ಚಿಕ್ಕನಾಯಕನಹಳ್ಳಿ
ಅಂತರ್ಜಲ ವೃದ್ಧಿಸುವ, ನೀರು ಶೇಖರಣೆಯಾಗಲು ಸರ್ಕಾರ ರೂಪಿಸಿರುವ ಕೆರೆ ಹೂಳೆತ್ತುವ ಯೋಜನೆ ತಾಲ್ಲೂಕಿನಲ್ಲಿ ಅಷ್ಟಾಗಿ ಯಶಸ್ಸು ಕಂಡಿಲ್ಲ. ಪಟ್ಟಣದ ಹೊರವಲಯದ ದುರ್ಗದ ಕೆರೆಯಲ್ಲಿ ಸಾಕಷ್ಟು ಹೂಳು ತುಂಬಿಕೊಂಡಿದೆ. ಗಿಡಗಂಟೆಗಳು ಯಥೇಚ್ಛವಾಗಿ ಬೆಳೆದಿದೆ. ಇದರಿಂದ ಮಳೆಯ ನೀರು ಕೆರೆಯಲ್ಲಿ ಶೇಖರಣೆಯಾಗದೆ ವ್ಯರ್ಥವಾಗಿ ಹರಿದು ಹೋಗುತ್ತಿದೆ.
ಭೂಮಿಯ ಅಂತರ್ಜಲ ಹೆಚ್ಚಿಸಲು ಕೆರೆಯ ಹೂಳೆತ್ತುವುದು ಅವಶ್ಯಕವಾಗಿದೆ. ಮಳೆಗಾಲ ಆರಂಭವಾಗುವುದರೊಳಗೆ ಹಳ್ಳಿಗಳ ಕೆರೆಕಟ್ಟೆಗಳಲ್ಲಿ ಹೂಳು ತೆಗೆದು ಅಲ್ಲಿ ನೀರು ಶೇಖರಣೆಯಾಗುವಂತೆ ನೋಡಿಕೊಳ್ಳುವಂತೆ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದೆ. ಆದರೂ ಪಟ್ಟಣದ ಹೊರವಲಯದ ಸಮೀಪದಲ್ಲಿರುವ ಹೊಸಹಳ್ಳಿ ದುರ್ಗದ ಕೆರೆಯ ಕಡೆ ಹೊನ್ನೆಬಾಗಿ ಗ್ರಾಮಪಂಚಾಯಿತಿಯು ತಿರುಗಿಯೂ ನೋಡದೆ ಇರುವುದು ದುರದೃಷ್ಟಕರ ಸಂಗತಿ.
ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಬರಗಾಲಕ್ಕೆ ತುತ್ತಾಗುತ್ತಿರುವ ಪ್ರದೇಶಗಳಿಗೆ ಮಳೆ ನೀರು ಶೇಖರಣೆ ಮಾಡಲು ಕೋಟ್ಯಂತರ ರೂಪಾಯಿಗಳು ಕೆರೆ ಹೂಳೆತ್ತುವ ಕಾರ್ಯಕ್ರಮಕ್ಕೆ ಹಣ ಬಿಡುಗಡೆ ಮಾಡಿದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಯೋಜನೆ ಹಳ್ಳ ಹಿಡಿದಿದೆ. ಈಗಾಗಲೇ ತಾಲ್ಲೂಕಿನಲ್ಲಿ ಸಣ್ಣ ನೀರಾವರಿ ಇಲಾಖೆ ಹಾಗೂ ಜಿ.ಪಂ.ವ್ಯಾಪ್ತಿಯಲ್ಲಿ ಬರುವ ಕೆಲವು ಕೆರೆಗಳಲ್ಲಿ ಹೂಳೆತ್ತುವ ಕಾರ್ಯಕ್ರಮ ಪ್ರಾರಂಭಿಸಿದ್ದರೂ ಇದುವರೆವಿಗೂ ಅನೇಕ ಹೂಳು ತುಂಬಿರುವ ಕೆರೆಗಳು ಅಧಿಕಾರಿಗಳ ಕಣ್ಣಿಗೆ ಬೀಳುವುದಿಲ್ಲ. ಕೇವಲ ರಸ್ತೆ ಪಕ್ಕದಲ್ಲಿರುವ ಕೆರೆಗಳು ಮಾತ್ರ ಅಧಿಕಾರಿಗಳ ಕಣ್ಣಿಗೆ ಕಾಣಿಸುತ್ತಿದ್ದು, ಇದರಿಂದ ಹೂಳೆತ್ತುವ ಕಾಮಗಾರಿ ಕುಂಠಿತವಾಗಿ ಸಾಗುತ್ತಿದೆ ಎಂದು ಪುರಸಭೆಯ ಮಾಜಿ ಅಧ್ಯಕ್ಷ ಎಚ್.ಬಿ.ಪ್ರಕಾಶ್ ಆರೋಪಿಸಿದ್ದಾರೆ.
ಬೇಸಿಗೆ ಕಾಲದಲ್ಲಿ ಕೆರೆಕಟ್ಟೆಗಳು ಒಣಗಿದಾಗ ಕೆರೆಯಲ್ಲಿನ ಹೂಳು ಎತ್ತುವ ಕಾಮಗಾರಿಗಳು ನಡೆದರೆ ಮಳೆ ಬಂದಾಗ ಕೆರೆಯಲ್ಲಿ ಮಳೆ ನೀರನ್ನು ಯಥೇಚ್ಛವಾಗಿ ಸಂಗ್ರಹಿಸಬಹುದು ಎಂದು ಕೆರೆ ಸಂಜೀವಿನಿ ಯೋಜನೆಯನ್ನು ಸರ್ಕಾರ ರೂಪಿಸಿದೆ. ಈ ಯೋಜನೆ ಮೂಲಕ ನೀರಿನ ಸಂಗ್ರಹ ಹೆಚ್ಚಿಸುವ ಕ್ರಮ ಹೊಂದಿದೆ. ಈ ಕೆರೆ ಸಂಜೀವಿನಿ ಯೋಜನೆ 2016ರಲ್ಲಿ ಆರಂಭವಾಗಿತ್ತು. ಕೆರೆ ಅಭಿವೃದ್ಧಿ ಪ್ರಾಧಿಕಾರದ ಮೂಲಕ ಸರ್ಕಾರ ಅಧಿಕಾರಿಗಳಿಗೆ ಸೂಚನೆಯನ್ನೂ ನೀಡಿ ಯೋಜನೆ ಪೂರ್ಣಗೊಳಿಸಲು ಸೂಚಿಸಿತ್ತು. ಅದರಂತೆ ತಾಲ್ಲೂಕಿಗೆ ಕಳೆದ ವರ್ಷ ಬಂದ ಈ ಯೋಜನೆಯು ಇನ್ನೂ ಸಹ ಪೂರ್ಣಗೊಳ್ಳದಿರುವುದು ದುರದೃಷ್ಟಕರ.
ಬಿದ್ದ ಮಳೆಯ ನೀರು ಭೂಮಿಯಲ್ಲಿ ಇಂಗುವ ಮೂಲಕ ಅಂತರ್ಜಲ ಹೆಚ್ಚಿಸಿದರೆ ಮಾತ್ರ ರೈತರು ತಮ್ಮ ತೋಟಗಳನ್ನು ಉಳಿಸಿಕೊಳ್ಳಲು ಸಾಧ್ಯ. ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ ಕೆರೆ ಸಂಜೀವಿನಿ ಯೋಜನೆ ಅಡಿಯಲ್ಲಿ ಗಿಡಗೆಂಟೆ ಬೆಳೆದಿರುವ, ಹೂಳು ತುಂಬಿಕೊಂಡಿರುವ ಕೆರೆಗಳಲ್ಲಿ ಸ್ವಚ್ಛತೆ ಮಾಡಿ ಕೆರೆಯಲ್ಲಿ ನೀರು ತುಂಬುವಂತೆ ಮಾಡುವುದು ಅಧಿಕಾರಿಗಳ ಕೆಲಸ, ಈ ಬಗ್ಗೆ ಎಚ್ಚೆತ್ತುಕೊಂಡು ಅಧಿಕಾರಿಗಳು ಕೆರೆಯ ಹೂಳನ್ನು ತೆಗೆಸಿದರೆ ಮಳೆ ಬಂದಾಗ ಕೆರೆಯಲ್ಲಿ ಮಳೆಯ ನೀರು ಶೇಖರಣೆಯಾಗಿ ಸುತ್ತಮುತ್ತಲಿನ ತೋಟ, ಹೊಲ ಗದ್ದೆಗಳಿಗೆ ಅಂತರ್ಜಲ ವೃದ್ಧಿಸುತ್ತದೆ ಎಂದು ಈ ಭಾಗದ ರೈತರಾದ ಹೆಚ್.ಬಿ.ಪ್ರಕಾಶ್, ಶ್ರೀನಿವಾಸ್ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ