ನವದೆಹಲಿ
ತಮಿಳುನಾಡು ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್ ನೇತೃತ್ವದಲ್ಲಿ ಬಿಜೆಪಿಯೇತರ ಪಕ್ಷಗಳ ನಾಯಕರು ದೆಹಲಿಯಲ್ಲಿ ಸೋಮವಾರ ಸಭೆ ನಡೆಸಲಿದ್ದಾರೆ. 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯೇತರ ಪಕ್ಷಗಳ ಮೈತ್ರಿಕೂಟ ರಚನೆಯ ಭಾಗವಾಗಿ ಡಿಎಂಕೆ ನಾಯಕ ಎಂ. ಕೆ. ಸ್ಟಾಲಿನ್ ನೇತೃತ್ವದಲ್ಲಿ ‘ಸಾಮಾಜಿಕ ನ್ಯಾಯ’ ಎಂಬ ಪರಿಕಲ್ಪನೆಯಡಿ ಈ ಸಭೆ ನಡೆಯಲಿದೆ.
ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್, ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಈ ಸಭೆಯಲ್ಲಿ ಪಾಲ್ಗೊಳ್ಳಲಿರುವ ಪ್ರಮುಖ ನಾಯಕರು. ಆನ್‌ಲೈನ್ ಮೂಲಕ ಟಿಎಂಸಿ, ಎಎಪಿ ಮತ್ತು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರರಾವ್ ಪಕ್ಷದ ಪ್ರತಿನಿಧಿಗಳು ಸಹ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಈ ಸಭೆಯ ಅಧ್ಯಕ್ಷತೆ ವಹಿಸಿ ಎಂ. ಕೆ. ಸ್ಟಾಲಿನ್ ಮಾತನಾಡಲಿದ್ದಾರೆ. ಟಿಎಂಸಿ ಸಂಸದ ಧೀರಕ್ ಒಬ್ರಿಯಾನ್, ಎಎಪಿ ಸಂಸದ ಸಂಜಯ್ ಸಿಂಗ್ ಮತ್ತು ಬಿಆರ್‌ಎಸ್ ಸಂಸದ ಡಾ. ಕೇಶವ್ ರಾವ್‌ಗೆ ಈ ಸಭೆಯಲ್ಲಿ ಪಾಲ್ಗೊಳ್ಳುವಂತೆ ಸೂಚನೆ ನೀಡಿದೆ. ಮುಂದಿನ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಡಿಎಂಕೆ ನಡೆಸುತ್ತಿರುವ 2ನೇ ಸಭೆ ಇದಾಗಿದೆ.
ಕೆಲವು ದಿನಗಳ ಹಿಂದೆ ತಮಿಳುನಾಡು ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್ 70ನೇ ಹುಟ್ಟು ಹಬ್ಬದ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ತೇಜಸ್ವಿ ಯಾದವ್, ಜಮ್ಮು ಮತ್ತು ಕಾಶ್ಮೀರದ ಎನ್‌ಸಿಪಿಯ ಫಾರೂಕ್ ಅಬ್ದುಲ್ಲಾ ಮತ್ತು ಇತರ ವಿರೋಧ ಪಕ್ಷಗಳ ನಾಯಕರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
