ಬೆಂಗಳೂರು:
ಶಿವಾಜಿನಗರ ಮೆಟ್ರೋ ನಿಲ್ದಾಣಕ್ಕೆ ‘ಶ್ರೀ ಛತ್ರಪತಿ ಶಿವಾಜಿ ಮಹಾರಾಜ ನಿಲ್ದಾಣ’ ಎಂದು ನಾಮಕರಣ ಮಾಡಬೇಕು ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರ ನೇತೃತ್ವದಲ್ಲಿ ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯಿಂದ ಬಿಎಂಆರ್‌ಸಿಎಲ್ ಎಂಡಿ ಡಾ. ಜೆ. ರವಿಶಂಕರ್ ಅವರಿಗೆ ಮನವಿ ಮಾಡಲಾಗಿದೆ.
ಛತ್ರಪತಿ ಶಿವಾಜಿ ಮಹಾರಾಜರ ಶತಮಾನಗಳ ಇತಿಹಾಸ ಇರುವ ಶಿವಾಜಿ ನಗರದಲ್ಲಿ ಮೆಟ್ರೊ ನಿಲ್ದಾಣಕ್ಕೆ ʼಸೇಂಟ್ ಮೇರಿʼ ಎಂದು ನಾಮಕರಣ ಮಾಡುತ್ತೇವೆ ಎಂಬ ಸಿಎಂ ಸಿದ್ದಾರಮಯ್ಯ ಅವರ ಹೇಳಿಕೆಯನ್ನು ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ. ಒಂದು ಸಮುದಾಯವನ್ನು ಓಲೈಕೆ ಮಾಡಿ, ಈ ಮೂಲಕ ಮತಬ್ಯಾಂಕ್ ರಾಜಕಾರಣಕ್ಕಾಗಿ ಐತಿಹಾಸಿಕ ಶಿವಾಜಿ ನಗರದ ಮೆಟ್ರೊ ನಿಲ್ದಾಣದ ಹೆಸರನ್ನು ಬದಲಾವಣೆ ಮಾಡುವುದು ಶಿವಾಜಿ ಮಹಾರಾಜರಿಗೆ ಮಾತ್ರವಲ್ಲ, ಸಮಸ್ತ ಶಿವಾಜಿ ನಗರದ ನಿವಾಸಿಗಳಿಗೆ ಮಾಡುವ ಅಪಮಾನವಾಗಿದೆ. ಇದರಿಂದ ಸಾಕಷ್ಟು ಸಮಸ್ಯೆಗಳು ನಿರ್ಮಾಣವಾಗುತ್ತದೆ. ಅದಕ್ಕಾಗಿ ಯಾವುದೇ ಕಾರಣಕ್ಕೂ ಶಿವಾಜಿ ನಗರದ ಹೆಸರನ್ನು ಬದಲಾವಣೆ ಮಾಡದೇ, ಅದನ್ನು ‘ಛತ್ರಪತಿ ಶಿವಾಜಿ ಮೆಟ್ರೋ ನಿಲ್ದಾಣ’ ಎಂದು ನಾಮಕರಣ ಮಾಡಬೇಕೆಂದು ಆಗ್ರಹ ಮಾಡುತ್ತೇವೆ ಎಂದು ಸಮಿತಿ ತಿಳಿಸಿದೆ.
ಪತ್ರದಲ್ಲಿ ಶಿವಾಜಿನಗರದ ಐತಿಹಾಸಿಕ ಹಿನ್ನೆಲೆ ಬಗ್ಗೆ ವಿವರಿಸಿರುವ ಸಮಿತಿ, ಕ್ರಿ. ಶ 1630 ರಿಂದ 1645 ಛತ್ರಪತಿ ಶಿವಾಜಿ ಮಹಾರಾಜರು ತಮ್ಮ ಬಾಲ್ಯದ ಜೀವನವನ್ನು ಇಂದಿನ ಶಿವಾಜಿ ನಗರದ ಬೆಂಗಳೂರಿನಲ್ಲೇ ತಮ್ಮ ತಂದೆ ಶಹಜಿಯ ಜತೆಗೆ ಶಿವಾಜಿ ನಗರದ ಭಾಗದಲ್ಲಿ ಕಳೆದಿದ್ದರು. ಅವರ ತಂದೆ ಷಹಾಜಿ ಮಹಾರಾಜರು ಬೆಂಗಳೂರಿನಲ್ಲಿ ಆಡಳಿತ ನಡೆಸಿದ ಸಂದರ್ಭದಲ್ಲಿ, ಆ ಕಾಲದ ಮೈಸೂರು ಆಡಳಿತಗಾರರು ಈ ಪ್ರದೇಶವನ್ನು ಛತ್ರಪತಿ ಶಿವಾಜಿ ಮಹಾರಾಜರಿಗೆ ಗೌರವ ಸೂಚಕವಾಗಿ ʼಶಿವಾಜಿನಗರʼ ಎಂದು ಹೆಸರಿಸಿದ್ದರು ಎಂದು ಹೇಳಿದೆ.
ಸಾಂಸ್ಕೃತಿಕ ಹಾಗೂ ಸಾಮಾಜಿಕ ಮಹತ್ವದ ಬಗ್ಗೆ ಮಾಹಿತಿ ನೀಡುತ್ತಾ, ಛತ್ರಪತಿ ಶಿವಾಜಿ ಮಹಾರಾಜರು ಧೈರ್ಯ, ನ್ಯಾಯ ಮತ್ತು ಸರ್ವಜನಾಂಗೀಯ ಸಮಾನತೆಯ ಪ್ರತೀಕವಾಗಿದ್ದರು. ಅವರ ಜೀವನಚರಿತ್ರೆ ಇಂದಿಗೂ ಲಕ್ಷಾಂತರ ಯುವಕರಿಗೆ ಪ್ರೇರಣೆಯಾಗಿದೆ. ಮೆಟ್ರೋ ನಿಲ್ದಾಣಕ್ಕೆ ಅವರ ಹೆಸರಿಡುವುದರಿಂದ ದೇಶದ ಪರಂಪರೆಗೂ ಗೌರವ ತರುವಂತಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.
ಛತ್ರಪತಿ ಶಿವಾಜಿ ಮಹಾರಾಜರು ಮರಾಠ ಜನಾಂಗಕ್ಕೆ ಮಾತ್ರ ಸೀಮಿತರಾಗಿರದೇ, ಎಲ್ಲಾ ಧರ್ಮ, ಜಾತಿ ಸಮುದಾಯಗಳನ್ನು ಒಗ್ಗೂಡಿಸಿ ʼಹಿಂದವಿ ಸ್ವರಾಜ್ಯವನ್ನು ಸ್ಥಾಪಿಸಿದವರು. ಆದ್ದರಿಂದ ಅವರ ಹೆಸರು ಸಾರ್ವಜನಿಕ ಸಾರಿಗೆ ನಿಲ್ದಾಣಕ್ಕೆ ಅತ್ಯಂತ ಸಮರ್ಪಕವಾದ ಹೆಸರಾಗಿದೆ.
ಶಿವಾಜಿನಗರ ಪ್ರದೇಶದಲ್ಲಿ ಕನ್ನಡ ಸ್ಥಳೀಯರು ಹಾಗೂ ನಗರದ ಜನರಿಗೆ ಶ್ರೀ ಛತ್ರಪತಿ ಶಿವಾಜಿ ವಿಷಯವಾಗಿರುತ್ತದೆ. ಅದರ ಬದಲು ಸೇಂಟ್ ಮೇರಿ ಎಂದು ಗೊಂದಲಗಳು ನಿರ್ಮಾಣವಾಗುತ್ತದೆ. ಮರಾಠ ಸಮುದಾಯದ ವಾಸ್ತವ್ಯ ಹೆಚ್ಚು ಇದೆ. ಮಹಾರಾಜರ ಹೆಸರಿನ ನಿಲ್ದಾಣವು ಹೆಮ್ಮೆಯ ಹೆಸರು ಇಡುವುದು ಪ್ರಯಾಣಿಕರಿಗೆ ಸಾಕಷ್ಟು ಗೊಂದಲಗಳು ನಿರ್ಮಾಣವಾಗುತ್ತವೆ.
ಹೀಗಾಗಿ, ಶಿವಾಜಿನಗರದ ಮೆಟ್ರೋ ನಿಲ್ದಾಣಕ್ಕೆ ಭಾರತದ ಆದರ್ಶ ರಾಜ ʼಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಹೆಸರು ನಾಮಕರಣ ಮಾಡಬೇಕೆಂದು ಸಮಸ್ತ ಹಿಂದೂ ಸಂಘಟನೆಗಳ ಪರವಾಗಿ ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ವತಿಯಿಂದ ಆಗ್ರಹ ಮಾಡುತ್ತೇವೆ. ಸರ್ಕಾರವು ನಮ್ಮ ಬೇಡಿಕೆಯನ್ನು ಪರಿಗಣಿಸಿ, ಒಪ್ಪಿಸುವಂತೆ ನಿಮ್ಮಿಂದ ಬಲವಾದ ಶಿಫಾರಸು ಮಾಡಬೇಕೆಂದು ನಾವು ವಿನಂತಿಸುತ್ತೇವೆ ಎಂದು ಸಮಿತಿ ಹೇಳಿದೆ.
ಮನವಿ ನೀಡುವ ವೇಳೆ ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್, ಹಿಂದೂ ಜನಜಾಗೃತಿ ಸಮಿತಿ ರಾಜ್ಯ ವಕ್ತಾರ ಮೋಹನ ಗೌಡ , ರಾಜ್ಯ ಹಿಂದೂ ಜಾಗರಣ ವೇದಿಕೆ ದಕ್ಷಿಣ ಪ್ರಾಂತದ ಸಂಚಾಲಕ ರಾಜಣ್ಣ ಮತ್ತಿತರರು ಉಪಸ್ಥಿತರಿದ್ದರು.
