ಬೆಂಗಳೂರು
ಸಚಿವ ಸ್ಥಾನಕ್ಕಾಗಿ ಭಾರೀ ಪೈಪೋಟಿ ಆರಂಭವಾಗಿರುವ ಬೆನ್ನಲ್ಲೇ ಇದೀಗ ವಿಧಾನಸಭೆ ಸ್ಪೀಕರ್ ಹುದ್ದೆಗೇರಲು ಯಾರೂ ತಯಾರಿಲ್ಲ. ತಮಗೆ ಸಚಿವ ಸ್ಥಾನವೇ ಬೇಕು ಎಂದು ಹಿರಿಯ ಮುಖಂಡರಾದ ಟಿ.ಬಿ. ಜಯಚಂದ್ರ, ಆರ್.ವಿ.ದೇಶಪಾಂಡೆ, ಎಚ್.ಕೆ ಪಾಟೀಲ್, ಬಿ.ಆರ್ ಪಾಟೀಲ್, ಎನ್.ವೈ ಗೋಪಾಲಕೃಷ್ಣ ಸೇರಿದಂತೆ ಹಲವು ಪ್ರಮುಖರು ಹಿಂದೇಟು ಹಾಕುತ್ತಿದ್ದಾರೆ.
ಸರ್ಕಾರದಲ್ಲಿ ಯಾವುದೇ ಜವಾಬ್ದಾರಿ ನಿರ್ವಹಿಸುತ್ತೇವೆ, ಆದರೆ ಅದೊಂದು ಸ್ಥಾನ ಮಾತ್ರ ಬೇಡ. ನಮಗೆ ಸಚಿವಗಿರಿ ಕೊಡಿ. ಇಲ್ಲಾ ಅಂದರೆ ಶಾಸಕರಾಗಿಯೇ ಇರುತ್ತೇವೆ. ಸ್ಪೀಕರ್ ಸ್ಥಾನ ಮಾತ್ರ ನಮಗೆ ಬೇಡ ಎನ್ನುತ್ತಿದ್ದಾರೆ.
ಇದು ಶಾಸಕಾಂಗದ ಸಂಪೂರ್ಣ ಜವಾಬ್ದಾರಿ ನಿರ್ವಹಿಸುವ, ಕಲಾಪಗಳ ಸುಗಮ ನಿರ್ವಹಣೆ ಮಾಡುವ, ಶಾಸನ ರಚಿಸುವ ಅತ್ಯುನ್ನತ ಸ್ಥಾನ. 224 ಶಾಸಕರ ನಿಯಂತ್ರಣದ ಜವಾಬ್ದಾರಿ ಹೊಂದಿರುವ ಹುದ್ದೆಗೆ ಸಾಕಷ್ಟು ಮಂದಿ ಹಿಂದೇಟು ಹಾಕಿದ್ದಾರೆ.
ಸ್ಪೀಕರ್ ಸ್ಥಾನ ಸ್ವೀಕರಿಸಲು ಶಾಸಕರು ಹಿಂದೇಟು ಹಾಕುತ್ತಿದ್ದು 2004ರಿಂದಲೂ ವಿಧಾನಸಭೆ ಸ್ಪೀಕರ್ ಆದವರು ಬಳಿಕ ನಡೆದ ಚುನಾವಣೆಯಲ್ಲಿ ಸೋಲು ಕಾಣುತ್ತಿದ್ದಾರೆ. ಇದರ ಇತಿಹಾಸವನ್ನು ಗಮನಿಸಬಹುದು- ಕೆ.ಆರ್ ಪೇಟೆ ಕೃಷ್ಣ 2008ರಲ್ಲಿ ಸೋಲುಂಡಿದ್ದಾರೆ. 2013ರಲ್ಲಿ ಸ್ಪೀಕರ್ ಆಗಿದ್ದ ಕಾಗೋಡು ತಿಮ್ಮಪ್ಪ 2018ರಲ್ಲಿ ಸೋತಿದ್ದಾರೆ. ಕಾಗೋಡು ಸಚಿವರಾದ ಬಳಿಕ 2017ರಲ್ಲಿ ಸ್ಪೀಕರ್ ಆದ ಕೋಳಿವಾಡ 2018ರ ಚುನಾವಣೆಯಲ್ಲಿ ಸೋಲು ಕಂಡರು. ಬಳಿಕ ನಡೆದ ಉಪಚುನಾವಣೆಯಲ್ಲೂ ಸೋತರು. 2018ರಲ್ಲಿ ಸ್ಪೀಕರ್ ಆದ ರಮೇಶ್ ಕುಮಾರ್ ನಂತರ ಸೋತರು.
2019ರಲ್ಲಿ ಸ್ಪೀಕರ್ ಆದ ವಿಶ್ವೇಶ್ವರ ಹೆಗಡೆ ಕಾಗೇರಿ ಈ ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ! ಈ ಭಯ ಹಿರಿಯ ಶಾಸಕರನ್ನು ಆವರಿಸಿಕೊಂಡಿದೆ. ಹೀಗಾಗಿ, ನಮಗೆ ಸಚಿವ ಸ್ಥಾನವೇ ಬೇಕು, ಸ್ಪೀಕರ್ ಸ್ಥಾನ ಬೇಡ ಎಂದು ಹಿರಿಯ ಶಾಸಕರು ಪಟ್ಟು ಹಿಡಿದಿದ್ದಾರೆ. ಟಿ.ಬಿ ಜಯಚಂದ್ರ, ಎಚ್.ಕೆ ಪಾಟೀಲ್, ಬಿ.ಆರ್ ಪಾಟೀಲ್, ಎನ್.ವೈ ಗೋಪಾಲಕೃಷ್ಣ ಅವರನ್ನು ಸ್ಪೀಕರ್ ಮಾಡುವ ಸಾಧ್ಯತೆಗಳಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ