ನವದೆಹಲಿ:
ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚನೆ ಸಾಮಾನ್ಯವಾಗಿಬಿಟ್ಟಿದೆ. ಈ ವಂಚನೆಗೆ ಒಳಗಾಗಿ ಅಸಂಖ್ಯ ಮಂದಿ ಹಣವನ್ನು ಕಳೆದುಕೊಂಡಿದ್ದಾರೆ.
ಇದೀಗ ವಾಟ್ಸ್ಆಯಪ್ ಕರೆಗಳು ಮತ್ತು ಸಂದೇಶಗಳ ಮೂಲಕ ವಂಚನೆಯ ಜಾಲ ಶುರುವಾಗಿದ್ದು, ಗ್ರಾಹಕರು ಎಚ್ಚರಿಕೆಯಿಂದ ಇರಬೇಕು ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ಹೇಳಿದೆ.ಅಪರಿಚಿತ ವಾಟ್ಸ್ಆಯಪ್ ಕರೆಗಳು ಮತ್ತು ಸಂದೇಶಗಳಲ್ಲಿ ಏನಾದರೂ ಮಾಹಿತಿ ಕೇಳಿದರೆ ನೀಡಬೇಡಿ. ಬ್ಯಾಂಕ್ನವರು ಎಂದು ಹೇಳಿಕೊಂಡು ಕರೆ ಮಾಡಲಾಗುತ್ತದೆ. ಆದರೆ ಅವರು ಯಾವುದೇ ಮಾಹಿತಿ ನೀಡಿದರೂ ಅದನ್ನು ಕೊಡಬೇಡಿ ಎಂದು ಎಚ್ಚರಿಸಿದೆ.
3 ತಿಂಗಳಲ್ಲಿ ಡೆಬಿಟ್/ಕ್ರೆಡಿಟ್ ಕಾರ್ಡ್ ಮೂಲಕ ನೂರಾರು ಕೋಟಿ ರೂಪಾಯಿ ವಂಚನೆಯಾಗಿದೆ. ಇದೀಗ ಗ್ರಾಹಕರು ಎಚ್ಚೆತ್ತುಕೊಂಡಿರುವ ಹಿನ್ನೆಲೆಯಲ್ಲಿ ವಾಟ್ಸ್ಆಯಪ್ ಮೂಲಕ ಗುರಿ ಮಾಡಿಕೊಳ್ಳಲು ಶುರು ಮಾಡಲಾಗಿದೆ. ಸೈಬರ್ ಕ್ರಿಮಿನಲ್ಗಳು ನಿಮ್ಮನ್ನು ಮೂರ್ಖರನ್ನಾಗಿ ಮಾಡಲು ಅವಕಾಶ ನೀಡಬೇಡಿ, ಜಾಗೃತರಾಗಿರಿ ಹಾಗೂ ಎಚ್ಚರಿಕೆಯಿಂದ ಇರಿ ಎಂದು ಎಸ್ಬಿಐ ತನ್ನ ಟ್ವಿಟರ್ನಲ್ಲಿ ಹೇಳಿದೆ.
ಆನ್ಲೈನ್ ಬ್ಯಾಂಕಿಂಗ್ ವಹಿವಾಟು ಹೆಚ್ಚುತ್ತಿರುವ ನಡುವೆಯೇ ವಂಚನೆಯೂ ಹೆಚ್ಚಾಗುತ್ತಿದೆ. ವಂಚಕರು ಕಳಿಸುವ ಇ-ಮೇಲ್ಗಳು ಥೇಟ್ ಬ್ಯಾಂಕ್ ಅಧಿಕಾರಿಗಳ ಇ-ಮೇಲ್ನಂತೆಯೇ ಇರುತ್ತವೆ. ಎಚ್ಚರ ಇರಲಿ. ಬ್ಯಾಂಕ್ನಿಂದ ಯಾವುದೇ ಕಾರಣಕ್ಕೂ ವೈಯಕ್ತಿಕ ವಿವರ, ಖಾತೆ ಮಾಹಿತಿ ಕೇಳುವುದಿಲ್ಲ. ಆದ್ದರಿಂದ ಅದನ್ನು ಕೇಳಿದರೆ ದಯವಿಟ್ಟು ನೀಡಬೇಡಿ ಎಂದು ಎಚ್ಚರಿಕೆ ನೀಡಿದೆ.
ನಮ್ಮ ಬ್ಯಾಂಕ್ ಹೆಸರಿನಲ್ಲಿ ಬರುವ ಇ-ಮೇಲ್ಗಳನ್ನು ಕ್ಲಿಕ್ ಮಾಡಬೇಡಿ. ವಾಟ್ಸ್ಆಯಪ್ನಲ್ಲಿ ಲಿಂಕ್ ಬಂದರೆ ಕೂಡಲೇ ಡಿಲೀಟ್ ಮಾಡಿ, ಕ್ಲಿಕ್ ಮಾಡಲು ಹೋದರೆ ನಿಮ್ಮ ಖಾತೆ ಹ್ಯಾಕ್ ಆಗಬಹುದು. ನಮ್ಮಲ್ಲಿ ಯಾವುದೇ ಲಾಟರಿ ಸ್ಕೀಮ್ ಇಲ್ಲ. ಲಾಟರಿ ಯೋಜನೆ ಅಥವಾ ಅದೃಷ್ಟವಂತ ಗ್ರಾಹಕರಿಗೆ ಕೊಡುಗೆ ನೀಡುವುದಿಲ್ಲ. ಆದ್ದರಿಂದ ಬ್ಯಾಂಕ್ ಹೆಸರಿನಲ್ಲಿ ಆಫರ್, ಲಾಟರಿ ಎಂದೆಲ್ಲಾ ಸಂದೇಶ ಬಂದರೆ ಅದನ್ನು ನಂಬಬೇಡಿ ಎಂದಿದೆ.
ಒಂದು ವೇಳೆ ಬ್ಯಾಂಕ್ ಕಡೆಯಿಂದ ತಪ್ಪಾಗಿ, ಗ್ರಾಹಕರಿಗೆ ವಂಚನೆ ಆದಲ್ಲಿ ಪರಿಹಾರ ದೊರೆಯುತ್ತದೆ.ಆದರೆ ಗ್ರಾಹಕರ ನಿರ್ಲಕ್ಷ್ಯದಿಂದ ನಷ್ಟವಾದಲ್ಲಿ ಪರಿಹಾರ ಸಿಗುವುದಿಲ್ಲ ಎಂದೂ ಬ್ಯಾಂಕ್ ಎಚ್ಚರಿಕೆ ನೀಡಿದೆ.








