ಬೆಂಗಳೂರು:
ಗುತ್ತಿಗೆದಾರರೊಬ್ಬರಿಗೆ ಜೀವ ಬೆದರಿಕೆ ಹಾಕಿ, ಜಾತಿ ನಿಂದನೆ ಮಾಡಿದ ಆರೋಪ ಮೇಲೆ ಬಂಧಿತರಾಗಿರುವ ಬಿಜೆಪಿ ಶಾಸಕ ಮುನಿರತ್ನ ನಾಯ್ಡು ಅವರನ್ನು ಒಂದು ದಿನ ನ್ಯಾಯಾಂಗ ಬಂಧನ ವಿಧಿಸಿ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಮಂಗಳವಾರ ಆದೇಶ ಹೊರಡಿಸಿದೆ .ಮುನಿರತ್ನ ಅವರ ಪೊಲೀಸ್ ಕಸ್ಟಡಿ ಅವಧಿ ಇಂದು ಅಂತ್ಯಗೊಂಡ ಹಿನ್ನೆಲೆಯಲ್ಲಿ ಆರೋಪಿಯನ್ನು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಗೆ ಹಾಜರುಪಡಿಸಲಾಯಿತು.
ಶಾಸಕ ಮುನಿರತ್ನ ಪರ ಹಿರಿಯ ವಕೀಲ ಅಶೋಕ್ ಹಾರನಳ್ಳಿ ಅವರು ವಾದ ಮಂಡಿಸಿದರು. ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್, ಮುನಿರತ್ನಗೆ ನ್ಯಾಯಾಂಗ ಬಂಧನ ವಿಧಿಸಿದೆ. ವಿಚಾರಣೆಯನ್ನು ನಾಳೆಗೆ ಮುಂದೂಡಿದೆ.
ತಿರುಪತಿಗೆ ಹೋಗುವಾಗ ಮುನಿರತ್ನ ಅವರನ್ನು ಬಂಧಿಸಿದ್ದಾರೆ. ವಿಚಾರಣೆಗೆ ನೋಟಿಸ್ ಕೂಡ ಕೊಟ್ಟಿಲ್ಲ. ಸುಪ್ರಿಂ ಕೋರ್ಟ್ ಆದೇಶದ ಪ್ರಕಾರ ನೋಟಿಸ್ ಕೊಡಬೇಕು. ತರಾತುರಿಯಲ್ಲಿ ಎಫ್‌ಐಆರ್ ದಾಖಲಿಸಿ ಬಂಧನ ಮಾಡಿದ್ದಾರೆ. 41 ಎ ನೋಟಿಸ್ ನೀಡಬೇಕು. ಇದೊಂದು ರಾಜಕೀಯ ಪ್ರೇರಿತ ಕೇಸ್ ಎಂದು ವಾದಿಸಿದರು.ಈ ಸಂಬಂಧ ನಾಳೆ ಆಕ್ಷೆಪಣೆ ಸಲ್ಲಿಕೆ ಮಾಡಲಿದ್ದು, ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ.ಸದ್ಯ ಮುನಿರತ್ನ ಅವರನ್ನು ಕೋರ್ಟ್‌ನಿಂದ ನೇರವಾಗಿ ಪರಪ್ಪನ ಅಗ್ರಹಾರ ಜೈಲಿಗೆ ಪೊಲೀಸರು ಕರೆದುಕೊಂಡು ಹೋದರು.