ಚಳ್ಳಕೆರೆ
ರಾಷ್ಟ್ರದ ಧೀಮಂತ ರಾಜಕಾರಣಿ ದಿವಂಗತ ಪಂಡಿತ್ ಜವಹರಲಾಲ್ ನೆಹರೂರವರು ಸ್ಥಾಪನೆ ಮಾಡಿದ ಸಹಕಾರ ಕ್ಷೇತ್ರ ಇಂದು ರಾಜ್ಯದಲ್ಲಿ ತನ್ನದೇಯಾದ ಭದ್ರವಾದ ನೆಲೆಯನ್ನು ಹೊಂದಿದೆ. ರಾಜ್ಯದ ಕೋಟಿ ಕೋಟಿ ಸಹಕಾರಿ ಬಂಧುಗಳು ಈ ಕ್ಷೇತ್ರದ ಉನ್ನತ್ತಿಗಾಗಿ ಶ್ರಮಿಸುತ್ತಿದ್ಧಾರೆ. ಇಂತಹ ಸಹಕಾರಿ ಕ್ಷೇತ್ರವನ್ನು ಮತ್ತಷ್ಟು ವಿಶಾಲವಾಗಿ ಕಟ್ಟುವ ಕಾರ್ಯಕ್ಕೆ ಸಹಕಾರಿ ಬಂಧುಗಳು ಕೈಜೋಡಿಸಬೇಕೆಂದು ಜಿಲ್ಲಾ ಸಹಕಾರ ಬ್ಯಾಂಕ್‍ನ ಅಧ್ಯಕ್ಷರಾದ ಮಾಜಿ ಸಚಿವ ಡಿ.ಸುಧಾಕರ ತಿಳಿಸಿದರು.
ಅವರು, ಭಾನುವಾರ ಇಲ್ಲಿನ ಸರ್ಕಾರಿ ನೌಕರರ ಭವನದಲ್ಲಿ 65ನೇ ಅಖಿಲ ಭಾರತ ಸಹಕಾರ ಸಪ್ತಾಹದ 5ನೇ ದಿನದ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಸಹಕಾರಿ ಕ್ಷೇತ್ರ ಜಿಲ್ಲೆಯಲ್ಲಿ ಭದ್ರವಾದ ಸ್ಥಿತಿಯನ್ನು ಹೊಂದಿದೆ. ಜಿಲ್ಲೆಯ ಹಲವಾರು ಪ್ರಾಥಮಿಕ ಸಂಘಟನೆಗಳು ಉತ್ತಮ ಲಾಭದತ್ತ ಮುನ್ನಡೆದಿವೆ. ಜಿಲ್ಲಾ ಸಹಕಾರ ಬ್ಯಾಂಕ್ ವತಿಯಿಂದ ರೈತರಿಗೆ ಬಡ್ಡಿ ರಹಿತ ಸಾಲ ನೀಡಲಾಗುತ್ತಿದೆ. ರೈತರ ಸಾಲವನ್ನು ಸಹ ಸರ್ಕಾರದ ಸೂಚನೆ ಮೇರೆಗೆ ರದ್ದು ಪಡಿಸಲಾಗಿದ್ದು, ಸಹಕಾರ ಸಂಘ ರೈತರ ಮತ್ತು ಸಹಕಾರಿ ಬಂಧುಗಳ ಹಿತರಕ್ಷಣೆಗೆ ಮುಂದಾಗಿದೆ ಎಂದರು.
ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಮಾತನಾಡಿ, ಜಿಲ್ಲೆಯ ಸಹಕಾರಿ ಕ್ಷೇತ್ರವನ್ನು ಅತ್ಯಂತ ಉನ್ನತ್ತ ಮಟ್ಟಕ್ಕೆ ತೆಗೆದುಕೊಂಡು ಹೋಗುವ ನಿಟ್ಟಿನಲ್ಲಿ ಮಾಜಿ ಶಾಸಕ ಡಿ.ಸುಧಾಕರ್ ತುಂಬಾ ಶ್ರಮವಹಿಸಿದ್ದಾರೆ. ಅವರ ನಿರಂತರ ಸೇವೆ ಈ ಕ್ಷೇತ್ರ ಮತ್ತಷ್ಟು ಗಟ್ಟಿಯಾಗಿ ನೆಲೆಯೂರಲು ಕಾರಣವಾಗಿದೆ. ಜಿಲ್ಲೆಯ ಸಾವಿರಾರು ರೈತರಿಗೆ ವಿವಿಧ ರೀತಿಯ ಸೌಲಭ್ಯಗಳನ್ನು ಈ ಕ್ಷೇತ್ರ ಬದಗಿಸಲಾಗುತ್ತಿದೆ. ಪಾರದರ್ಶಕ ಸೇವೆಯಿಂದ ಮಾತ್ರ ಈ ಕ್ಷೇತ್ರ ಉತ್ತಮ ಬೆಳವಣಿಗೆಯನ್ನು ಕಾಣಲು ಸಾಧ್ಯವೆಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಟಿಎಪಿಸಿಎಂಸಿ ಅಧ್ಯಕ್ಷ ಸಿ.ವೀರಭದ್ರಬಾಬು ಮಾತನಾಡಿ, ತಾಲ್ಲೂಕಿನಲ್ಲಿ ಸಹಕಾರಿ ಕ್ಷೇತ್ರಕ್ಕೆ ಸುಮಾರು 75 ವರ್ಷಗಳ ಇತಿಹಾಸವಿದೆ. ಹಲವಾರು ಸಂಘಗಳು ನಿಯಮದ ಅನುಸಾರ ಕಾರ್ಯನಿರ್ವಹಿಸುತ್ತಿವೆ. ತಾಲ್ಲೂಕಿನ ಎಲ್ಲಾ ಪ್ರಾಥಮಿಕ ಸಂಘಗಳಿಗೆ ಮತ್ತಷ್ಟು ಸೌಲಭ್ಯ ನೀಡುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ಸಹಕಾರಿ ಯೂನಿಯನ್ ಅಧ್ಯಕ್ಷ ಜಿಂಕಲ್ ಬಸವರಾಜು, ಉಪಾಧ್ಯಕ್ಷ ಎಂ.ಆರ್.ಮಹೇಶ್ವರಪ್ಪ, ಎಚ್.ಅಂಜಿನಪ್ಪ, ಆರ್.ಮಲ್ಲೇಶಪ್ಪ ಮುಂತಾದವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ನಿರ್ದೇಶಕಿ ಪಿ.ವಿನೋಧಸ್ವಾಮಿ, ಎಸ್.ಕೆ.ಮರಳಿ, ಪಿ.ತಿಪ್ಪೇಸ್ವಾಮಿ, ನಾಗರಾಜಪ್ಪ, ರಾಜಣ್ಣ, ಜಯಪ್ರಕಾಶ್, ಎನ್.ಎ.ಸಿದ್ದಕಿ, ಪರಮೇಶ್ವರಪ್ಪ, ಮಹಮ್ಮದ್ ರಫೀಕ್ ಮುಂತಾದವರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
