ಬೆಂಗಳೂರು:
ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮುಂಗಾರು ಮಳೆ ಆರ್ಭಟಿಸುತ್ತಿದ್ದು, ಹಲವು ಕಡೆ ಅನಾಹುತ ಎಸಗಿದೆ. ಮಳೆ ಸಂಬಂಧಿತ ಅಪಘಾತಗಳಲ್ಲಿ ರಾಜ್ಯದಲ್ಲಿ ಮಂಗಳವಾರ ಒಂದೇ ದಿನ 8 ಮಂದಿ ಮೃತಪಟ್ಟಿದ್ದಾರೆ. ಹಳ್ಳದಲ್ಲಿ ಮುಳುಗಿ, ವಿದ್ಯುತ್ ಶಾಕ್ ಹೊಡೆದು ಹೀಗೆ ನಾನಾ ಕಾರಣಗಳಿಂದ ಸಾವುಗಳು ಆಗಿವೆ. ಹಲವು ಕಡೆ ಮನೆ ಗೋಡೆಗಳು, ರಸ್ತೆ ತಡೆಗೋಡೆಗಳು ಕುಸಿದಿವೆ. ಕೆಲವೆಡೆ ಮನೆ ಹಾಗೂ ತೋಟಗಳಿಗೆ ನೀರು ನುಗ್ಗಿ ಆಸ್ತಿ ಪಾಸ್ತಿ ಹಾನಿಯಾಗಿದೆ.
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ನಾಗನೂರ ಪಿಎ ಗ್ರಾಮದ ಗಣೇಶ್ ಕಾಂಬಳೆ ಎಂಬ 9 ವರ್ಷದ ಬಾಲಕ ಹಾಗೂ ದೀಪಕ್ ಕಾಂಬಳೆ ಎಂಬ 11 ವರ್ಷದ ಬಾಲಕ ಎತ್ತಿನಗಾಡಿಯಲ್ಲಿ ತೆರಳುತ್ತಿದ್ದರು. ನಿರಂತರ ಮಳೆಯಿಂದಾಗಿ ಹಳ್ಳ ತುಂಬಿ ಹರಿಯುತ್ತಿದ್ದು, ಹಳ್ಳದಲ್ಲಿ ದಾರಿ ಕಾಣದೇ ಎತ್ತಿನ ಬಂಡಿ ಮಗುಚಿಬಿದ್ದಿದೆ. ಪರಿಣಾಮವಾಗಿ ಮಕ್ಕಳಿಬ್ಬರು ಮೃತಪಟ್ಟಿದ್ದು, ಒಂದು ಎತ್ತು ಕೂಡ ಸಾವನ್ನಪ್ಪಿದೆ. ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.
ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಕಿರವಾಡಿ ಗ್ರಾಮದಲ್ಲಿ ನಿರಂತರ ಮಳೆಯಿಂದ ಮನೆ ಗೋಡೆ ಕುಸಿದು ಶಾಂತಮ್ಮ ತಳವಾರ ಎಂಬವರು ಮೃತಪಟ್ಟಿದ್ದಾರೆ . ಕಂದಾಯ ಅಧಿಕಾರಿಗಳು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಬ್ಯಾಡಗಿ ತಾಲೂಕಿನ ಶಿಡೇನೂರು ಬಳಿ ಗಾಳಿಯಿಂದ ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದು, ವಿದ್ಯುತ್ ಸ್ಪರ್ಶದಿಂದ ಜಮೀನಿನಲ್ಲಿದ್ದ ರೈತ ಬಾಬುಲಾಲ್ ಬ್ಯಾಡಗಿ ಅಸುನೀಗಿದ್ದಾರೆ. ಹಾನಗಲ್ ತಾಲೂಕಿನ ಕೂಡಲ ಗ್ರಾಮದಲ್ಲಿ ವಿದ್ಯುತ್ ಸ್ಪರ್ಶಿಸಿ ಶಶಾಂಕಗೌಡ ಮುದ್ದಿನಗೌಡ ಎಂಬ ಬಾಲಕ ಇಹಲೋಕ ತ್ಯಜಿಸಿದ್ದಾನೆ. ಪಂಪ್‌ಸೆಟ್ ಮೋಟರ್ ಆನ್ ಮಾಡಲು ಹೋದಾಗ ದುರಂತ ಸಂಭವಿಸಿದೆ.
ದೊಡ್ಡಬಳ್ಳಾಪುರ ತಾಲೂಕಿನ ಕಂಗಳಾಪುರದಲ್ಲಿ ಟ್ರಾನ್ಸ್ಫಾರ್ಮರ್ ರಿಪೇರಿ ಮಾಡುವಾಗ ಕರೆಂಟ್ ಶಾಕ್ ಹೊಡೆದು ರಂಗಪ್ಪ ಎಂಬವರು ಸಾವಿಗೀಡಾಗಿದ್ದಾರೆ. ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಮಾಲ್ದಾರೆ ಗ್ರಾಮದಲ್ಲಿ ಮನೆ ಬಳಿ ಕೆಲಸ ಮಾಡುತ್ತಿದ್ದಾಗ ಮರದ ಕೊಂಬೆ ಬಿದ್ದು ವಿಷ್ಣು ಬೆಳ್ಯಪ್ಪ ಎಂಬವರು ಮೃತಪಟ್ಟಿದ್ದಾರೆ.
ಶಿವನಸಮುದ್ರದಲ್ಲಿ ಕಾವೇರಿ ನದಿಯಲ್ಲಿ ಈಜಲು ಇಳಿದಿದ್ದ ನಾಲ್ವರ ಪೈಕಿ ಓರ್ವ ವಿದ್ಯಾರ್ಥಿ ನಾಪತ್ತೆ ಆಗಿದ್ದು ನೀರಿನಲ್ಲಿ ಕೊಚ್ಚಿ ಹೋಗಿರುವ ಶಂಕೆ ಇದೆ. ಬೆಂಗಳೂರಿನ ಖಾಸಗಿ ಕಾಲೇಜಿನ 7 ವಿದ್ಯಾರ್ಥಿಗಳು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಶಿವನಸಮುದ್ರಕ್ಕೆ ತೆರಳಿದ್ದರು. ಈ ವೇಳೆ ಕಾವೇರಿ ನದಿಯಲ್ಲಿ ಈಜಲು ಇಳಿದು ಪರದಾಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಸ್ಥಳೀಯರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಮೂವರನ್ನು ರಕ್ಷಿಸಿದ್ದಾರೆ. ಪ್ರಫುಲ್ಲಾ, ತುಷಾರಾ, ಪ್ರಮೋದ್ ಎಂಬವರನ್ನು ರಕ್ಷಣೆ ಮಾಡಲಾಗಿದೆ. ನೀರಿನ ಸೆಳೆತಕ್ಕೆ ಸಿಲುಕಿ ನಂದಕುಮಾರ್ ಕೊಚ್ಚಿಹೋಗಿರುವ ಶಂಕೆ ವ್ಯಕ್ತವಾಗಿದೆ.
ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ತಡೋಳಾ ಗ್ರಾಮದಲ್ಲಿ ಸಿಡಿಲು ಬಡಿದು 7 ಕುರಿಗಳು ಮೃತಪಟ್ಟಿವೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಜೀನಿಹಳ್ಳಿ ಗ್ರಾಮದಲ್ಲಿ ಸಿಡಿಲಿಗೆ 80ಕ್ಕೂ ಹೆಚ್ಚು ಕುರಿಗಳು ಬಲಿಯಾಗಿವೆ. ಜೀನಿಹಳ್ಳಿ ಗ್ರಾಮದ ಮಹೇಶಪ್ಪ ಎಂಬವರಿಗೆ ಸೇರಿದ ಕುರಿಗಳು ಮೃತಪಟ್ಟಿದ್ದು, ಪರಿಹಾರ ನೀಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.