6ನೇ ಹಂತದ ಚುನಾವಣೆ: ಶೇ.55 ರಷ್ಟು ಮತದಾನ

ಲಖನೌ

     ಉತ್ತರ ಪ್ರದೇಶದ ಪೂರ್ವಾಂಚಲ ಭಾಗದ 14 ಲೋಕಸಭಾ ಕ್ಷೇತ್ರಗಳಿಗೆ ಭಾನುವಾರ ನಡೆದ 6ನೇ ಚುನಾವಣೆಯಲ್ಲಿ 2.57 ಕೋಟಿ ಮತದಾರರ ಪೈಕಿ ಶೇ. 55 ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದು, ಮತದಾನ ಬಹುತೇಕ ಶಾಂತಿಯುತವಾಗಿ ಅಂತ್ಯಗೊಂಡಿದೆ.13 ಮಹಿಳೆಯರು ಸೇರಿದಂತೆ 177 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಮತಯಂತ್ರಗಳಲ್ಲಿ ಭದ್ರವಾಗಿದೆ.

      ಕೇಂದ್ರ ಸಚಿವ ಮೇನಕಾ ಗಾಂಧಿ (ಸುಲ್ತಾನ್‍ಪುರ್), ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ (ಅಜಾಂಘಡ್) ಹಾಗೂ  ಉತ್ತರ ಪ್ರದೇಶದ ಕ್ಯಾಬಿನೆಟ್ ಸಚಿವರಾದ ರೀಟಾ ಬಹುಗುಣ ಜೋಶಿ (ಅಲಹಾಬಾದ್) ಅವರ ರಾಜಕೀಯ ಭವಿಷ್ಯ ಈ ಹಂತದಲ್ಲಿ ನಿರ್ಧಾರವಾಗಲಿದೆ.

    ಅಜಾಂಘಡ್‍ ನಲ್ಲಿ ಭೋಜ್‍ಪುರಿ ನಟ ದಿನೇಶ್ ಲಾಲ್ ಯಾದವ್ ಅವರು ಅಖಿಲೇಶ್ ಯಾದವ್ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಕಾಂಗ್ರೆಸ್ ತನ್ನ ಹಳೆಯ ಯುದ್ಧ ಕುದುರೆ ಡಾ. ಸಂಜಯ್ ಸಿಂಗ್ ಅವರನ್ನು ಸುಲ್ತಾನ್‍ಪುರ್ ನಲ್ಲಿ  ಕೇಂದ್ರ ಸಚಿವ ಮೇನೇಕಾ ಗಾಂಧಿ ವಿರುದ್ಧ ಕಣಕ್ಕಿಳಿಸಿದೆ.

   ಮತದಾನ ಸಂಜೆ ಸುಮಾರು 6 ಗಂಟೆಗೆ ಕೊನೆಗೊಂಡಿದೆ. ಪ್ರಾಥಮಿಕ ಅಂದಾಜಿನಂತೆ ಶೇ. 55 ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ. ಆದರೂ, ಮತದಾರರು ಅವಧಿ ಮುಗಿದ ನಂತರವೂ ಸರತಿ ಸಾಲಿನಲ್ಲಿ ನಿಂತಿದ್ದರಿಂದ  ಮತದಾನದ ಶೇಕಡಾವಾರು ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ.ಬೆಳಿಗ್ಗೆ  ಚುರುಕಾಗಿ  ಆರಂಭಗೊಂಡ ಮತದಾನ ಮಧ್ಯಾಹ್ನ ತೀವ್ರ ಸೆಖೆಯಿಂದ ಮಂದಗತಿಯಲ್ಲಿ ಸಾಗಿತ್ತು.

   ಜೋನ್‍ಪುರ್ ಮತ್ತು ಸುಲ್ತಾನ್‍ಪುರ್ ನಲ್ಲಿ ಕೆಲ ಘಟನೆಗಳನ್ನು ಹೊರತುಪಡಿಸಿ ಮತದಾನ ಬಹುತೇಕ ಶಾಂತಿಯುತವಾಗಿತ್ತು ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.

    ಮತದಾನ ಶೇಕಡಾವಾರು ಪ್ರಮಾಣ ಬೆಳಿಗ್ಗೆ 9 ಗಂಟೆ ವೇಳೆಗೆ ಶೇ. 9.25,  11 ಗಂಟೆಗೆ ಶೇ. 21.98, ಮಧ್ಯಾಹ್ನ 1 ಗಂಟೆಗೆ ಶೇ.34.92 ಹಾಗೂ ಸಂಜೆ 3 ಗಂಟೆಗೆ ಶೇ.43.35ರಷ್ಟು ಮತದಾನವಾಗಿತ್ತು.

   2014 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಜಾಮ್‍ಗಢ ಹೊರತುಪಡಿಸಿ ಈ ಹಂತದಲ್ಲಿ ಚುನಾವಣೆ ನಡೆಯುತ್ತಿರುವ ಎಲ್ಲ ಸ್ಥಾನಗಳನ್ನು ಗೆದ್ದುಕೊಂಡಿತ್ತು. ಕಳೆದ ಬಾರಿ ಎಸ್‍ಪಿ ವರಿಷ್ಠ ಅಧ್ಯಕ್ಷ ಮುಲಾಯಂ ಸಿಂಗ್ ಯಾದವ್,  ಬಿಜೆಪಿಯ ರಾಮಕಾಂತ್ ಯಾದವ್ ಅವರನ್ನು ಸೋಲಿಸಿ ಆಯ್ಕೆಯಾಗಿದ್ದರು. ಆದರೆ ಈ ಬಾರಿ, ಮುಲಾಯಂ ಸಿಂಗ್‍ ಅವರು ಮೈನ್‍ಪುರಿಯಿಂದ ಸ್ಪರ್ಧಿಸುತ್ತಿದ್ದಾರೆ.  ಅವರ ಪುತ್ರ ಮತ್ತು ಎಸ್‍ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಅಜಾಂಘಡದಿಂದ ಸ್ಪರ್ಧಿಸುತ್ತಿದ್ದಾರೆ.ಆದರೂ, ಫುಲ್‍ಪುರ ಕ್ಷೇತ್ರದ ಉಪ ಚುನಾವಣೆಯಲ್ಲಿ ಎಸ್‍ ಪಿ  ಅಭ್ಯರ್ಥಿ  ವಿರುದ್ಧ ಬಿಜೆಪಿ ಅಭ್ಯರ್ಥಿ ಸೋಲನುಭವಿಸಿದ್ದರು.

    ಜಾನ್‍ಪುರದಲ್ಲಿ ಬಿಜೆಪಿ ಬೆಂಬಲಿಗರು ಮತ್ತು ಪೋಲೀಸರ ನಡುವೆ ಘರ್ಷಣೆ ನಡೆದಿದೆ.ಶಹಗಂಜ್ ಪ್ರದೇಶದಲ್ಲಿ ಬೆಳಿಗ್ಗೆ 369 ನೇ ಮತಗಟ್ಟೆ ಬಳಿ ಬಿಜೆಪಿ ಧ್ವಜದಿಂದ ಪೊಲೀಸ್‍ ಕಾನ್‍ಸ್ಟೇಬಲ್‍ ಒಬ್ಬರು ಶೂ ಒರೆಸಿಕೊಳ್ಳುತ್ತಿದ್ದಾರೆಂದು ಆಕ್ಷೇಪಿಸಿ, ಬಿಜೆಪಿ ಕಾರ್ಯಕರ್ತರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಈ ವೇಳೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದು, ಘಟನೆಯಲ್ಲಿ ಯಾರೊಬ್ಬರೂ ಗಾಯಗೊಂಡಿಲ್ಲ.  ಹೆಚ್ಚಿನ ಭದ್ರತಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದರಿಂದ ನಂತರ ಮತದಾನ ಸುಗಮವಾಗಿ ನಡೆದಿದೆ ಎಂದು ವರದಿಯಾಗಿದೆ.

   ಅಂಬೇಡ್ಕರ್ ನಗರ ಲೋಕಸಭಾ ಕ್ಷೇತ್ರದ ಅಯೋಧ್ಯಾ ಜಿಲ್ಲೆಯ ಬಿಕಾರ್ ಪುರ್ ಪ್ರದೇಶದಲ್ಲಿ ತಹಸೀಲ್ದಾರ್ ದಿಗ್ವಿಜಯ್ ಸಿಂಗ್ ಮತಗಟ್ಟೆ ಸಿಬ್ಬಂದಿಯೊಬ್ಬರಿಗೆ ಕಪಾಳಮೋಕ್ಷ ಮಾಡಿದ್ದಾರೆಂದು ಸಿಬ್ಬಂದಿ ಪ್ರತಿಭಟನೆ ನಡೆಸಿದ್ದಾರೆ. ಸಂತ್ ಕಬೀರ್ ನಗರ ಲೋಕಸಭಾ ಕ್ಷೇತ್ರದ ಮತಗಟ್ಟೆಯೊಂದರಲ್ಲಿ ಭದ್ರತಾ ಸಿಬ್ಬಂದಿಯೊಬ್ಬರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆದ ಬಗ್ಗೆ ವರದಿಯಾಗಿದೆ.

   ಸುಲ್ತಾನ್‍ಪುರ್ ನಲ್ಲಿ ಬಿಜೆಪಿ ಅಭ್ಯರ್ಥಿ ಹಾಗೂ ಕೇಂದ್ರ ಸಚಿವೆ ಮೇನಕಾ ಗಾಂಧಿ ಹಾಗೂ  ಬಿಎಸ್‍ಪಿ ಅಭ್ಯರ್ಥಿ ಸೋನು ಸಿಂಗ್ ಅವರೊಂದಿಗೆ ಮತಗಟ್ಟೆಯೊಂದರ ಹೊರಗೆ ವಾಗ್ವಾದ ನಡೆಸಿದ್ದಾರೆ ಎಂದು ವರದಿಯಾಗಿದೆ. ಸೋನು ಸಿಂಗ್‍ ಅವರು ಮತದಾರರಿಗೆ ಬೆದರಿಕೆಯೊಡ್ಡಿದ್ದಾರೆ ಎಂದು ಮೇನಕಾ ಗಾಂಧಿ ಆರೋಪಿಸಿದ್ದಾರೆ. ಆದರೆ ಸೋನು ಸಿಂಗ್ ಈ ಆರೋಪಗಳನ್ನು ನಿರಾಕರಿಸಿದ್ದು,  ತಮ್ಮ ಸ್ವಂತ ಗ್ರಾಮದ ಜನರು ತಮ್ಮನ್ನು ಬೆಂಬಲಿಸುತ್ತಿದ್ದಾರೆಂದು ಹೇಳಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap