ಮಿಡಿಗೇಶಿ
2014 ರಲ್ಲಿ ನಡೆದ ಆಂಧ್ರ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕ ಗಡಿ ಭಾಗದ, ಸಾಲದ್ದಕ್ಕೆ ಮಧುಗಿರಿ-ಪಾವಗಡ ತಾಲ್ಲೂಕುಗಳ ನಡುವೆ ಇರುವ ಮಡಕಶಿರಾ ವಿಧಾನ ಸಭಾ ಕೇತ್ರದಿಂದ ತೆಲುಗು ದೇಶಂ ಪಕ್ಷದಿಂದ ಸ್ಪರ್ಧಿಸಿದ್ದ ಈರನ್ನ (ಈರಣ್ಣ) ಗೆಲುವು ಸಾಧಿಸಿಸುವ ಮೂಲಕ ಶಾಸಕರಾಗಿ ಆಯ್ಕೆಯಾಗಿದ್ದರು. ಇವರ ಎದುರಾಳಿಯಾಗಿ ವೈಎಸ್‍ಆರ್ ಕಾಂಗ್ರೆಸ್‍ನಿಂದ ಸ್ಪಧಿಸಿದ್ದ ಡಾ.ತಿಪ್ಪೇಸ್ವಾಮಿ ಪರಾಭವಗೊಂಡಿದ್ದರು.
ವಿಶೇಷವೆಂದರೆ ಪರಾಭವಗೊಂಡಿದ್ದ ತಿಪ್ಪೇಸ್ವಾಮಿ, ಗೆದ್ದ ಅಭ್ಯರ್ಥಿ ಈರನ್ನ ವಿರುದ್ದ ಚುನಾವಣಾ ಆಯೋಗಕ್ಕೆ ಆಸ್ತಿ ಘೋಷಣೆಯಲ್ಲಿ ತಪ್ಪು ಮಾಹಿತಿ ನೀಡಿ ಚುನಾವಣಾ ಆಯೋಗದ ದಿಕ್ಕು ತಪ್ಪಿಸಿದ್ದಾರೆಂದು ದೂರು ನೀಡಿದ್ದರು. ಈರನ್ನನ ಪತ್ನಿ ಸರ್ಕಾರಿ ನೌಕರಿಯಲ್ಲಿರುತ್ತಾರೆ.
ಕರ್ನಾಟಕ ರಾಜ್ಯದ ಕೊಡಗು ಜಿಲ್ಲೆಯ ಪೊನ್ನಂ ಪೇಟೆ ಪೊಲೀಸ್ ಠಾಣೆಯಲ್ಲಿ ಆಗಸ್ಟ್ 27 ರ 2002 ರಂದು ಈರನ್ನ ವಿರುದ್ದ ಪ್ರಕರಣವೊಂದು ದಾಖಲಾಗಿತ್ತು. 2013 ರಲ್ಲಿ ಮಡಕಶಿರಾ ತಾಲ್ಲೂಕಿನ ಅಮರಾಪುರಂ ಮಂಡಲ್‍ನ ಶಿಕ್ಷಣ ಸಂಸ್ಥೆಯ ಮಹಿಳಾ ಪ್ರಿನ್ಸಿಪಾಲರಿಗೆ ಹಣದ ವಿಷಯದಲ್ಲಿ ವಂಚಿಸಿರುವ ಬಗ್ಗೆ ಅಮರಾಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಚುನಾವಣಾ ಸಮಯದಲ್ಲಿ ಈರನ್ನನ ಹೆಂಡತಿ ಶಿವಮ್ಮ ಕರ್ನಾಟಕ ರಾಜ್ಯದಲ್ಲಿ ಅಂಗನವಾಡಿ ಕಾರ್ಯಕರ್ತೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು ಎಂಬುದಾಗಿ ತಿಪ್ಪೆಸ್ವಾಮಿ ದೂರಿದ್ದು, ಸಂಬಂಧಪಟ್ಟ ದಾಖಲಾತಿಗಳನ್ನು ಸಲ್ಲಿಸಿದ್ದರು. ಈ ಮೇಲ್ಕಂಡ ಎಲ್ಲಾ ಪ್ರಕರಣಗಳ ಬಗ್ಗೆ ಕಳೆದ ನಾಲ್ಕು ವರ್ಷಗಳಿಂದ ಹೈದರಾಬಾದ್ ಹೈಕೋರ್ಟ್‍ನಲ್ಲಿ ವಾದ-ವಿವಾದಗಳು ನಡೆದು ಕೊನೆಗೆ 27 ರ ನವೆಂಬರ್ 2018 ರ ಮಂಗಳವಾರದಂದು ಹೈದ್ರಾಬಾದ್ ಹೈಕೋರ್ಟ್ ಈರನ್ನನ ಶಾಸಕತ್ವವನ್ನು ರದ್ದುಗೊಳಿಸಿದೆ. ಅಷ್ಟೇ ಅಲ್ಲದೆ ಈರನ್ನನ ಎದುರು ಪರಾಭವಗೊಂಡಿದ್ದ ಡಾ. ತಿಪ್ಪೇಸ್ವಾಮಿರವರನ್ನು ಮಡಕಶಿರಾ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಕರ್ತವ್ಯ ನಿರ್ವಹಿಸುವಂತೆ ಮಹತ್ವದ ಐತಿಹಾಸಿಕ ತೀರ್ಪನ್ನು ನೀಡಿದೆ. ಇದು ಚುನಾವಣಾ ಆಯೋಗವನ್ನು ದಾರಿ ತಪ್ಪಿಸಿ ವಂಚಿಸುವ ಪ್ರತಿಯೊಬ್ಬ ರಾಜಕಾರಣಿಗಳಿಗೆ ಎಚ್ಚರಿಕೆಯ ಗಂಟೆಯಾಗಿದೆ ಎಂಬುದು ಪ್ರಜ್ಞಾವಂತ ನಾಗರಿಕರ ಅಭಿಪ್ರಾಯವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
