ಮಂಗಳೂರು ಬ್ಯಾಂಕ್ ದರೋಡೆ ಪ್ರಕರಣ : ಆರೋಪಿ ಕಾಲಿಗೆ ಗುಂಡೇಟು

ಮಂಗಳೂರು:

   ಕೋಟೆಕಾರ್ ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣದಲ್ಲಿ ಆರೋಪಿಯೊಬ್ಬನಿಗೆ ಮಂಗಳೂರು ಪೊಲೀಸರು ಗುಂಡೇಟಿನ ರುಚಿ ತೋರಿಸಿದ್ದಾರೆ.

   ತಮಿಳುನಾಡಿನಲ್ಲಿ ಬಂಧಿಸಲ್ಪಟ್ಟ ಆರೋಪಿಗಳನ್ನು ಮಂಗಳೂರಿಗೆ ಕರೆತಂದು ಸ್ಥಳ ಮಹಜರು ನಡೆಸುವುದಕ್ಕಾಗಿ ಉಳ್ಳಾಲಕ್ಕೆ ಕರೆದೊಯ್ಯಲಾಗಿತ್ತು. ಈ ವೇಳೆ ಪರಾರಿಯಾಗಲು ಯತ್ನಿಸಿದ ಆರೋಪಿ ಕಣ್ಣನ್ ಮಣಿ (35) ಎಂಬಾತನ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ ಮೂವರು ಪೊಲೀಸರು ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ.

   ದರೋಡೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸ್ ತಂಡವು ಜನವರಿ 20 ರಂದು ತಮಿಳುನಾಡಿನಲ್ಲಿ ಮೂವರು ಆರೋಪಿಗಳನ್ನು ಬಂಧಿಸಿದ್ದು, ಆರೋಪಿಗಳಲ್ಲಿ ಒಬ್ಬರಾದ ಮುಂಬೈನ ಚೆಂಬೂರಿನ ತಿಲಕ್ ನಗರದ ನಿವಾಸಿ ಕಣ್ಣನ್ ಮಣಿ (36) ಅವರನ್ನು ಬಂಧಿಸಿದ ನಂತರ ಮಂಗಳೂರಿಗೆ ಕರೆತಂದು ವಿಚಾರಣೆ ನಡೆಸಲಾಗುತ್ತಿದೆ.

   ಸಂಜೆ 4.20ರ ಸುಮಾರಿಗೆ ಉಳ್ಳಾಲ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಬಾಲಕೃಷ್ಣ ಎಚ್‌ಎನ್ ಅವರ ಸಮ್ಮುಖದಲ್ಲಿ ತಂಡವು ಸ್ಥಳ ಪರಿಶೀಲನೆ ನಡೆಸಿದ್ದು, ಈ ವೇಳೆ ಆರೋಪಿ ಕಣ್ಣನ್ ಮಣಿ ಪರಾರಿಯಾಗಲು ಯತ್ನಿದ್ದಾರೆ. ಸ್ಥಳದಲ್ಲಿ ಸಿಕ್ಕ ಒಡೆದ ಬಿಯರ್ ಬಾಟಲಿಯಿಂದ ಪೊಲೀಸರಾದ ಅಂಜನಪ್ಪ ಮತ್ತು ನಿತಿನ್ ಮೇಲೆ ಹಲ್ಲೆ ನಡೆಸಿದ್ದಾನೆ. ಅಲ್ಲದೆ ತನಿಖಾಧಿಕಾರಿಯನ್ನು ತಳ್ಳಿ ಒಡೆದ ಬಿಯರ್ ಬಾಟಲಿಯಿಂದ ಇರಿಯಲು ಯತ್ನಿಸಿದ್ದಾನೆ. ಈ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿ ಸಿಸಿಬಿ ಇನ್ಸ್‌ಪೆಕ್ಟರ್ ಎಚ್ಚರಿಕೆ ನೀಡಿದ್ದಾರೆ. ಆದರೂ ಬಗ್ಗದ ಆರೋಪಿ ಪೊಲೀಸರ ಮೇಲೆ ಹಲ್ಲೆ ಮುಂದುವರಿಸಿದ್ದಾನೆ.

   ಹೀಗಾಗಿ ಆತ್ಮರಕ್ಷಣೆಗಾಗಿ ಸಿಸಿಬಿ ಇನ್ಸ್ ಪೆಕ್ಟರ್ ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ ಪೊಲೀಸ್ ಸಿಬ್ಬಂದಿಗಳಾದ ಬಾಲಕೃಷ್ಣ, ಅಂಜನಪ್ಪ, ನಿತಿನ್ ಎಂಬುವವರಿಗೆ ಗಾಯಗಳಾಗಿದ್ದು, ಗಾಯಗೊಂಡ ಪೊಲೀಸರು ಹಾಗೂ ಆರೋಪಿಗಳನ್ನು ಮಂಗಳೂರು ಸಮೀಪದ ದೇರಳಕಟ್ಟೆಯಲ್ಲಿರುವ ಆಸ್ಪತ್ರೆಗೆ ರವಾನಿಸಲಾಗಿದೆ.

   ಜನವರಿ 17 ರಂದು ಮಧ್ಯಾಹ್ನ 1 ರಿಂದ 1.20 ರ ನಡುವೆ ದರೋಡೆ ನಡೆದಿತ್ತು. ಆರೋಪಿಗಳು ಬ್ಯಾಂಕ್ ನೌಕರರನ್ನು ಬೆದರಿಸಿ ಸುಮಾರು 4 ಕೋಟಿ ರೂಪಾಯಿ ಮೌಲ್ಯದ ನಗದು ಮತ್ತು ಬೆಲೆಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿದ್ದರು.

 

Recent Articles

spot_img

Related Stories

Share via
Copy link