ನವದೆಹಲಿ:
ದೇಶದಲ್ಲಿ ಸಂಚಲನ ಮೂಡಿಸಿದ್ದ ಹೈದರಾಬಾದ್ ಪಶುವೈದ್ಯೆ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಸಲಾಗಿದ್ದ ಪೊಲೀಸ್ ಎನ್ ಕೌಂಟರ್ ಕುರಿತಾದ ತನಿಖೆಗಾಗಿ ಸುಪ್ರೀಂ ಕೋರ್ಟ್ ಮೂವರು ಸದಸ್ಯರನ್ನೊಳಗೊಂಡ ವಿಚಾರಣಾ ಆಯೋಗವನ್ನು ನೇಮಕ ಮಾಡಿ ಆದೇಶ ನೀಡಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಅವರ ನೇತೃತ್ವದ ನ್ಯಾಯಪೀಠ, ಈ ತನಿಖಾ ಆಯೋಗ ನೇಮಕ ಮಾಡಿದ್ದು ಇದರಲ್ಲಿ ನಿವೃತ್ತ ನ್ಯಾಯಾಧೀಶ ವಿ.ಎಸ್. ಸಿರ್ಪುರ್ಕರ್, ನಿವೃತ್ತ ಬಾಂಬೆ ಹೈಕೋರ್ಟ್ ನ್ಯಾಯಾಧೀಶ ರೇಖಾ ಬಲ್ಡೋಟಾ ಮತ್ತು ಸಿಬಿಐನ ಮಾಜಿ ನಿರ್ದೇಶಕ ಕಾರ್ತಿಕೇಯನ್ ಆಯೋಗದ ಸದಸ್ಯರಾಗಿದ್ದಾರೆ.
ತೆಲಂಗಾಣ ಸರ್ಕಾರ ಪ್ರತಿನಿಧಿಸಿದ್ದ ಮಾಜಿ ಅಟಾರ್ನಿ ಜನರಲ್ ಮುಕುಲ್ ರೋಹಟ್ಗಿ ಅವರಿಗೆ ಘಟನೆಯ ಕುರಿತ ಅಂಶಗಳ ವಿಚಾರಣೆಯ ಅಗತ್ಯವಿದೆ ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದ್ದಾರೆ. ಆಯೋಗವು ಆರು ತಿಂಗಳಲ್ಲಿ ತನ್ನ ವಿಚಾರಣೆ ಪೂರ್ಣಗೊಳಿಸಬೇಕು ಎಂದೂ ಉನ್ನತ ನ್ಯಾಯಾಲಯ ಹೇಳಿದೆ. ವಕೀಲ ಜಿ ಎಸ್ ಮಣಿ ಮತ್ತು ಇತರರು ಸಲ್ಲಿಸಿದ್ದ ಮನವಿಯ ವಿಚಾರಣೆ ನಂತರ ಕೋರ್ಟ್ ಆದೇಶ ನೀಡಿದೆ.