರಿ ಹಲವೆಡೆ ಅಸಮಾಧಾನ ಹೆಚ್ಚಾಗಿದೆ ಎಂದು ಮಂಡ್ಯ ಪಕ್ಷೇತರ ಅಭ್ಯರ್ಥಿ ಹಾಗೂ ನಟಿ ಸುಮಲತಾ ಅಭಿಪ್ರಾಯ ಪಟ್ಟಿದ್ದಾರೆ.
ಬೆಂಗಳೂರು ಪ್ರೆಸ್ ಕ್ಲಬ್ ಹಾಗೂ ವರದಿಗಾರರ ಕೂಟ ಜಂಟಿಯಾಗಿ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿ, ಹಲವೆಡೆ ಕಾಂಗ್ರೆಸ್ ಕಾರ್ಯಕರ್ತರಿಗೆ ಜೆಡಿಎಸ್ ಬೆಂಬಲಿಸುವ ಮನಸ್ಸಿಲ್ಲ. ನಾನು ಕೈಗೊಂಡ ಭಾವನಾತ್ಮಕ ನಿರ್ಧಾರ ಸರಿಯೋ ಇಲ್ಲವೋ ಗೊತ್ತಾಗಿರಲಿಲ್ಲ. ಆದರೆ ಈಗ ನನ್ನ ನಿರ್ಧಾರ ಸರಿಯಾದದ್ದು ಅನ್ನಿಸುತ್ತಿದೆ. ಅಲ್ಲಿನ ಜನರಿಗೆ ಎಷ್ಟು ಸಹಾಯ ಮಾಡುತ್ತೇನೋ ಗೊತ್ತಿಲ್ಲ. ಆದರೆ ಸಾಕಷ್ಟು ಪ್ರಾಮಾಣಿಕ ಪ್ರಯತ್ನಮಾಡುತ್ತೇನೆ ಎಂದರು.
ನಾನು ಗೆದ್ದರೆ ಏನು ಮಾಡುವೆ?
ಪಕ್ಷೇತರ ಅಭ್ಯರ್ಥಿ ಆಗಿ ಸಾಕಷ್ಟು ಒತ್ತಡ ಎದುರಿಸುತ್ತಿದ್ದೇನೆ. ಇದು ಕಷ್ಟದ ಆಯ್ಕೆ, ಬಯಸಿದ ಆಯ್ಕೆ ಅಲ್ಲ. ಏನು ಮಾಡಬೇಕೆಂದು ಜನರನ್ನು ಕೇಳಿದಾಗ ಕಾಂಗ್ರೆಸ್ ನಿಂದ ನಿಲ್ಲಿ ಇಲ್ಲವಾದರೆ ಪಕ್ಷೇತರವಾಗಿ ನಿಲ್ಲಿ ಎಂದು ಸಲಹೆ ಕೊಟ್ಟಿದ್ದರು. ನಿಂತೆ. ಯಾವುದಾದರೂ ಪಕ್ಷವನ್ನೇ ಸೇರಬಹುದಿತ್ತು, ಕಾಂಗ್ರೆಸ್ ಬೆಂಗಳೂರಿನಲ್ಲಿ ಎಲ್ಲಿಯಾದರೂ ನಿಲ್ಲಿ, ರಾಜ್ಯಸಭೆಗೆ ಕಳಿಸುತ್ತೇವೆ ಎಂದರು. ಜೆಡಿಎಸ್ ಎಮ್ಮೆಲ್ಸಿ ಮಾಡಿ ಸಚಿವರನ್ನಾಗಿಸುವ ಭರವಸೆ ಸಿಕ್ಕಿತ್ತು.
ಅವರು ಮಾಡಬಹುದಲ್ಲಾ. ಆದರೆ ಇದು ಬೇಕಿಲ್ಲ. ಈಗ ಬಿಜೆಪಿ ಬೇಷರತ್ ಬೆಂಬಲ ನೀಡಿದೆ. ಬಿಜೆಪಿಯವರ ಆಶೀರ್ವಾದ ಪಡೆದಿದ್ದೇನೆ. ಗೆದ್ದು ಬಂದರೆ ನಮ್ಮ ಗೆಲ್ಲಿಸುವ ಮತದಾರರು ಹೇಳುವ ಮಾತನ್ನೇ ಅನುಸರಿಸುತ್ತೇನೆ. ಸ್ವತಂತ್ರ ಅಭ್ಯರ್ಥಿಯಾಗಿ ಈಗಲೂ ಸ್ವತಂತ್ರ. ಗೆದ್ದರೆ ಆಯ್ಕೆ ಈಗಲೂ ಸ್ವತಂತ್ರವಾಗಿಯೇ ಇದೆ. ಯಡಿಯೂರಪ್ಪ ಭೇಟಿ ಸಂದರ್ಭ ಪ್ರಚಾರದ ವಿಚಾರ ಪ್ರಸ್ತಾಪಿಸಿಲ್ಲ. ಅವರಿಗೆ ಯಾವುದೇ ಸಲಹೆ ನೀಡಿಲ್ಲ.
ನಾನು ಭೇಟಿ ಮಾಡಿದಾಗ ಯಡಿಯೂರಪ್ಪ ಜತೆ ಪ್ರಚಾರದ ವಿಚಾರ ಮಾತಾಡಿಲ್ಲ ಎಂದರು.15 ನೇ ವರ್ಷದಿಂದ ಚಿತ್ರನಟಿಯಾಗಿ ಮಾಧ್ಯಮದ ಮುಂದೆ ಬಂದಿದ್ದೆ. 10 ನೇ ತರಗತಿ ಮುಗಿಯುತ್ತಿದ್ದಂತೆ ಚಿತ್ರರಂಗಕ್ಕೆ ಬಂದೆ. ಇದರಿಂದ ಓದು ಅಲ್ಲಿಗೆ ನಿಂತಿತು. ನಂತರ ಬದುಕೇ ನನ್ನ ವಿಶ್ವವಿದ್ಯಾಲಯ. ತಂದೆ ಏಳನೇ ವರ್ಷದಲ್ಲಿ ಇದ್ದಾಗ ನಿಧನರಾದರು, ವಿಧವೆ ತಾಯಿ ಐವರು ಮಕ್ಕಳನ್ನು ಕಾಪಾಡುವ ಸ್ಥಿತಿ ಬಂತು. ನನ್ನ ಬದುಕಲ್ಲಿ ಚಿತ್ರ ರಂಗ ಪ್ರವೇಶ ಎಷ್ಟು ಆಕಸ್ಮಿಕವೋ, ರಾಜಕೀಯ ಪ್ರವೇಶ ಕೂಡ ಆಕಸ್ಮಿಕ.
ನಾನು ಇಂತ ಸ್ಥಿತಿಯಲ್ಲಿ ರಾಜಕೀಯ ಪ್ರವೇಶ ನಿರೀಕ್ಷೆ ಇರಲಿಲ್ಲ. ರಾಜಕೀಯ ನನ್ನ ಪಾಲಿಗೆ ಒಂದು ಕಪ್ ಟಿ ಅಂತೆ. ಅಂಬರೀಶ್ ಕೂಡ ರಾಜಕೀಯದಲ್ಲಿ ತುಂಬಾ ಯೋಜಿತರಾಗಿ ಹೋದವರಲ್ಲ. ಹಾಗೆ ಮಾಡಿದ್ದರೆ ರಾಜ್ಯದ ಮುಖ್ಯಮಂತ್ರಿ ಆಗಬಹುದಿತ್ತು. ನನ್ನ ರಾಜಕೀಯ ಪ್ರಯಾಣ ಭಾವನಾತ್ಮಕ ಕಾರಣದಿಂದ ಆರಂಭವಾಗಿದ್ದು, ಹೆಚ್ಚು ಯೋಚಿಸದೇ ಬಂದೆ. ಅಂಬರೀಶ್ ನನ್ನ ರಾಜಕೀಯ ಪ್ರವೇಶಕ್ಕೆ ಪ್ರೇರಣೆ. ಮಂಡ್ಯ ಭಾವನಾತ್ಮಕ ಸಂಬಂಧ ಇದ್ದ ಕಾರಣ ಅದನ್ನೇ ಆಯ್ಕೆ ಮಾಡಿಕೊಂಡೆ ಎಂದರು.
ಮೊದಮೊದಲು ಜನ ಏನು ಬಯಸುತ್ತಾರೆ ಎಂದು ತಿಳಿಯಲಿಲ್ಲ. ನಾನು ಹಂತ ಹಂತವಾಗಿ ನನ್ನ ಅನಿವಾರ್ಯತೆ ಅರಿವಾಯಿತು. ಮಂಡ್ಯದ ಜನ ಭಾವನಾತ್ಮಕ ಸಂಬಂಧ ಉಳ್ಳವರು. ಅಲ್ಲಿನ ಜನ ನಂಬಿಕೆ ಹೊಂದಿದವರು. ಎಲ್ಲಾ ವಿಚಾರವನ್ನೂ ಸಾಮಾನ್ಯವಾಗಿ ಯೋಚಿಸಲ್ಲ. ಭಾವನಾತ್ಮಕವಾಗಿ ಯೋಚಿಸುತ್ತಾರೆ. ಅಲ್ಲಿ ಸಮಸ್ಯೆ ಇದೆ. ಅನಿವಾರ್ಯವಾಗಿ ಕಣಕ್ಕಿಳಿದೆ, ಉಳಿದುಕೊಂಡಿದ್ದೇನೆ. ಕಾಂಗ್ರೆಸ್ ಕಾರ್ಯಕರ್ತರು ಒತ್ತಾಯ ಮಾಡಿ ರಾಜಕೀಯ ಕ್ಕೆ ಕರೆತಂದರು. ಆಗ ಮಂಡ್ಯ ಹೊಸದು.
ಏನು ಮಾಡಬೇಕೆಂದು ತಿಳಿಯಲಿಲ್ಲ. ಆದರೆ ಮುಂದೆ ಅಲ್ಲಿನ ಜನ ಕೈ ಹಿಡಿಯಿತು. ಮಂಡ್ಯದ ಬಗ್ಗೆ ಅಂಬರೀಶ್ ಅನೇಕ ಕನಸು ಕಂಡಿದ್ದರು. ವಸತಿ ಸಚಿವರಾಗಿ ಕೆಲ ಸಾಧನೆ ಮಾಡಿದರು. ಆದರೆ ಎಲ್ಲಾ ಸಾಧ್ಯವಾಗಿಲ್ಲ. ಈಗ ನಾನು ಅದರಲ್ಲಿ ಕೆಲವನ್ನು ಈಡೇರಿಸಲು, ಮಂಡ್ಯದಲ್ಲಿ ನನ್ನನ್ನು ನಂಬಿದ ಜನರಿಗಾಗಿ ಹೋರಾಡುತ್ತೇನೆ. ಎಂಪಿ ಆದರೆ ನನ್ನ ವ್ಯಾಪ್ತಿಯಲ್ಲಿ ಹಾಗೂ ವ್ಯಾಪ್ತಿ ಮೀರಿ ಕೆಲಸ ಮಾಡುತ್ತೇನೆ. ನನಗೆ ಅಲ್ಲಿನ ಜನರಿಗೆ ನ್ಯಾಯ ಕೊಡಿಸಲು ಯತ್ನಿಸುತ್ತೇನೆ ಎಂದರು.
ಅಪಪ್ರಚಾರ ಸಹಜ
ಅಪಪ್ರಚಾರ ಜೆಡಿಎಸ್ ಥೀಮ್ ಆಗಿದೆ. ಬಿಜೆಪಿ ಈಗ ಬೆಂಬಲ ನೀಡಿದೆ. ಇದಕ್ಕೆ ಮುನ್ನವೇ ರಾಜ್ಯ ರೈತ ಸಂಘ ಬೆಂಬಲಿಸಿದೆ. ಗೆದ್ದರೆ ಯಾವ ಪಕ್ಷ ಸೇರುತ್ತೀರಿ ಎಂದು ಈಗ ಹೇಳಲಾಗುತ್ತಿದೆ. ಕಾಂಗ್ರೆಸ್ ಕಾರ್ಯಕರ್ತರು ಬಾವುಟ ಹಿಡಿದು ಬರುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಮೈತ್ರಿ ಧರ್ಮ ಪಾಲನೆಗೆ ಜೆಡಿಎಸ್ ಗೆ ಸ್ಥಾನ ಬಿಟ್ಟುಕೊಟ್ಟಿದೆ
ಆದರೆ ಅಲ್ಲಿನ ಕಾಂಗ್ರೆಸ್ ಕಾರ್ಯಕರ್ತರು ಇದನ್ನು ಒಪ್ಪಿಲ್ಲ. ಇದರಿಂದ ನನ್ನನ್ನು ಬೆಂಬಲಿಸಿ ಬರುತ್ತಿದ್ದಾರೆ. ಅವರನ್ನು ಸ್ವಾಗತಿಸಿದ್ದೇನೆ. ಕಾಂಗ್ರೆಸ್ ಲೀಡ್ ಬಂದಲ್ಲಿ ಜೆಡಿಎಸ್ ನವರು ಕೆಲಸ ಮಾಡಲ್ವಂತೆ. ಇಂತ ರಾಜಕೀಯ ಅಲ್ಲಿ ನಡೆಯುತ್ತಿದೆ. ಅಭಿವೃದ್ಧಿ ಆಗಿಲ್ಲ ಅಂದರೆ ಸರಿ, ಆದರೆ ಸೇಡಿನ ರಾಜಕಾರಣಕ್ಕೆ ಕೆಲಸ ಮಾಡದಿರುವುದು ಅನ್ಯಾಯ ಎಂದರು.
ಚಿರಂಜೀವಿ, ರಜನಿಕಾಂತ್ ಬರುತ್ತಾರೆ ಎಂದು ನಾವು ಎಲ್ಲೂ ಹೇಳಿಲ್ಲ, ಬಯಸಿಲ್ಲ. ಮಂಡ್ಯದ ಜನ ಸ್ಟಾರ್ ಗಳನ್ನು ಬಯಸಲ್ಲ. ದರ್ಶನ್, ಯಶ್ ಕುಟುಂಬ ಸದಸ್ಯರಾಗಿ ಬರ್ತಾರೆ. ನನ್ನ ಮಗ ಅಭಿಷೇಕ್ ತರಹ ಪ್ರಚಾರಕ್ಕೆ ಬರುತ್ತಾರೆ. ನಟರನ್ನು ಬಯಸಲ್ಲ, ಕೆಲಸ ಬಯಸುತ್ತಾರೆ. ಶಿವರಾಮೇಗೌಡರ ಮಾತಿನ ಬಗ್ಗೆ ಏನೂ ಹೇಳಲ್ಲ. ಪಕ್ಷವೇ ಅವರನ್ನು ನಿರ್ಲಕ್ಷಿಸಿದೆ ಎಂಬ ಬೇಸರ ಇರಬಹುದು. ಅವರ ಮಾತಿಗೆ ಹೆಚ್ಚು ಬೆಲೆ ಕೊಡಲ್ಲ. ಯಾರನ್ನೂ ವಿರೋಧಿಸುವುದು ನನಗೆ ಗೊತ್ತಿಲ್ಲ. ಎಲ್ಲಾ ನಮ್ಮ ಆಪ್ತರಾಗಿಯೇ ಇದ್ದರು.
ಈಗ ಚುನಾವಣೆ ಎದುರಾದಾಗ ಕೆಟ್ಟ ಮಾತಾಡುವುದು ಸರಿಯಲ್ಲ. ಅಂಬರೀಶ್ ಕೂಡ ಪ್ರತಿಪಕ್ಷದವರ ಬಗ್ಗೆ ಕೆಟ್ಟದಾಗಿ ಮಾತನಾಡಿರಲಿಲ್ಲ. ತಾಳ್ಮೆ ಮೀರಿರಲಿಲ್ಲ. ಅನ್ಯಾಯದ ವಿರುದ್ಧ ಹೋರಾಡುವಾಗ ಅವಳಲ್ಲೊಬ್ಬ ಕಾಳಿ ಇರುತ್ತಾರೆ. ತನ್ನ ಮಕ್ಕಳ ವಿಚಾರ ಬಂದಾಗ ಅನಿವಾರ್ಯ ಆಗುತ್ತದೆ ಎಂದು ಹೇಳಿದ್ದು. ಮಂಡ್ಯದಲ್ಲಿ ಜೆಡಿಎಸ್ ನವರು ಯಾವರೀತಿ ಕಾನೂನು ದುರುಪಯೋಗ ಪಡಿಸಿಕೊಂಡಿದ್ದನ್ನು ತಿಳಿಸಿದ್ದೇವೆ. ತನಿಖೆ ಆಗಲಿದೆ.
ನಾನೇ ರಾಜಕೀಯಕ್ಕೆ ಬರಬೇಕೆಂದು ನಿರೀಕ್ಷಿಸಿರಲಿಲ್ಲ. ಮಗ ಅಭಿಷೇಕ್ ಚಿತ್ರ ಮಾಡುತ್ತಿದ್ದಾರೆ. ರಾಜಕೀಯಕ್ಕೆ ಬರುವುದು ದೂರ. ಮಗ ನಮ್ಮ ಬ್ಯಾನರ್ ಅಡಿ ಕೂಡ ಚಿತ್ರ ಮಾಡುತ್ತಿಲ್ಲ. ಮಗನಿಗಾಗಿ ರಾಜಕಾರಣ ಮಾಡುತ್ತಿಲ್ಲ ಎಂದು ಹೇಳಿದರು.ಏನೇನೂ ರಾಜಕೀಯ ಸಾಧನೆ ಮಾಡುವ ಆಶಯ ನನಗಿಲ್ಲ. ಈಗ ಬನ್ನಿ, ಇಲ್ಲವಾದರೆ ಮಂಡ್ಯಕ್ಕೆ ಬರುವುದು ಬೇಡ ಅಂದರು. ನನ್ನಿಂದಾಗಿ ಚಿತ್ರರಂಗಕ್ಕೆ ಸಮಸ್ಯೆ ಆಗಿಲ್ಲ. ಕೈಗಾರಿಕೆಗೆ ನಷ್ಟವಾಗಲ್ಲ ಎಂದರು.
ಸಂವಾದದಲ್ಲಿ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಪ್ರೆಸ್ ಕ್ಲಬ್ ಅಧ್ಯಕ್ಷ ಸದಾಶಿವ ಶೆಣೈ, ಪ್ರಧಾನ ಕಾರ್ಯದರ್ಶಿ ಕಿರಣ್, ವರದಿಗಾರರ ಕೂಟದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








