ಬೆಳಗಾವಿ ಮಹಾನಗರ ಪಾಲಿಕೆ: ಉಪಮೇಯ‌ರ್ ಆಗಿ ಕನ್ನಡತಿ ವಾಣಿ ಜೋಶಿ ಆಯ್ಕೆ

ಬೆಳಗಾವಿ:

    ಬೆಳಗಾವಿಯ 23ನೇ ಅವಧಿಯ ಮೇಯರ್ ಆಗಿ ಮಂಗೇಶ ಪವಾರ ಹಾಗೂ ಉಪಮೇಯರ್ ಆಗಿ ಕನ್ನಡತಿ ವಾಣಿ ವಿಲಾಸ ಜೋಶಿ ಪ್ರಚಂಡ ಬಹುಮತದಿಂದ ಆಯ್ಕೆಯಾಗಿದ್ದಾರೆ.

    ತೀವ್ರ ಕುತೂಹಲ ಮೂಡಿಸಿದ್ದ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಚುನಾವಣಾಧಿಕಾರಿ ಕೈ ಎತ್ತಿವ ಮೂಲಕ ಮೇಯರ್ ಹಾಗೂ ಉಪಮೇಯರ್ ಆಯ್ಕೆಗೆ ಅವಕಾಶ ನೀಡಿದ್ದರು. ಮಂಗೇಶ್ ಪರವಾಗಿ 40 ಮತಗಳು ಹಾಗೂ ವಿರುದ್ಧವಾಗಿ 5 ಮತಗಳು ಹಾಗೂ ವಾಣಿ ವಿಲಾಸ ಜೋಶಿ ಪರವಾಗಿ 40 ಮತಗಳು ಹಾಗೂ ವಿರುದ್ಧವಾಗಿ 19ಮತಗಳು ಬಂದಿದ್ದವು. ಮೇಯ‌ರ್ ಸ್ಥಾನ ಸಾಮಾನ್ಯ ಹಾಗೂ ಉಪಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು.

    40 ಸದಸ್ಯರನ್ನು ಹೊಂದಿರುವ ಬಿಜೆಪಿ ಗುಂಪು ಮತ್ತೊಮ್ಮೆ ಪಾಲಿಕೆ ಚುಕ್ಕಾಣಿ ಹಿಡಿದಿದೆ. ಮೇಯ‌ರ್ ಸ್ಥಾನಕ್ಕೆ ಬಿಜೆಪಿಯ ಮಂಗೇಶ ಪವಾರ್, ರಾಜು ಭಾತಖಾಂಡೆ, ಎಂಇಎಸ್ ನ ಬಸವರಾಜ ಮಾರುತಿ ಮೋದಗೇಕರ, ಎಐಎಂಐಎಂನ ಶಾಹಿದಖಾನ್ ಪಠಾಣ ತಲಾ 2 ನಾಮಪತ್ರ ಸಲ್ಲಿಸಿದರು. ಉಪಮೇಯ‌ರ್ ಸ್ಥಾನಕ್ಕೆ ವಾಣಿ ವಿಲಾಸ ಜೋಶಿ, ದೀಪಾಲಿ ಟೊಪ್ಪಗಿ, ಶ್ರೀಮತಿ ಖುರ್ಷಿದ್ ಮುಲ್ಲಾ, ಲಕ್ಷ್ಮೀ ಲೋಕರಿ ತಲಾ 2 ನಾಮಪತ್ರ ಸಲ್ಲಿದರು. ಖುರ್ಷಿದ್ ಮುಲ್ಲಾ ಹಾಗೂ ದೀಪಾಲಿ ಉಮೇದುವಾರಿಕೆ ವಾಪಸ್‌ ಪಡೆದರು.

    ಶಾಸಕ ಅಭಯ ಪಾಟೀಲ, ಸಂಸದ ಜಗದೀಶ್ ಶೆಟ್ಟರ್, ವಿಧಾನ ಪರಿಷತ್ ಸದಸ್ಯ ರವಿಕುಮಾರ, ಮಾಜಿ ಶಾಸಕ ಅನಿಲ ಬೆನಕೆ, ಮಹಾಂತೇಶ ಕವಟಗಿಮಠ, ಡಾ. ಪ್ರಭಾಕರ ಕೋರೆ ಅವರು ಈ ಆಯ್ಕೆಯ ಉಸ್ತುವಾರಿ ವಹಿಸಿದ್ದರು.