ನವದೆಹಲಿ
ಭಾರತದಲ್ಲಿ ಸದ್ಯ ಇರುವ ಲಾಕ್ ಡೌನ್ ಮತ್ತು ಕೊರೋನಾ ಸಮಸ್ಯೆ, ಇದರ ಹೊರತಾಗಿಯೂ ಸಾಮಾನ್ಯವಾಗಿ 4 ಚಕ್ರದ ವಾಹನಗಳು ಅದರಲ್ಲೂ ಕಾರುಗಳನ್ನು ಮನೆಯಿಂದ ಹೊರಗಡೆ ತೆಗೆಯುವವರೆ ವಿರಳವಾಗಿದ್ದಾರೆ. ನಿಮ್ಮ ವಾಹನದ ವಾರ್ಷಿಕ ವಿಮೆ ಮುಗಿದಿದ್ದು ಮಾಡಿಸುವ ಮನಸ್ಸಿದ್ದು ಸರಿಯಾದ ಪಾಲಿಸಿ ಹುಡುಕಾಟದಲ್ಲಿ ನೀವಿದ್ದರೆ ಈ ಲೇಖನ ನಿಮಗೆ ಉಪಯೋಗಕ್ಕೆ ಬರುತ್ತದೆ.
ಭಾರತಿ ಆಕ್ಸಾ ಜನರಲ್ ಇನ್ಶುರೆನ್ಸ್ ಕಂಪನಿಯು ಬುಧವಾರ ಆನ್‍ಲೈನ್ ವಿಮಾ ಸೇವಾ ಕಂಪನಿಯಾದ ಪಾಲಿಸಿಬಜಾರ್.ಕಾಂ ಜೊತೆಗೆ ಖಾಸಗಿ ಕಾರು ವಿಮಾ ಕ್ಷೇತ್ರದಲ್ಲಿ ಪಾಲುದಾರಿಕೆಯನ್ನು ಮಾಡಿಕೊಂಡಿದೆ. ಈ ಸಹಭಾಗಿತ್ವದಿಂದಾಗಿ ಕಾರನ್ನು ನೀವು ಎಷ್ಟು ಬಳಸುತ್ತೀರೋ ಅದರ ಆಧಾರದ ಮೇಲೆ ಗ್ರಾಹಕರು ವಿಮಾ ಕಂತುಗಳನ್ನು ಪಾವತಿಸಬಹುದು.
ಈ ಯೋಜನೆಗೆ ಪೇ ಆಸ್ ಯೂ ಯೂಸ್ ಅಂದರೆ ಚಾಲನೆ ಮಾಡಿದಷ್ಟು ಪಾವತಿಸಿ ಎಂದು ಹೆಸರಿಡಲಾಗಿದೆ. ಈ ಯೋಜನೆಯಿಂದಾಗಿ ತಮ್ಮ ಕಾರನ್ನು ಅಪರೂಪಕ್ಕೆ ಬಳಸುವವರಿಗೆ ಅಥವಾ ಒಂದಕ್ಕಿಂತ ಹೆಚ್ಚು ಕಾರುಗಳನ್ನು ಹೊಂದಿರುವವರಿಗೆ ಅನುಕೂಲವಾಗಲಿದೆ. ಈ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳುವ ಗ್ರಾಹಕರು ಒಂದು ವರ್ಷದಲ್ಲಿ ಎಷ್ಟು ಕಿ.ಮೀ ಕಾರನ್ನು ಚಲಾಯಿಸಲಾಗುತ್ತದೆ ಎಂಬುದನ್ನು ಹೇಳಬೇಕು.
ಗ್ರಾಹಕರು ಹೇಳುವ ಅಂದಾಜು ಬಳಕೆಯ ಆಧಾರದ ಮೇಲೆ ವಿಮಾ ಪ್ರೀಮಿಯಂ ಅನ್ನು ನಿರ್ಧರಿಸಲಾಗುತ್ತದೆ. ಗ್ರಾಹಕರು ತಮ್ಮ ಬಳಕೆಯ ಅಗತ್ಯಗಳಿಗೆ ಅನುಗುಣವಾಗಿ 2,500 ಕಿ.ಮೀ, 5,000 ಕಿ.ಮೀ ಹಾಗೂ 7,500 ಕಿ.ಮೀ ಎಂಬ ಮೂರು ಸ್ಲಾಬ್‍ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಭಾರತಿ ಆಕ್ಸಾ ಇನ್ಶುರೆನ್ಸ್‍ನ ಸಿಇಒ ಸಂಜೀವ್ ಶ್ರೀನಿವಾಸನ್‍ರವರು ಮಾತನಾಡಿ, ಲಾಕ್‍ಡೌನ್ ಸಮಯದಲ್ಲಿ ವಾಹನ ಬಳಕೆಯನ್ನು ಆಧರಿಸಿದ ವಿಮಾ ಪಾಲಿಸಿಯು ಬಹಳ ಮುಖ್ಯವಾದುದಾಗಿದೆ ಎಂದು ಹೇಳಿದರು.
ಈ ರೀತಿಯ ಪಾಲಿಸಿಯೊಂದಿಗೆ, ಕಾರನ್ನು ಕಡಿಮೆ ಬಳಸುವ ಜನರು ಸಾಕಷ್ಟು ಹಣವನ್ನು ಉಳಿಸಬಹುದು. ಈ ಯೋಜನೆಯನ್ನು ತೆಗೆದುಕೊಳ್ಳಲು ಬಯಸುವ ಗ್ರಾಹಕರು ಮೂರು ಪ್ರೀಮಿಯಂ ಸ್ಲಾಬ್‍ಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕು. ಜೊತೆಗೆ ಕಾರಿನ ಓಡೋಮೀಟರ್‍ನಲ್ಲಿರುವ ರೀಡಿಂಗ್ ಹಾಗೂ ಕೆವೈಸಿ ಮಾಹಿತಿಗಳನ್ನು ನೀಡಬೇಕು. ಈ ಯೋಜನೆಯು ಒಂದು ವರ್ಷದವರೆಗೆ ಜಾರಿಯಲ್ಲಿರುತ್ತದೆ. ಸ್ಟಾಂಡರ್ಡ್ ಪಾಲಿಸಿಯಲ್ಲಿ ನೀಡಲಾಗುವ ಎಲ್ಲಾ ಸೌಲಭ್ಯಗಳನ್ನು ಈ ಪಾಲಿಸಿಯಲ್ಲಿಯೂ ನೀಡಲಾಗುತ್ತದೆ. ಯಾವುದೇ ಸಮಯದಲ್ಲಿ ಸ್ಲಾಬ್‍ಗಳನ್ನು ಬದಲಿಸುವ ಆಯ್ಕೆಯನ್ನು ಗ್ರಾಹಕರಿಗೆ ನೀಡಲಾಗುವುದು.
ಈ ವಾಹನ ವಿಮಾ ಪಾಲಿಸಿಗೆ ವಿಮಾ ನಿಯಂತ್ರಣ ಹಾಗೂ ಅಭಿವೃದ್ಧಿ ಪ್ರಾಧಿಕಾರವು (ಐಆರ್‍ಡಿಎಐ) ಅನುಮೋದನೆಯನ್ನು ನೀಡಿದೆ. ಈ ಯೋಜನೆಯಿಂದ ಕಾರ್ ಅನ್ನು ಕಡಿಮೆ ಬಳಸುವವರಿಗೆ ಪ್ರಯೋಜನವಾಗಲಿದೆ. ಕಸ್ಟಮೈಸ್ ಮಾಡಿದ ಮತ್ತು ಉಪಯುಕ್ತತೆ ಆಧಾರಿತ ಪಾಲಿಸಿಗಳು ಯಶಸ್ವಿಯಾಗಿ ಮುಖ್ಯವಾಹಿನಿಯಾಗುವವರೆಗೆ ನಿಯಮಿತ ಮೋಟಾರು ವಿಮಾ ಪಾಲಿಸಿಗಳ ಪ್ರಯೋಜನ ಪಡೆಯುವುದು ಸೂಕ್ತ ಎಂದು ಪಿಯೂಷ್ ಗೋಯಲ್ ಹೇಳಿದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








