ನಗರಸಭೆ ಅಧಿಕಾರಿಗಳಿಗೆ ತಿಪ್ಪಾರೆಡ್ಡಿ ಖಡಕ್ ಎಚ್ಚರಿಕೆ

ಚಿತ್ರದುರ್ಗ;

         ನಗರದ ಅಭಿವೃದ್ದಿಯಾಗಲೇಬೇಕು. ಕೋಟಿ ಕೋಟಿ ಅನುದಾನ ಇದ್ದರೂ ಕಾಮಗಾರಿ ಸಕಾಲದಲ್ಲಿ ಪೂರ್ಣಗೊಳ್ಳುತ್ತಿಲ್ಲ. ಅಭಿವೃದ್ದಿ ವಿಚಾರದಲ್ಲಿ ನಿರಾಸಕ್ತಿ ತೋರಿದರೆ ಯಾವ ಕಾರಣಕ್ಕೂ ಸಹಿಸುವುದಿಲ್ಲವೆಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಅವರು ನಗರಸಭೆಯ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

        ನಗರಸಭೆಯ ಕಚೇರಿಯಲ್ಲಿ ಮಂಗಳವಾರ ನಡೆದ ಅಮೃತ್ ಯೋಜನೆ, ನಗರೋತ್ಥಾನ ಹಾಗೂ ಇತರೆ ಯೋಜನೆಯಡಿ ಕಾಮಗಾರಿಗಳ ಪ್ರಗತಿ ಪರಿಶೀಲನೆಯಲ್ಲಿ ಮಾತನಾಡಿದ ಶಾಸಕ ತಿಪ್ಪಾರೆಡ್ಡಿ ಗುಣಮಟ್ಟದ ವಿಚಾರದಲ್ಲಿ ರಾಜಿ ಇಲ್ಲ. ಕಾಮಗಾರಿ ನಿಗದಿತ ಅವಧಿಯೊಳಗೆ ಪೂರ್ಣಗೊಳ್ಳಬೇಕು. ಕೆಲಸ ಮಾಡದ ಇಂಜಿನಿಯರ್ಸ್ ಪಟ್ಟಿ ನೀಡಿದರೆ ಅಂತವರನ್ನು ಇಲ್ಲಿಂದ ಎತ್ತಂಗಡಿ ಮಾಡಿಸುವುದಾಗಿ ಹೇಳಿದರು

        ರಸ್ತೆ ಅಗಲೀಕರಣ:ರಸ್ತೆ ಅಗಲೀಕರಣಕ್ಕೆ 25 ಕೋಟಿ ಬಿಡುಗಡೆಯಾಗಿದೆ. ಇದರಲ್ಲಿ ಚಳ್ಳಕೆರೆ ಗೇಟ್‍ನಿಂದ ಪ್ರವಾಸಿಮಂದಿರವರೆಗೆ 19 ಕೋಟಿಗೆ ಈಗಾಗಲೇ ಸಿದ್ದತೆ ಮಾಡಿಕೊಳ್ಳಲಾಗಿದೆ. ಪ್ರವಾಸಿಮಂದಿರದಿಂದ ಗಾಂಧಿವೃತ್ತದವರೆಗೂ ರಸ್ತೆ ಅಗಲೀಕರಣವಾಗಬೇಕು. ಕಟ್ಟಡಗಳನ್ನು ತೆರವುಗೊಳಿಸುವ ಜವಾಬ್ದಾರಿ ನನ್ನದು. ಕಾಮಗಾರಿ ಶೀಘ್ರದಲ್ಲಿ ಆಗಬೇಕು ಎಂದು ತಿಪ್ಪಾರೆಡ್ಡಿ ಹೇಳಿದರು.

       4 ಕೋಟಿ ರೂಪಾಯಿ ಅನುದಾನ ಇದೆ. ಈ ಕಾಮಗಾರಿಗೆ ಅಂದಾಜು 6 ಕೋಟಿ ರೂಪಾಯಿ ಬೇಕಾಗಬಹುದು ಎಂದು ಅಧಿಕಾರಿಗಳು ಹೇಳಿದಾಗ ಶಾಸಕರ ಅನುದಾನದಲ್ಲಿ 1 ಕೋಟಿ ಕೊಡುತ್ತೇನೆ. ಸಂಸದರ ನಿಧಿಯಲ್ಲಿಯೂ ಅನುದಾನ ಪಡೆಯುವಂತೆ ಸಲಹೆ ನೀಡಿದರಲ್ಲದೆ ತಾವು ಸಹ ಸಂಸದರಲ್ಲಿ ಮನವಿ ಮಾಡಲಾಗುವುದು.

        ಆದರೆ ಕಾಮಗಾರಿ ಶೀಘ್ರದಲ್ಲಿ ಆರಂಭವಾಗಬೇಕು. ರಸ್ತೆ ಅಗಲೀಕರಣ ಮಾಡಿದ ಮೇಲೆ ಅತ್ಯುಧನಿಕ ವಿದ್ಯುತ್ ದೀಪಗಳನ್ನು ಅಳವಡಿಸಬೇಕು. ಕಟ್ಟಡಗಳ ತೆರವುಗೊಳಿಸುವುದು ಕಷ್ಟವಾದರು ಅದರ ಹೊಣೆ ನಾನೇ ಹೊರುತ್ತೇನೆ. ಆದರೆ ಕಾಮಗಾರಿ ಗುಣಮಟ್ಟದಾಗಿರಬೇಕು ಎಂದಾಗ ಪೌರಾಯುಕ್ತ ಚಂದ್ರಪ್ಪ ನಗರಸಭೆಯಿಂದಲೂ ಅನುದಾನ ನೀಡುವುದಾಗಿ ಭರವಸೆ ನೀಡಿದರು.

       ಅಧಿಕಾರಿಗಳ ತರಾಟೆ: ಒಳಚರಂಡಿ ಕಾಮಗಾರಿಗೆ ರಸ್ತೆಗಳನ್ನು ಅಗೆದ ಮೇಲೆ ಸರಿ ಮಾಡಿಸಿಲ್ಲ. ವಿಧಾನಸಭೆ ಚುನಾವಣೆಯಲ್ಲಿ ಹಾಳಾದ ರಸ್ತೆಯೇ ವಿರೋಧಿಗಳಿಗೆ ಪ್ರಮುಖ ವಿಷಯವಾಗಿತ್ತು. ಅನುದಾನ ಇದ್ದರೂ ಜನರಿಂದ ಬೈಗಳ ತಪ್ಪಿಲ್ಲ. ಇದೇ ರೀತಿ ಮಂದಗತಿಯಲ್ಲಿ ಕಾಮಗಾರಿ ಮಾಡಿದರೆ ಇನ್ನು ಹತ್ತು ವರ್ಷ ಜನರಿಂದ ಬೈಯಿಸಿಕೊಳ್ಳಬೇಕಾಗುತ್ತದೆ. ಮೊದಲು ಹಾಳಾಗಿರುವ ರಸ್ತೆಗಳನ್ನು ಸರಿಪಡಿಸಿ ನಂತರ ಹೊಸ ರಸ್ತೆಗಳ ಕಾಮಗಾರಿ ಕೈಗೆತ್ತಿಕೊಳ್ಳಬೇಕು ಎಂದು ಸೂಚನೆ ನೀಡಿದರು.

         ಪರಿಸರವಾದಿ: ನಾನು ಪರಿಸರವಾದಿ. ಸೈನ್ಸ್ ಮತ್ತು ಆಟ್ರ್ಸ್ ಕಾಲೇಜು ಮಧ್ಯ ಭಾಗದ ರಸ್ತೆ ಅಗಲೀಕರಣ ಮಾಡುವಾಗ 45ಕ್ಕೂ ಹೆಚ್ಚು ಮರಗಳನ್ನು ತೆರವುಗೊಳಿಸಲಾಗುತ್ತಿದೆ. ಮರ ಕಡಿಯದೆ ರಸ್ತೆ ನಿರ್ಮಾಣ ಮಾಡಲು ಸಾಧ್ಯವಿಲ್ಲವೇ ಎಂದಾಗ ಅಧಿಕಾಕಾರಿಗಳು ಮರಗಳನ್ನು ತೆಗೆಯಬೇಕು ಎಂದರು. ಮರಗಳನ್ನು ತೆಗಿಯಿರಿ ಬೇರೆ ಕಡೆ ಒಂದು ಸಾವಿರ ಸಸಿ ನೆಟ್ಟು ಪೋಷಣೆ ಮಾಡುವಂತೆ ಶಾಸಕರು ಸಲಹೆ ನೀಡಿದರು.

        ಕಜ್ಜಿ ರಸ್ತೆ: ಗಾಯಿತ್ರಿಕಲ್ಯಾಣಮಂಟಪದ ಕೆಳಗಿನ ಸಾಯಿಬಾಬಾ ದೇವಸ್ಥಾನದ ಮುಂಭಾಗ ಒಳಚರಂಡಿಗಾಗಿ ಅಗೆದ ರಸ್ತೆಯನ್ನು ಮುಚ್ಚಲಾಗುತ್ತಿದೆ. ಅದನ್ನು ನೋಡಿದರೆ ಕಜ್ಜಿ ಅಂತೆ ಕಾಣಿಸುತ್ತದೆ. ಕಾಮಗಾರಿ ಮಾಡಿದರೆ ಸರಿಯಾಗಿ ಮಾಡಬೇಕು. ಈ ಕಾಮಗಾರಿ ನಿಲ್ಲಿಸಿ ನೇರವಾಗಿ ಮುಚ್ಚುವಂತೆ ಹೇಳಿದರಲ್ಲದೆ ಅನೇಕ ಕಡೆಗಳಲ್ಲಿ ಸಿಮೆಂಟ್ ರಸ್ತೆ ಅಗೆಯಲಾಗಿದೆ. ಇದನ್ನು ನೋಡಿಕೊಳ್ಳುವ ಜವಾಬ್ದಾರಿ ಹೊತ್ತವರು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

       ಏರಿಯಾ ಗೊತ್ತಿಲ್ಲ ಇಂಜಿನಿಯರ್ಸ್ ವರ್ಗಾವಣೆ: ಶಾಸಕರು ಇಂಜಿನಿಯರೊಬ್ಬರಿಗೆ ಏರಿಯಾ ವ್ಯಾಪ್ತಿ ಕೇಳಿದಾಗ ಹೇಳಲು ತಡವರಿಸಿದರು. ಆಗ ಏನ್ರಿ ಇದು ಏರಿಯಾ ಗೊತ್ತಿಲ್ಲದ ಇಂಜಿನಿಯರ್ ಇಟ್ಟುಕೊಂಡು ಏನು ಮಾಡುವುದು ಎಂದು ಹೇಳಿದಾಗ ಪೌರಾಯುಕ್ತರು ಇಂಜಿನಿಯರ್‍ಗಳು ಬೇರೆ ಊರಿಗೆ ಹೋಗಲು ವರ್ಗಾವಣೆ ಆರ್ಡರ್ ಕೈಯಲ್ಲಿ ಹಿಡಿದುಕೊಂಡು ಕೆಲಸ ಮಾಡುತ್ತಾರೆ. ಕೇಳಿದರೆ ಬೇರೆ ಜಿಲ್ಲೆಗೆ ಹೋಗುತ್ತಾರೆ ಎಂದು ಸಭೆಯ ಗಮನಕ್ಕೆ ತಂದರು. ಆಗ ಶಾಸಕರು ಕಾಟಾಚಾರಕ್ಕೆ ಕೆಲಸ ಮಾಡುವ ಇಂಜಿನಿಯರ್‍ಗಳು ಇಲ್ಲಿ ಕೆಲಸ ಮಾಡುವುದು ಬೇಡ. ಅಂತವರ ಪಟ್ಟಿ ಮಾಡಿಕೊಡಿ ಸಚಿವರ ಬಳಿಯೇ ನಾನೇ ಹೋಗಿ ವರ್ಗಾವಣೆ ಮಾಡಿಸಿಕೊಂಡು ಬರುವುದಾಗಿ ಹೇಳಿದರು.

         ಗಡುವು: ಒಳಚರಂಡಿ ಕಾವiಗಾರಿ ಪೂರ್ಣಗೊಳಿಸಿ ಮನೆ ಮನೆಯಿಂದ ಸಂಪರ್ಕ ಕೊಡುವ ಕಾರ್ಯ ಆರು ತಿಂಗಳ ಒಳಗೆ ಪೂರ್ಣಗೊಳ್ಳಲಿದೆ. ಕರ್ನಾಟಕ ನೀರು ಮತ್ತು ಪಳಚರಂಡಿ ಮಂಡಳಿ ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಸಿದ್ದ. ಅದರೆ ನಗರೋತ್ಥಾನ ಯೋಜನೆಯಡಿ ಕಾಮಗಾರಿ ಮಂದಗತಿಯಲ್ಲಿ ಸಾಗಿದೆ. ಇದರಿಂದ ಒಳಚರಂಡಿ ಕಾಮಗಾರಿಗೆ ಅಡ್ಡಿಯಾಗಿದೆ ಎಂದು ಮಂಡಳಿ ಕಾರ್ಯಪಾಲಕ ಇಂಜಿನಿಯರ್ ಹನುಮಂತಪ್ಪ ಶಾಸಕರ ಗಮನಕ್ಕೆ ತಂದರು.

        ನಗರೋತ್ಥಾನ ಕಾಮಗಾರಿ ಸರಿಯಾಗಿ ಮಾಡಿಲ್ಲ ಹಾಗೂ ಕಳಪೆಯಾಗಿದೆ. ಯಾವುದೇ ಕಾರಣಕ್ಕೂ ಬಿಲ್ ನೀಡಬಾರದು. ನಿಗಧಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸುತ್ತಿಲ್ಲ. ಇಷ್ಟಬಂದಂತೆ ಕಾಮಗಾರಿ ಮಾಡಲಾಗುತ್ತಿದೆ. ಟಿಪ್ಪು ಶಾದಿಮಹಲ್ ಬಳಿಯ ರಸ್ತೆ ಕಾಮಗಾರಿ ನಿಲ್ಲಿಸುವಂತೆ ಸೂಚನೆ ನೀಡಿದರು ಕಾಮಗಾರಿ ಮುಂದುವರೆಸಲಾಗಿದೆ. ಮುಂದೆ ಯಾವ ರೀತಿ ಕಾಮಗಾರಿ ಮಾಡುತ್ತಿರಾ ನೋಡುತ್ತೇನೆ ಎಂದು ಭಾವುಕರಾಗಿ ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link