ಮುದ್ರಿಸಿದ ಕರಪತ್ರಗಳ ಅಫಿಡವಿಟ್ ಸಲ್ಲಿಸದಿದ್ರೆ ಪ್ರಿಂಟಿಂಗ್‍ಪ್ರೆಸ್ ವಶ: ಡಿಸಿ ರಾಮ್ ಪ್ರಸಾತ್

0
23

ಬಳ್ಳಾರಿ

     ಈಗಾಗಲೇ ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಈಗಾಗಲೇ ನೀತಿ ಸಂಹಿತೆ ಜಾರಿಗೆ ಬಂದಿದ್ದು, ಪ್ರಿಂಟಿಂಗ್‍ಪ್ರೆಸ್‍ದಾರರು ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಕರಪತ್ರಗಳನ್ನು ಮುದ್ರಿಸಿಕೊಡುತ್ತಿರುವುದಕ್ಕೆ ಅಫಿಡವಿಟ್‍ಗಳನ್ನು ಕಡ್ಡಾಯವಾಗಿ ಜಿಲ್ಲಾಡಳಿತಕ್ಕೆ ಸಲ್ಲಿಸಬೇಕು. ಒಂದು ವೇಳೆ ಅಫಿಡವಿಟ್ ಸಲ್ಲಿಸದ ಪ್ರಿಂಟಿಂಗ್ ಪ್ರೆಸ್‍ಗಳಿಗೆ ಬೀಗ ಹಾಕಿ ವಶಕ್ಕೆ ಪಡೆದುಕೊಳ್ಳಲಾಗುವುದು ಮತ್ತು ನೀತಿ ಸಂಹಿತೆ ಉಲ್ಲಂಘನೆ ಅಡಿ ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಎಚ್ಚರಿಕೆ ನೀಡಿದ್ದಾರೆ.

      ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲೆಯ ಪ್ರಿಂಟಿಂಗ್ ಪ್ರೆಸ್ ವ್ಯವಸ್ಥಾಪಕರು ಮತ್ತು ಮಾಲೀಕರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

       ಕರಪತ್ರಗಳು,ಭಿತ್ತಿಪತ್ರಗಳನ್ನು ಮುದ್ರಿಸಿದ ಸಂದರ್ಭದಲ್ಲಿ ನಿಗದಿಪಡಿಸಿದ ನಮೂನೆಯಲ್ಲಿ ಅಫಿಡವಿಟ್‍ನ್ನು ಅಭ್ಯರ್ಥಿಗಳಿಂದ ಹಾಗೂ ಅವರ ಎರಡು ಸಾಕ್ಷಿಗಳೊಂದಿಗೆ ಭರ್ತಿ ಮಾಡಿಕೊಳ್ಳಬೇಕು. ತಾವು ಕೂಡ ಒಂದು ನಿಗದಿಪಡಿಸಿದ ಅರ್ಜಿ ಭರ್ತಿ ಮಾಡಬೇಕು. ಅವೆರಡು ಅರ್ಜಿಗಳು ಮತ್ತು ಮುದ್ರಿಸಿದ ಕರಪತ್ರಗಳ ಬಿಲ್‍ನೊಂದಿಗೆ ಆಯಾ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳಿಗೆ ಸಲ್ಲಿಸುವುದರ ಜತೆಗೆ ಕಡ್ಡಾಯವಾಗಿ ಜಿಲ್ಲಾಧಿಕಾರಿಗಳಿಗೂ ಸಲ್ಲಿಸಬೇಕು. ಒಂದು ವೇಳೆ 48ಗಂಟೆಯೊಳಗೆ ಸಲ್ಲಿಸದೆ ಕರಪತ್ರಗಳು ಮುದ್ರಿಸಿ ವಿತರಿಸಿದ್ದು ಕಂಡುಬಂದಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

       ಚುನಾವಣಾ ನೀತಿ ಸಂಹಿತೆ ಜಾರಿಯಿರುವ ಹೊತ್ತಿನಲ್ಲಿ ಯಾವುದೇ ಕಾರಣಕ್ಕೂ ನೀತಿ ಸಂಹಿತೆ ಉಲ್ಲಂಘಿಸುವ ಕೆಲಸ ಮಾಡದಂತೆ ಸೂಚಿಸಿದ ಜಿಲ್ಲಾ ಚುನಾವಣಾಧಿಕಾರಿ ಡಾ.ರಾಮ್ ಪ್ರಸಾತ್ ಅವರು, ಉಲ್ಲಂಘಿಸಿದ್ರೆ ಪ್ರಿಂಟಿಂಗ್ ಪ್ರೆಸ್ ವಶಪಡಿಸಿಕೊಳ್ಳುವುದರ ಜತೆಗೆ ಪ್ರಜಾಪ್ರತಿನಿಧ್ಯ ಕಾಯ್ದೆ 1951ರ 127ಎ 4ರ ಅನ್ವಯ ಪ್ರಕರಣ 6 ತಿಂಗಳ ಕಾರಾಗೃಹ ವಾಸ ಮತ್ತು 2 ಸಾವಿರ ದಂಡ ವಿಧಿಸಲಾಗುವುದು ಎಂದು ಅವರು ಹೇಳಿದರು.

      ಚುನಾವಣಾ ನೀತಿ ಸಂಹಿತೆ ಪ್ರಾರಂಭವಾದಾಗಿನಿಂದ ಇದುವರೆಗೆ ಮುದ್ರಿಸಿದ ಕರಪತ್ರಗಳ ವಿವರವನ್ನು ಸೂಕ್ತ ಅಫಿಡವಿಟ್‍ನೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸುವಂತೆ ಸೂಚನೆ ನೀಡಿದ ಅವರು ನ.1ರ ನಂತರ ಯಾವುದೇ ಕಾರಣಕ್ಕೂ ಕರಪತ್ರಗಳನ್ನು ಮುದ್ರಿಸಿಕೊಡದಿರಿ,ಮಾಹಿತಿ ಮರೆಮಾಚಿ ಮುದ್ರಿಸಿಕೊಟ್ಟರೇ ಪ್ರಕರಣ ದಾಖಲಿಸಲಾಗುವುದು ಎಂದು ಅವರು ಹೇಳಿದರು.
70ಲಕ್ಷ ರೂ.ಗಳಿಂತ ಹೆಚ್ಚು ಹಣ ಅಭ್ಯರ್ಥಿಗಳು ಖರ್ಚು ಮಾಡಿದರೇ ಅನರ್ಹರಾಗುತ್ತಾರೆ ಎಂದು ಹೇಳಿದ ಅವರು ತಾವು ಮುದ್ರಿಸಿದ ನಂತರ ಅದರ ವಿವರಗಳನ್ನು ಅಫಿಡವಿಟ್‍ನೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿಗೆ ಖುದ್ದಾಗಿ ಬಂದು ಸಲ್ಲಿಸಿ ಅಥವಾ ರಿಜಿಸ್ಟರ್ ಪೋಸ್ಟ್ ಆದರೂ ಮಾಡಿ ಎಂದರು.ಮುದ್ರಣಕಾರರು ಸಭೆಯಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

     ಈ ಸಂದರ್ಭದಲ್ಲಿ ಎಂಸಿಎಂಸಿ ನೋಡಲ್ ಅಧಿಕಾರಿ ಬಿ.ಕೆ.ರಾಮಲಿಂಗಪ್ಪ, ವೆಚ್ಚ ನೋಡಲ್ ಅಧಿಕಾರಿ ಚನ್ನಪ್ಪ, ಚುನಾವಣಾ ತಹಸೀಲ್ದಾರ್ ಹಲೀಮಾ, ಎಂಸಿಎಂಸಿ ಅಧಿಕಾರಿಗಳಾದ ಕಾಳಪ್ಪ, ರವಿ ರಾಠೋಡ ಸೇರಿದಂತೆ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಮುದ್ರಣಕಾರರು ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

LEAVE A REPLY

Please enter your comment!
Please enter your name here