ಮಧುಗಿರಿ :
ಹಾಸ್ಟ್ಟೆಲ್ ದಾಖಲಾತಿಗಾಗಿ ಕೋವಿಡ್ 19 ಪರೀಕ್ಷೆ ಮಾಡಿಸಲು ವಿದ್ಯಾರ್ಥಿಗಳು ಮಧುಗಿರಿ ಸಾರ್ವಜನಿಕ ಆಸ್ಪತ್ರೆಗೆ ದಿನ ನಿತ್ಯ ಅಲೆದಾಡುತ್ತಿದ್ದಾರೆ.
ತಾಲ್ಲೂಕಿನಲ್ಲಿ ಈಗಾಗಲೆ ವಿದ್ಯಾರ್ಥಿ ನಿಲಯಕ್ಕೆ ಪ್ರವೇಶಾತಿಗಳು ಪ್ರಾರಂಭವಾಗಿವೆ. ಹಾಸ್ಟ್ಟೆಲ್ ಪ್ರವೇಶಕ್ಕೆ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಿಸಬೇಕಾಗಿರುವುದರಿಂದ ವಿದ್ಯಾರ್ಥಿಗಳು ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆ ಮುಂಭಾಗ ಗಂಟೆ ಗಟ್ಟಲೆ ಸರದಿ ಸಾಲಿನಲ್ಲಿ ನಿಂತುಕೊಳ್ಳಬೇಕಾದ ಅನಿರ್ವಾಯತೆ ಎದುರಾಗಿದೆ.
ಮಧುಗಿರಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಪತ್ರಿ ನಿತ್ಯ 80 ಜನರಿಗೆ ಮಾತ್ರ ಕೋವಿಡ್ 19 ಪರೀಕ್ಷಾ ವ್ಯವಸ್ಥೆ ಇದೆ. ಸಾರ್ವಜನಿಕರು ಈ ಪರೀಕ್ಷೆಯಿಂದ ವಂಚಿತರಾಗುತ್ತಿದ್ದಾರೆ. ಪ್ರತಿ ದಿನ ಹಾಸ್ಟ್ಟೆಲ್ ವಿದ್ಯಾರ್ಥಿಗಳು ಹೆಚ್ಚಿನ ಪ್ರಮಾಣದಲ್ಲಿ ಪರೀಕ್ಷೆಗೆ ಬರುತ್ತಿರುವುದರಿಂದ, ನಿಗದಿತ ಸಂಖ್ಯೆಯ ಪರೀಕ್ಷೆ ಮುಗಿದ ನಂತರ ಮತ್ತೆ ನಾಳೆ ಬಾ ಎನ್ನುವಂತಹ ಪರಿಸ್ಥಿತಿ ಎದುರಾಗಿದೆ.
ಹೆಚ್ಚಾಗಿ ತಾಲ್ಲೂಕಿನಲ್ಲಿ ಹಾಸ್ಟ್ಟೆಲ್ ವಿದ್ಯಾರ್ಥಿಗಳಿದ್ದು, ಒಂದೊಂದು ದಿನ ಒಂದೊಂದು ಹಾಸ್ಟ್ಟೆಲ್ ಬಳಿ ಮೊಬೈಲ್ ಟೆಸ್ಟಿಂಗ್ ವ್ಯಾನ್ ಮೂಲಕ ಪರೀಕ್ಷೆ ನಡೆಸಿದರೆ ಒಳಿತು. ಅಲ್ಲದೆ ಈಗ ನಡೆಸುತ್ತಿರುವ ಕೋವಿಡ್ ಪರೀಕ್ಷೆಯ ಫಲಿತಾಂಶಕ್ಕಾಗಿ ಒಂದು ವಾರದಿಂದ ಎರಡು ವಾರಗಳವರೆಗೆ ಕಾಯಬೇಕಾಗಿದೆ ಎಂಬುದು ವಿದ್ಯಾರ್ಥಿಗಳ ಅಳಲಾಗಿದೆ.
ತಾಲ್ಲೂಕಿನಲ್ಲಿ ಮೂರು ಮೊಬೈಲ್ ಚಿಕಿತ್ಸಾ ಕೇಂದ್ರಗಳಿದ್ದು, ಒಂದು ಪಟ್ಟಣದ ಕೋರ್ಟ್ ಬಳಿ, ಇನ್ನೊಂದು ಶಾಲಾ ಕಾಲೇಜುಗಳ ಬಳಿ, ಮತ್ತೊಂದು ತುರ್ತು ಪರಿಸ್ಥಿತಿಗೆಂದು ನಿಗದಿ ಮಾಡಲಾಗಿದೆ. ಈ ಹಿಂದೆ ಆರೋಗ್ಯ ಇಲಾಖೆಯ ಸಿಬ್ಬಂದಿ ಕೋವಿಡ್ ಪರೀಕ್ಷೆಗೆ ಬನ್ನಿ ಬನ್ನಿ ಎಂದು ಅಂಗಲಾಚಿದರೂ ಬಾರದವರು ಇಂದು ಇಷ್ಟೊಂದು ಪ್ರಮಾಣದಲ್ಲಿ ಸಾರ್ವಜನಿಕ ಆಸ್ಪತ್ರೆಯ ಮುಂದೆ ಜಮಾವಣೆ ಆಗುತ್ತಿರುವುದರಿಂದ ಆರೋಗ್ಯಾಧಿಕಾರಿಗಳಿಗೆ ಬಾರಿ ತಲೆ ನೋವು ಸೃಷ್ಟಿಯಾಗಿದೆ.
ಇನ್ನೊಂದು ಕಡೆ ಕ್ಷಣಾರ್ಧ ಫಲಿತಾಂಶದ ಪರೀಕ್ಷೆಯ ಯಂತ್ರಕ್ಕೆ 300 ರೂ. ಮತ್ತೊಂದು ಪರೀಕ್ಷಾ ಪರಿಕರಕ್ಕೆ 16 ರೂ. ವೆಚ್ಚವಾಗುತ್ತಿದ್ದು ತಾಲ್ಲೂಕಿನಲ್ಲಿ 14 ಆರೋಗ್ಯ ಕೇಂದ್ರಗಳಿಗೆ 700 ಪರೀಕ್ಷಾ ಸಾಧನಗಳನ್ನು ನೀಡಲಾಗಿದ್ದು, ಈಗ ಆ ಸಾಧನಗಳ ಕೊರತೆಯು ಎದುರಾಗಿದೆ ಎಂಬುದು ಆರೋಗ್ಯ ಇಲಾಖಾ ಸಿಬ್ಬಂದಿಯ ವಾದವಾಗಿದೆ. ಏನೇ ಆಗಲಿ ಮಧುಗಿರಿಯಲ್ಲಿನ ಕೋವಿಡ್ ಪರೀಕ್ಷೆಯು ಅತಿ ವೃಷ್ಟಿಯೊ ಅಥವಾ ಅನಾವೃಷ್ಟಿಯೊ ಎಂಬಂತೆ ಭಾಸವಾಗುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ