ಬೆಂಗಳೂರು
ಮುಡಾ ಹಗರಣದ ಕುಣಿಕೆ ಸಿಎಂ ಸಿದ್ದರಾಮಯ್ಯಗೆ ಬಿಗಿಯಾಗುತ್ತಿರುವ ಬೆನ್ನಲ್ಲೇ ಅವರ ಪತ್ನಿ ಪಾರ್ವತಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಪಡೆದ ಸೈಟುಗಳನ್ನು ವಾಪಸ್ ನೀಡುವ ನಿರ್ಧಾರ ಕೈಗೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಪ್ರತಿಪಕ್ಷ ನಾಯಕ ಆರ್ ಅಶೋಕ್, ಸಂವಿಧಾನ ರಕ್ಷಿಸಲು ದಿಟ್ಟ ನಿರ್ಧಾರ ಕೈಗೊಂಡ ರಾಜ್ಯಪಾಲರಿಗೆ ಸಿಕ್ಕ ದೊಡ್ಡ ಜಯ ಎಂದು ಬಣ್ಣಿಸಿದ್ದಾರೆ.
ಸಿಎಂ ಸಿದ್ದರಾಮಯ್ಯನವರು ತಮ್ಮ ಪತ್ನಿ ಹೆಸರಿನಲ್ಲಿ ಅಕ್ರಮವಾಗಿ ಪಡೆದಿದ್ದ ಸೈಟುಗಳನ್ನು ವಾಪಸ್ಸು ನೀಡುವ ‘ದೊಡ್ದ’ ಮನಸ್ಸು ಮಾಡಿರುವುದು, ಸಂವಿಧಾನವನ್ನ ರಕ್ಷಿಸಲು ದಿಟ್ಟ ನಿರ್ಧಾರ ಕೈಗೊಂಡ ರಾಜ್ಯಪಾಲರಿಗೆ ಸಿಕ್ಕ ದೊಡ್ಡ ಜಯ. ರಾಜ್ಯಪಾಲರ ನಿರ್ಧಾರವನ್ನ ಎತ್ತಿ ಹಿಡಿದ ನ್ಯಾಯಾಂಗಕ್ಕೆ ಸಿಕ್ಕ ದೊಡ್ಡ ಜಯ. ಜಗ್ಗಲ್ಲ, ಬಗ್ಗಲ್ಲ ಎಂದು ಅಧಿಕಾರದ ಮದದಿಂದ ಮೆರೆಯುತ್ತಿದ್ದವರ ವಿರುದ್ಧ ಬಾಬಾಸಾಹೇಬ್ ಅಂಬೇಡ್ಕರರ ಸಂವಿಧಾನಕ್ಕೆ ಸಿಕ್ಕ ದೊಡ್ಡ ಜಯ ಎಂದು ಎಕ್ಸ್ ಸಂದೇಶದಲ್ಲಿ ಅಶೋಕ್ ಉಲ್ಲೇಖಿಸಿದ್ದಾರೆ.
ಈ ವಿಚಾರವಾಗಿ ಸೋಮವಾರ ರಾತ್ರಿ ಸಹ ಅಭಿಪ್ರಾಯ ವ್ಯಕ್ತಪಡಿಸಿದ್ದ ಅಶೋಕ್, ‘ಕೆಟ್ಟ ಮೇಲೆ ಬುದ್ಧಿ ಬಂತು’ ಎಂಬಂತೆ ಈಗಲಾದರೂ ಸಿದ್ದರಾಮಯ್ಯನವರಿಗೆ ತಮ್ಮ ತಪ್ಪಿನ ಅರಿವಾಯಿತಲ್ಲ ಎನ್ನುವುದು ಸಮಾಧಾನಕರ ವಿಷಯ. ‘ಅಡಿಕೆಗೆ ಹೋದ ಮಾನ, ಆನೆ ಕೊಟ್ಟರೂ ಬರುವುದಿಲ್ಲ’ ಸಿಎಂ ಸಿದ್ದರಾಮಯ್ಯನವರೇ, ತಾವು ತನಿಖೆ ಎದುರಿಸಲೇ ಬೇಕು. ರಾಜೀನಾಮೆ ನೀಡಬೇಕು ಎಂದಿದ್ದರು. ಮುಡಾ ನಿವೇಶಗಳನ್ನು ವಾಪಸ್ ನೀಡುವುದಾಗಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಸೋಮವಾರ ಪ್ರಾಧಿಕಾರಕ್ಕೆ ಪತ್ರ ಬರೆದಿದ್ದಾರೆ. ಇದರ ಬೆನ್ನಲ್ಲೇ ಬಿಜೆಪಿ ನಾಯಕರು ಪ್ರತಿಕ್ರಿಯೆ ನೀಡಿದ್ದಾರೆ.